ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿಯಿಂದ 17 ಆಹಾರ ಮಾರ್ಗಸೂಚಿ ಬಿಡುಗಡೆ
x

ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿಯಿಂದ 17 ಆಹಾರ ಮಾರ್ಗಸೂಚಿ ಬಿಡುಗಡೆ

ಶೇ. 56.4 ರೋಗಗಳಿಗೆ ಅನಾರೋಗ್ಯಕರ ಆಹಾರಕ್ರಮ ಕಾರಣ: ಐಸಿಎಂಆರ್‌


ಅನಾರೋಗ್ಯಕರ ಆಹಾರ ಸೇವನೆಯಿಂದ ಶೇ.56.4 ರಷ್ಟು ರೋಗಗಳು ಸಂಭವಿಸುತ್ತವೆ ಎಂದು ಹೇಳಿರುವ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ, ಇದನ್ನು ತಡೆಯಲು 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಐಸಿಎಂಆರ್-ರಾಷ್ಟ್ರೀಯ ಪೋಷಕಾಂಶ ಸಂಸ್ಥೆ(ಎನ್ಐಎನ್‌) ನಿರ್ದೇಶಕಿ ಡಾ. ಆರ್.‌ ಹೇಮಲತಾ ನೇತೃತ್ವದ ತಜ್ಞರ ಸಮಿತಿಯು ಅಗತ್ಯ ಪೋಷಕಾಂಶಗಳನ್ನು ಪೂರೈಸುವ ಮತ್ತು ಸ್ಥೂಲಕಾಯತೆ ಹಾಗೂ ಮಧುಮೇಹದಂತಹ ಸಾಂಕ್ರಾಮಿಕವಲ್ಲದ ರೋಗ(ಎನ್‌ಸಿಡಿ)ಗಳನ್ನು ತಡೆಗಟ್ಟಲು ನೆರವಾಗುವ 17 ಆಹಾರ ಮಾರ್ಗಸೂಚಿ(ಡಿಜಿಐ)ಗಳನ್ನು ರೂಪಿಸಿದೆ.

ರಾಷ್ಟ್ರೀಯ ಪೋಷಕಾಂಶ ಸಂಸ್ಥೆಯ ಶಿಫಾರಸು: ರಾಷ್ಟ್ರೀಯ ಪೋಷಕಾಂಶ ಸಂಸ್ಥೆ ಪ್ರಕಾರ,ʻ ಆರೋಗ್ಯಕರ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಯಿಂದ ಕರೊನರಿ ಹೃದ್ರೋಗ (ಸಿಎಚ್‌ಡಿ) ಮತ್ತು ಅಧಿಕ ರಕ್ತದೊತ್ತಡ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಮತ್ತು ಟೈಪ್ 2 ಮಧುಮೇಹವನ್ನುಶೇ. 80 ರಷ್ಟು ತಡೆಯಬಹುದುʼ. ʻಆರೋಗ್ಯಕರ ಜೀವನಶೈಲಿಯಿಂದ ಅಕಾಲಿಕ ಮರಣವನ್ನು ಗಮನಾರ್ಹವಾಗಿ ತಪ್ಪಿಸಬಹುದು. ದೈಹಿಕ ಚಟುವಟಿಕೆ ಇಲ್ಲದೆ ಇರುವುದು, ಸಕ್ಕರೆ- ಕೊಬ್ಬಿನಿಂದ ತುಂಬಿದ ಹೆಚ್ಚು ಸಂಸ್ಕರಿಸಿದ ಆಹಾರಗಳ ಸೇವನೆ ಹೆಚ್ಚಳ ಹಾಗೂ ಮತ್ತು ಆಹಾರದಲ್ಲಿ ವೈವಿಧ್ಯತೆ ಇಲ್ಮಲದೆ ಇರುವುದರಿಂದ, ಸೂಕ್ಷ್ಮ ಪೋಷಕಾಂಶಗಳ ಕೊರತೆ ಮತ್ತು ಅಧಿಕ ತೂಕದ ಸಮಸ್ಯೆಗಳು ಹೆಚ್ಚುತ್ತವೆʼ ಎಂದು ಹೇಳಿದೆ.

ಎನ್‌ಐಎನ್‌ ಉಪ್ಪು ಸೇವನೆಗೆ ಕಟ್ಟುಪಾಡು, ತೈಲ ಮತ್ತು ಕೊಬ್ಬಿನ ಮಿತ ಬಳಕೆ, ಸಕ್ಕರೆ ಮತ್ತು ಅತಿ ಹೆಚ್ಚು ಸಂಸ್ಕರಿಸಿದ ಆಹಾರದ ಸೇವನೆಗೆ ನಿರ್ಬಂಧ ವಿಧಿಸಲು ಹಾಗೂ ಪ್ರತಿನಿತ್ಯ ವ್ಯಾಯಾಮಕ್ಕೆ ಶಿಫಾರಸು ಮಾಡಿದೆ. ಬೊಜ್ಜು ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ಅಳವಡಿಕೆ ಮತ್ತು ಸೂಕ್ತ- ಆರೋಗ್ಯಕರ ಆಹಾರ ಆಯ್ಕೆ ಮಾಡಲು ಪೊಟ್ಟಣಗಳಿಗೆ ಅಂಟಿಸಿದ ಲೇಬಲ್‌ಗಳ ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದೆ.

ಎನ್‌ ಸಿಡಿ ಹೆಚ್ಚಳ: ʻಮಾರ್ಗಸೂಚಿಗಳು ವೈಜ್ಞಾನಿಕ ಪುರಾವೆ ಆಧರಿತ ಮಾಹಿತಿ ಒಳಗೊಂಡಿದ್ದು, ರಾಷ್ಟ್ರೀಯ ಪೌಷ್ಟಿಕಾಂಶ ನೀತಿಯಲ್ಲಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ನೆರವಾಗುತ್ತವೆ. ಅಪೌಷ್ಟಿಕತೆಗೆ ಅತ್ಯಂತ ತಾರ್ಕಿಕ, ಸಮರ್ಥನೀಯ ಮತ್ತು ದೀರ್ಘಾವಧಿಯ ಪರಿಹಾರವೆಂದರೆ ವೈವಿಧ್ಯಮಯ ಆಹಾರ ಸೇವನೆ. ಪೌಷ್ಟಿಕಾಂಶಭರಿತ ಆಹಾರಗಳ ಲಭ್ಯತೆ ಮತ್ತು ಕೈಗೆಟಕುವಿಕೆಯನ್ನು ಖಚಿತಪಡಿಸಿಕೊಳ್ಳಬೇಕುʼ ಎಂದು ಡಾ.ಹೇಮಲತಾ ಹೇಳಿದರು.

ʻಕೆಲವು ದಶಕಗಳಲ್ಲಿ ಭಾರತೀಯರ ಆಹಾರ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಇದು ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳಕ್ಕೆ ಕಾರಣ. ಅಪೌಷ್ಟಿಕತೆ ಸಮಸ್ಯೆಗಳು ಮುಂದುವರಿದಿವೆʼ ಎಂದು ಐಸಿಎಂಆರ್‌ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ಹೇಳಿದ್ದಾರೆ. ʻಬದಲಾಗುತ್ತಿರುವ ಸನ್ನಿವೇಶಕ್ಕೆ ಈ ಮಾರ್ಗಸೂಚಿಗಳು ಸೂಕ್ತವಾಗಿವೆ. ಪ್ರಾಯೋಗಿಕ ಸಂದೇಶ ಮತ್ತು ಸಲಹೆಗಳು ಸಮಗ್ರ ಪೋಷಣೆ ಮತ್ತು ಆರೋಗ್ಯವನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿವೆʼ ಎಂದು ಬಹ್ಲ್ ಹೇಳಿದರು.

ಸಮತೋಲಿತ ಆಹಾರದ ಅವಶ್ಯಕತೆ: ಐದರಿಂದ ಒಂಬತ್ತು ವರ್ಷದೊಳಗಿನ ಶೇ. 34 ರಷ್ಟು ಮಕ್ಕಳು ಅಧಿಕ ಟ್ರೈಗ್ಲಿಸರೈಡ್‌ಗಳಿಂದ ಬಳಲುತ್ತಿದ್ದಾರೆ ಎಂದು ಎನ್‌ಐಎನ್ ಹೇಳಿದೆ. ಸಮತೋಲಿತ ಆಹಾರವೆಂದರೆ, ಶೇ. 45 ರಷ್ಟು ಕ್ಯಾಲೊರಿ ಸಿರಿಧಾನ್ಯಗಳು ಮತ್ತು ಏಕ ದಳ ಧಾನ್ಯಗಳಿಂದ, ಶೇ.15ರಷ್ಟು ಕ್ಯಾಲೊರಿ ಬೇಳೆಕಾಳು, ದ್ವಿದಳ ಧಾನ್ಯಗಳು, ಬೀನ್ಸ್ ಮತ್ತು ಮಾಂಸದಿಂದ ಬರಬೇಕು. ಉಳಿದ ಕ್ಯಾಲೊರಿಗಳು ಬೀಜಗಳು, ತರಕಾರಿಗಳು, ಹಣ್ಣುಗಳು ಮತ್ತು ಹಾಲಿನಿಂದ ಬರಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ.

ದ್ವಿದಳ ಧಾನ್ಯಗಳು ಮತ್ತು ಮಾಂಸದ ಬೆಲೆ ಹೆಚ್ಚಳ, ಲಭ್ಯತೆಯ ಕೊರತೆಯಿಂದಾಗಿ, ದೇಶದ ಜನಸಂಖ್ಯೆಯಲ್ಲಿ ಹೆಚ್ಚಿನವರು ಧಾನ್ಯಗಳನ್ನು ಅವಲಂಬಿಸಿದ್ದಾರೆ. ಇದರಿಂದ aಮೈನೋ ಆಮ್ಲಗಳು, ಕೊಬ್ಬಿನಂಶ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆ ಉಂಟಾಗುತ್ತಿದೆ. ಚಯಾಪಚ ಯಕ್ಕೆ ಅಡ್ಡಿಯೊಡ್ಡುತ್ತಿದೆ ಮತ್ತು ಚಿಕ್ಕ ವಯಸ್ಸಿನಿಂದಲೇ ಇನ್ಸುಲಿನ್ ಪ್ರತಿರೋಧ ಹಾಗೂ ಸಂಬಂಧಿತ ಅಸ್ವಸ್ಥತೆಗಳ ಅಪಾಯ ಹೆಚ್ಚಿಸುತ್ತದೆ ಎಂದು ಎನ್‌ಐಎನ್‌ ಹೇಳಿದೆ.

Read More
Next Story