18ನೇ ಲೋಕಸಭೆ | ಜೂ15 ರಂದು ಮೊದಲ ಅಧಿವೇಶನ ಆರಂಭ ಸಾಧ್ಯತೆ
x
NDA ಸಂಸದೀಯ ಪಕ್ಷದ ಸಭೆಯಲ್ಲಿ ಮಿತ್ರಪಕ್ಷಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ.

18ನೇ ಲೋಕಸಭೆ | ಜೂ15 ರಂದು ಮೊದಲ ಅಧಿವೇಶನ ಆರಂಭ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಭಾನುವಾರ ಸಂಜೆ 7:15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.


Click the Play button to hear this message in audio format

ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಭಾನುವಾರ (ಜೂ.9) ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, 18 ನೇ ಲೋಕಸಭೆಯ ಮೊದಲ ಅಧಿವೇಶನ ಜೂ.15 ರಂದು ಆರಂಭವಾಗುವ ಸಾಧ್ಯತೆ ಇದೆ.

ಲೊಕಸಭೆಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದೊಂದಿಗೆ ಜೂನ್ ಮೂರನೇ ವಾರದಲ್ಲಿ ಮೊದಲ ಅಧಿವೇಶನ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಕಾಲ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ನಂತರ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ಮರುದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ, ಅಧಿವೇಶನವನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧಿವೇಶನದ ದಿನಾಂಕಗಳ ಬಗ್ಗೆ ಹೊಸ ಕೇಂದ್ರ ಸಚಿವ ಸಂಪುಟ ನಿಗದಿಪಡಿಸುತ್ತದೆ. ಈ ಅಧಿವೇಶನದ ವೇಳೆ ಪ್ರಧಾನಿ ಮೋದಿ ಅವರು ತಮ್ಮ ಸಚಿವ ಸಂಪುಟದ ಸದಸ್ಯರನ್ನು ಉಭಯ ಸದನಗಳಿಗೆ ಪರಿಚಯಿಸಲಿದ್ದಾರೆ. ಈ ಅಧಿವೇಶನ ಜೂ.22ಕ್ಕೆ ಮುಕ್ತಾಯವಾಗುವ ಸಾಧ್ಯತೆ ಇದೆ.

ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಸಲಹೆಯ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 17ನೇ ಲೋಕಸಭೆಯನ್ನು ಜೂ.5 ರಂದು ವಿಸರ್ಜಿಸಿದ್ದಾರೆ. ಎನ್​ಡಿಎ ಒಕ್ಕೂಟ ಸಭೆ ನಡೆಸಿದ್ದು, ನರೇಂದ್ರ ಮೋದಿಯವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಇನ್ನು ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಆಯ್ಕೆಯಾಗಿರುವ ಪತ್ರವನ್ನು ಬಿಜೆಪಿ ಮುಖ್ಯಸ್ಥ ಜೆ ಪಿ ನಡ್ಡಾ ಅವರಿಗೆ ರಾಷ್ಟ್ರಪತಿಯವರು ಹಸ್ತಾಂತರಿಸಿ ಶುಕ್ರವಾರ (ಜೂ. 8) ಮೋದಿ ಅವರನ್ನು ನಿಯೋಜಿತ ಪ್ರಧಾನಿಯಾಗಿ ನೇಮಿಸಿದರು. ಎನ್‌ಡಿಎ ನಾಯಕರು ಇದಕ್ಕೆ ಬೆಂಬಲ ಪತ್ರವನ್ನು ಸಲ್ಲಿಸಿದರು.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ 543 ಸದಸ್ಯರ ಲೋಕಸಭೆ ಕ್ಷೇತ್ರಗಳಲ್ಲಿ ಎನ್‌ಡಿಎ 293 ಸ್ಥಾನಗಳನ್ನು ಗೆದ್ದಿದ್ದರೆ, ವಿರೋಧ ಪಕ್ಷವಾದ ಇಂಡಿಯಾ ಬ್ಲಾಕ್ 232 ಸ್ಥಾನಗಳನ್ನು ಹೊಂದಿದೆ. ಕೇಂದ್ರದಲ್ಲಿ ಸರ್ಕಾರ ರಚಿಸಲು ಕನಿಷ್ಠ 272 ಸ್ಥಾನಗಳ ಅಗತ್ಯವಿದೆ.

Read More
Next Story