ಇಸ್ರೇಲ್ ಮೇಲೆ ಇರಾನ್ ದಾಳಿ ಸನ್ನಿಹಿತ: ಬಿಡೆನ್
ಅಮೆರಿಕದ ಯುದ್ಧನೌಕೆಗಳು ಸನ್ನದ್ಧ:ರಾಜತಾಂತ್ರಿಕ ಪ್ರಯತ್ನ ಮುಂದುವರಿಕೆ
ಇಸ್ರೇಲ್ ಮೇಲೆ ಇರಾನ್ ʻಶೀಘ್ರವೇʼ ದಾಳಿ ಮಾಡಬಹುದು ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಸಿದ್ದಾರೆ.
ʻಇಸ್ರೇಲ್ ಡಮಾಸ್ಕಸ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನಿನ ಮಿಲಿಟರಿ ಅಧಿಕಾರಿಗಳನ್ನು ಕೊಂದ ಸೇಡು ತೀರಿಸಿಕೊಳ್ಳಲು ದಾಳಿ ಮಾಡಬಹುದು. ಇರಾನಿನ ಆಕ್ರಮಣದ ಬಗ್ಗೆ ಇಸ್ರೇಲ್‌ಗೂ ತಿಳಿಸಿದ್ದೇನೆ. ಆಕ್ರಮಣ ಸಲ್ಲದು ಎಂದು ಇರಾನ್ ಸರ್ಕಾರವನ್ನು ಒತ್ತಾಯಿಸಿದ್ದೇನೆʼ ಎಂದು ಬಿಡೆನ್ ವಾಷಿಂಗ್ಟನ್‌ನಲ್ಲಿ ಹೇಳಿದರು.
ಈಗಾಗಲೇ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಹಾಗೂ ಲೆಬನಾನ್-ಯೆಮೆನ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದ ಈ ಪ್ರದೇಶ ಪ್ರಕ್ಷುಬ್ಧವಾಗಿದೆ. ಇರಾನ್ ದಾಳಿಯಿಂದ ಸಂಪೂರ್ಣ ಯುದ್ಧದ ಸಾಧ್ವಯತೆಯಿದೆ ಎಂದು ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.
24 ಗಂಟೆ ನಿರ್ಣಾಯಕ: ʻನನ್ನ ನಿರೀಕ್ಷೆ ಪ್ರಕಾರ ಶೀಘ್ರವೇ ದಾಳಿ ಸಂಭವಿಸಬಹುದುʼ ಎಂದು ಬಿಡೆನ್ ಹೇಳಿದರು. ಇರಾನ್‌ಗೆ ನಿಮ್ಮ ಸಂದೇಶ ಏನು ಎಂದು ಪ್ರಶ್ನೆಗೆ, ʻ(ದಾಳಿ) ಮಾಡಬೇಡಿ ಎಂದು ಹೇಳಿದ್ದೇನೆʼ.
ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಬ್ಲೂಮ್‌ಬರ್ಗ್‌ನ ವರದಿಗಳು ಮುಂದಿನ 24 ಗಂಟೆಗಳಲ್ಲಿ ಡ್ರೋನ್ ಮತ್ತು ಕ್ಷಿಪಣಿಗಳೊಂದಿಗೆ ಬಾಂಬ್ ದಾಳಿ ನಡೆಯಬಹುದು ಎಂದು ಹೇಳಿವೆ. ರಕ್ಷಣಾ ಗುಪ್ತಚರ ಸಂಸ್ಥೆ ವರ್ಲ್ಡ್‌ವೈಡ್ ಥ್ರೆಟ್ ಪ್ರಕಾರ, ಇಸ್ರೇಲ್ ಮೇಲಿನ ಇರಾನಿನ ದಾಳಿ ಕ್ಷಿಪಣಿಗಳು/ಡ್ರೋನ್‌ಗಳ ಸಂಯೋಜನೆ ಆಗಿರುತ್ತದೆ.
ಇರಾನ್‌ನ ಶಸ್ತ್ರಾಗಾರ: ಇರಾನ್ ತನ್ನ ಗಡಿಯಿಂದ 2,000 ಕಿಮೀ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯವಿರುವ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳ ದಾಸ್ತಾನು ಹೊಂದಿದೆ. ಈ ಪ್ರದೇಶದಲ್ಲಿರುವ ಇಸ್ರೇಲ್ ಮತ್ತು ಅಮೆರಿಕನ್ ಪಡೆಗಳನ್ನು ರಕ್ಷಿಸಲು, ಯುಎಸ್ ಹೆಚ್ಚುವರಿ ಶಸ್ತ್ರಾಸ್ರ್ತಗಳನ್ನು ರವಾನಿಸಲಿದೆ. ಅಮೆರಿಕ ಎರಡು ನೌಕಾಪಡೆ ವಿಧ್ವಂಸಕಗಳನ್ನು ಪೂರ್ವ ಮೆಡಿಟರೇನಿಯನ್ ಸಮುದ್ರಕ್ಕೆ ಸ್ಥಳಾಂತರಿಸಿದೆ. ಇದರೊಟ್ಟಿಗೆ, ರಾಜತಾಂತ್ರಿಕ ಪ್ರಯತ್ನಗಳನ್ನು ಹೆಚ್ಚಿಸಿದೆ. ಇಸ್ರೇಲ್, ಸೌದಿ ಅರೇಬಿಯಾ, ಕತಾರ್ ಮತ್ತು ಇತರ ಸರ್ಕಾರಗಳೊಂದಿಗೆ ಮಾತುಕತೆ, ಸ್ವಿಡ್ವರ್ಲೆಂಡ್ ಮೂಲಕ ಇರಾನ್‌ಗೆ ಸಂದೇಶ ಕಳುಹಿಸಲು ಅಮೆರಿಕ ಪ್ರಯತ್ನಿಸುತ್ತಿದೆ.
ರಾಜತಾಂತ್ರಿಕ ಪ್ರಯತ್ನ: ಇರಾನ್‌ನಿಂದ ಬೆದರಿಕೆ ಕುರಿತು ತುರ್ತು ಮಾತುಕತೆಗೆ ಬಿಡೆನ್, ಜನರಲ್ ಮೈಕೆಲ್ ಕುರಿಲ್ಲಾ ಅವರನ್ನು ಇಸ್ರೇಲ್‌ಗೆ ಕಳುಹಿಸಿದ್ದಾರೆ. ಡಮಾಸ್ಕಸ್‌ನಲ್ಲಿರುವ ಇರಾನ್ ದೂತಾವಾಸದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಇಬ್ಬರು ಜನರಲ್‌ಗಳು ಸೇರಿದಂತೆ ಏಳು ಜನ ಮೃತಪಟ್ಟರು.