ನೇಮಕ ಹಗರಣ: 25,000ಕ್ಕೂ ಹೆಚ್ಚು ಶಾಲೆ ಸಿಬ್ಬಂದಿ ನೇಮಕ ರದ್ದು
ಸಿಬಿಐ ತನಿಖೆಗೆ ಆದೇಶಿಸಿದ ಕಲ್ಕತ್ತಾ ಹೈಕೋರ್ಟ್
ಏಪ್ರಿಲ್ 22- ಕಲ್ಕತ್ತಾ ಹೈಕೋರ್ಟ್ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳ 25,000 ಬೋಧಕ ಮತ್ತು ಬೋಧಕೇತರ ನೇಮಕಗಳನ್ನು ಸೋಮವಾರ ರದ್ದುಗೊಳಿಸಿದೆ. ಪಶ್ಚಿಮ ಬಂಗಾಳದ ಶಾಲೆಗಳಿಗೆ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016 (ಎಸ್‌ಎಲ್‌ಎಸ್ ಟಿ) ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಎಂ.ಡಿ. ಶಬ್ಬರ್ ರಶೀದಿ ಅವರ ವಿಭಾಗೀಯ ಪೀಠ ತನ್ನ 280 ಪುಟಗಳ ತೀರ್ಪಿನಲ್ಲಿ ನೇಮಕ ಪ್ರಕ್ರಿಯೆ ಕುರಿತು ಹೆಚ್ಚಿನ ತನಿಖೆ ನಡೆಸಿ, ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ. ಮುಂದಿನ 15 ದಿನಗಳಲ್ಲಿ ಹೊಸದಾಗಿ ನೇಮಕ ನಡೆಸಬೇಕು ಎಂದು ಆದೇಶಿಸಿದೆ.
ಲೋಕಸಭೆ ಚುನಾವಣೆ ಸನಿಹದಲ್ಲಿ ಇರುವಾಗ ಬಂದ ಈ ತೀರ್ಪು ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಉದ್ಯೋಗಕ್ಕಾಗಿ ನಗದು ಹಗರಣ ಈಗಾಗಲೇ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಸೇರಿದಂತೆ ಹಲವು ಟಿಎಂಸಿ ನಾಯಕರ ಬಂಧನಕ್ಕೆ ಕಾರಣವಾಗಿದ್ದು, ಚುನಾವಣೆ ಪ್ರಚಾರದಲ್ಲಿ ಆದ್ಯತೆ ಪಡೆದುಕೊಂಡಿದೆ.
ವಿರೋಧ ಪಕ್ಷಗಳಿಂದ ಪ್ರತಿಭಟನೆ: ಮಮತಾ ಬ್ಯಾನರ್ಜಿಯವರ ಟಿಎಂಸಿ ಆಡಳಿತದ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ತೀರ್ಪು ಅನುಮೋದಿಸುತ್ತದೆ ಎಂದು ಪ್ರತಿಪಕ್ಷಗಳು ಹೇಳಿವೆ. 25,753 ಜನರು ಉದ್ಯೋಗ ಕಳೆದುಕೊಳ್ಳಲು ಸರ್ಕಾರ ಕಾರಣವಾಗಿದ್ದು, ಮುಖ್ಯಮಂತ್ರಿ ಬ್ಯಾನರ್ಜಿ ಅವರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ಒತ್ತಾಯಿಸಿದೆ.
ʻಮುಖ್ಯಮಂತ್ರಿಗಳು ಹಿಂದೂ ಮತ್ತು ಮುಸ್ಲಿಮರು ಸೇರಿದಂತೆ ಎಲ್ಲಾ ಸಮುದಾಯಗಳ ಅರ್ಹ ಅಭ್ಯರ್ಥಿಗಳನ್ನು ವಂಚಿಸಿದ್ದಾರೆ. ಜನರು ಅವರನ್ನು ಬಹಿಷ್ಕರಿಸಬೇಕು.ಅವರು ರಾಜೀನಾಮೆ ನೀಡಬೇಕು ಮತ್ತು ರಾಷ್ಟ್ರಪತಿ ಆಳ್ವಿಕೆಯಡಿ ಹೊಸ ಚುನಾವಣೆ ನಡೆಸಬೇಕುʼ ಎಂದು ಬಿಜೆಪಿ ಅಭ್ಯರ್ಥಿ ಮತ್ತು ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೂಲಿ ಅವರು ಹೇಳಿದ್ದಾರೆ. ಉದ್ಯೋಗ ಪಡೆಯಲು ಲಂಚ ನೀಡಿದವರು ಈಗ ಟಿಎಂಸಿ ನಾಯಕರ ನಿವಾಸಗಳಿಗೆ ಮುತ್ತಿಗೆ ಹಾಕಬೇಕು ಎಂದು ಸಿಪಿಐ (ಎಂ) ನ ಸಯಾನ್ ಬ್ಯಾನರ್ಜಿ ಹೇಳಿದರು.
ಇಡೀ ಪಕ್ಷವನ್ನು ದೂಷಿಸಲು ಸಾಧ್ಯವಿಲ್ಲ: ಟಿಎಂಸಿ ಬೆರಳೆಣಿಕೆ ಜನರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಇಡೀ ಪಕ್ಷ ಮತ್ತು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಟಿಎಂಸಿ ಹೇಳಿದೆ. ನೇಮಕ ರದ್ದು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆಯಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮಾಜಿ ಶಿಕ್ಷಣ ಸಚಿವರ ಮೇಲೆ ಸಂಪೂರ್ಣ ಹೊಣೆಗಾರಿಕೆ ಹೊರಿಸಲು ಪಕ್ಷ ನಿರ್ಧರಿಸಿದೆ.
ʻಅಕ್ರಮ ನಡೆಸಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ, ಅಭ್ಯರ್ಥಿಗಳು ವಂಚಿತರಾಗಬಾರದು. ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆʼ ಎಂದು ಟಿಎಂಸಿ ವಕ್ತಾರ ಕುಂತಲ್ ಘೋಷ್ ಹೇಳಿದ್ದಾರೆ.
2016ರಲ್ಲಿ24,640 ಹುದ್ದೆಗಳಿಗೆ ನಡೆದ ಆಯ್ಕೆ ಪರೀಕ್ಷೆಗೆ 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.