ಮೋದಿ ಅವರಿಂದ ಕ್ರಿಮಿನಲ್‌ಗಳಿಗೆ ರಕ್ಷಣೆ: ರಾಹುಲ್
ಎಲ್ಲ ಗೊತ್ತಿದ್ದರೂ ನೂರಾರು ಹೆಣ್ಣುಮಕ್ಕಳನ್ನು ಶೋಷಿಸಿದ ದೆವ್ವದ ಪರ ಪ್ರಚಾರ ಮಾಡಿದ್ದು ಯಾಕೆ? ಅಷ್ಟಕ್ಕೂ ಇಷ್ಟು ದೊಡ್ಡ ಕ್ರಿಮಿನಲ್ ದೇಶದಿಂದ ಆರಾಮಾಗಿ ಪರಾರಿಯಾಗಿದ್ದು ಹೇಗೆ?
ಹೊಸದಿಲ್ಲಿ, ಮೇ 1- ಮೋದಿ ಅವರ ರಾಜಕೀಯ ಕುಟುಂಬದ ಭಾಗವಾಗುವುದು ಅಪರಾಧಿಗಳಿಗೆ ರಕ್ಷಣೆಯ ʻಗ್ಯಾರಂಟಿʼ ನೀಡುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಟೀಕಿಸಿದ್ದಾರೆ.
ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ವಿರುದ್ಧ ರಾಹುಲ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ ನಲ್ಲಿ ಬರೆದ ಪೋಸ್ಟ್ ನಲ್ಲಿ ʻಕರ್ನಾಟಕದಲ್ಲಿ ಮಹಿಳೆಯರ ವಿರುದ್ಧ ನಡೆದ ಘೋರ ಅಪರಾಧಗಳ ಬಗ್ಗೆ ನರೇಂದ್ರ ಮೋದಿ ಈಗಲೂ ನಾಚಿಕೆಗೇಡಿನ ಮೌನ ತೋರಿಸುತ್ತಿದ್ದಾರೆ. ಪ್ರಧಾನಿ ಉತ್ತರಿಸಬೇಕು: ಎಲ್ಲ ಗೊತ್ತಿದ್ದರೂ ನೂರಾರು ಹೆಣ್ಣುಮಕ್ಕಳನ್ನು ಶೋಷಿಸಿದ ದೆವ್ವದ ಪರ ಪ್ರಚಾರ ಮಾಡಿದ್ದು ಯಾಕೆ? ಅಷ್ಟಕ್ಕೂ ಇಷ್ಟು ದೊಡ್ಡ ಕ್ರಿಮಿನಲ್ ದೇಶದಿಂದ ಆರಾಮಾಗಿ ಪರಾರಿಯಾಗಿದ್ದು ಹೇಗೆ?ʼ ಎಂದು ಪ್ರಶ್ನಿಸಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ, ಶಾಸಕ ಎಚ್.ಡಿ. ರೇವಣ್ಣ ವಿರುದ್ಧ ಪೊಲೀಸರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ದೂರಿನ ಆಧಾರದ ಮೇಲೆ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಭಾನುವಾರ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಬಿಜೆಪಿಯ ಮಿತ್ರಪಕ್ಷವಾದ ಜೆಡಿಎಸ್, ಪ್ರಜ್ವಲ್ ಅವರನ್ನು ಅಮಾನತುಗೊಳಿಸಿದೆ.
ʻಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ ಮತ್ತು ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣುಮಕ್ಕಳ ಮೇಲೆ ಅಪರಾಧ ಕೃತ್ಯ ಎಸಗುವವರಿಗೆ ಪ್ರಧಾನಿಯ ʻಮೌನ ಬೆಂಬಲʼ ಧೈರ್ಯ ತುಂಬುತ್ತಿದೆʼ. ಮೋದಿಯವರ ರಾಜಕೀಯ ಕುಟುಂಬದ ಭಾಗವಾದ ಅಪರಾಧಿ ಗಳಿಗೆ 'ರಕ್ಷಣೆಯ ಖಾತರಿ' ಆಗಿದೆಯೇ?ʼ ಅವರು ಪ್ರಶ್ನಿಸಿದರು.