ಜನಪ್ರತಿನಿಧಿಗಳ ವಿರುದ್ಧದ 2,018 ಕ್ರಿಮಿನಲ್ ಮೊಕದ್ದಮೆ ತೀರ್ಮಾನ
x

ಜನಪ್ರತಿನಿಧಿಗಳ ವಿರುದ್ಧದ 2,018 ಕ್ರಿಮಿನಲ್ ಮೊಕದ್ದಮೆ ತೀರ್ಮಾನ

ಅಮಿಕಸ್ ಕ್ಯೂರಿ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರಿಂದ ಪ್ರಮಾಣಪತ್ರ ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಕೆ


ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ನೇಮಿಸಿದ ವಿಶೇಷ ನ್ಯಾಯಾಲಯಗಳು 2023 ರಲ್ಲಿ 2,000 ಕ್ಕೂ ಹೆಚ್ಚು ಪ್ರಕರಣಗಳನ್ನು ತೀರ್ಮಾನಿಸಿವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ಸಂಸದರು/ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ವಿಲೇವಾರಿ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಬಾಕಿ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ತನಿಖೆಗೆ ಹೆಚ್ಚಿನ ನಿರ್ದೇಶನಗಳ ಅಗತ್ಯವಿದೆ. ಮೊದಲ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಮೇಲೆ 501 ಕ್ರಿಮಿನಲ್ ಮೊಕದ್ದಮೆಗಳಿವೆ.

ಶೇ.18 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣ: ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಸಂಘಟನೆಯ ವರದಿ ಪ್ರಕಾರ, 2,810 ಅಭ್ಯರ್ಥಿ (ಹಂತ 1 - 1618 ಮತ್ತು ಹಂತ 2 - 1,192 ಅಭ್ಯರ್ಥಿಗಳು)ಗಳಲ್ಲಿ 501 (ಶೇ. 18) ಮಂದಿ ಕ್ರಿಮಿನಲ್ ಮೊಕದ್ದಮೆ ಹೊಂದಿದ್ದಾರೆ; ಇದರಲ್ಲಿ 327 (ಶೇ. 12) ಗಂಭೀರ ಕ್ರಿಮಿನಲ್ ಮೊಕದ್ದಮೆ(5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯೊಂದಿಗೆ ದಂಡನೀಯ)ಗಳಿವೆ.

ಶೇ. 44% ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣ: ʻ2019ರ ಲೋಕಸಭೆ ಚುನಾವಣೆಯ 7,928 ಅಭ್ಯರ್ಥಿಗಳ ಪೈಕಿ 1,500 ಅಭ್ಯರ್ಥಿಗಳು (ಶೇ. 19) ಕ್ರಿಮಿನಲ್ ಪ್ರಕರಣ ಹೊಂದಿದ್ದರು. 1,070 ಅಭ್ಯರ್ಥಿ (ಶೇ 13)ಗಳ ಮೇಳೆ ಗಂಭೀರ ಕ್ರಿಮಿನಲ್ ಪ್ರಕರಣವಿತ್ತು. 514 ಮಂದಿ ಚುನಾಯಿತರಲ್ಲಿ 225 ಸದಸ್ಯ(ಶೇ 44)ರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದವು. ʻಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದಾರೆ. ಹೈಕೋರ್ಟ್‌ಗಳು ವಿಚಾರಣೆ ಮತ್ತು ತನಿಖೆಗೆ ಆದೇಶ ನೀಡಬೇಕಿದೆ,ʼ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ದೀರ್ಘ ಕಾಲದಿಂದ ಬಾಕಿ ಉಳಿದ ಪ್ರಕರಣಗಳು: ಶಾಸಕರ ವಿರುದ್ಧದ ಮೊಕದ್ದಮೆಗಳ ತ್ವರಿತ ವಿಲೇವಾರಿಗಾಗಿ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೆ ಸಹಾಯ ಮಾಡಲು ನೇಮಕಗೊಂಡಿರುವ ಹಂಸಾರಿಯಾ,ʻ2023 ರಲ್ಲಿ 2,000 ಕ್ಕೂ ಹೆಚ್ಚು ಪ್ರಕರಣಗಳನ್ನು ತೀರ್ಮಾನಿಸಲಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ ಮತ್ತು ಅವುಗಳಲ್ಲಿ ಹಲವು ದೀರ್ಘಾವಧಿಯಿಂದ ಇವೆ.ʼ

ಯುಪಿಯಲ್ಲಿ ಗರಿಷ್ಠ ಪ್ರಕರಣ: ಜನವರಿ 1, 2023 ರಂತೆ 1,300 ರಲ್ಲಿ 766 ಪ್ರಕರಣಗಳಲ್ಲಿ ಉತ್ತರ ಪ್ರದೇಶದ ವಿಶೇಷ ನ್ಯಾಯಾಲಯಗಳು ತೀರ್ಪು ನೀಡಿವೆ. ದೆಹಲಿ ಡಿಸೆಂಬರ್ 31, 2023 ರ ವೇಳೆಗೆ 105ರಲ್ಲಿ 103, ಮಹಾರಾಷ್ಟ್ರ 476 ಪ್ರಕರಣಗಳಲ್ಲಿ 232, ಪಶ್ಚಿಮ ಬಂಗಾಳ 26 ರಲ್ಲಿ 13, ಗುಜರಾತ್ 48 ರಲ್ಲಿ 30, ಕರ್ನಾಟಕ 226 ರಲ್ಲಿ 150, ಕೇರಳ 132 ರಲ್ಲಿ 370, ಮತ್ತು ಬಿಹಾರ 525 ಪ್ರಕರಣಗಳಲ್ಲಿ 171 ಪ್ರಕರಣ ಗಳನ್ನು ತೀರ್ಪು ನೀಡಿವೆ.

ಮಾದರಿ ವೆಬ್‌ಸೈಟ್‌ಗೆ ವಿನಂತಿ: ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಯ ಪ್ರಗತಿ ಕುರಿತ ಮಾಹಿತಿ ಅಪ್‌ಲೋಡ್ ಮಾಡಲು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಮಾದರಿಯಲ್ಲಿ ಮಾದರಿ ವೆಬ್‌ಸೈಟ್ ರಚಿಸಲು ಅವರು ಸುಪ್ರೀಂ ಕೋರ್ಟ್‌ಗೆ ನಿರ್ದೇಶನ ಕೋರಿದರು.2023 ನವೆಂಬರ್ 9 ರಂದು ಶಾಸಕರ ವಿರುದ್ಧದ 5,000 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ಪೀಠವನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳಿಗೆ ಸೂಚಿಸಿತ್ತು.

Read More
Next Story