
US Election | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗುವುದು ಖಚಿತ
ನಿರ್ಣಾಯಕವೆಂದು ಪರಿಗಣಿಸಲಾದ ಜಾರ್ಜಿಯಾ, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ, ಅರಿಜೋನಾ, ಮಿಚಿಗನ್, ವಿಸ್ಕಾನ್ಸಿನ್ ಮತ್ತು ನೆವಾಡಾ ಕ್ಷೇತ್ರಗಳು ಟ್ರಂಪ್ ಪಾಲಾಗಿದ್ದರಿಂದ ಅವರಿಗೆ ಅಧ್ಯಕ್ಷ ಗದ್ದುಗೆ ಏರುವ ಅವಕಾಶ ಸಿಕ್ಕಿದೆ.
ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಎಲ್ಲಾ ಏಳು ಸ್ವಿಂಗ್ ರಾಜ್ಯಗಳಲ್ಲಿ (ನಿರ್ಣಾಯಕ ರಾಜ್ಯಗಳು) ಗೆಲುವಿನ ಕಡೆಗೆ ಮುನ್ನುಗ್ಗಿದ್ದಾರೆ. ಹೀಗಾಗಿ ಇಲ್ಲಿಯವರೆಗೆ 267 ಎಲೆಕ್ಟೋರಲ್ ಮತಗಳನ್ನು ಅವರು ಪಡೆದಂತಾಗಿದೆ. ಹೀಗಾಗಿ ಟ್ರಂಪ್ ಗೆಲುವು ನಿಶ್ಚಿತವಾಗಿದೆ. ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ವಿರುದ್ಧ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲ್ಲಲು ಅವರಿಗೆ ಕನಿಷ್ಠ 270 ಎಲೆಕ್ಟೋರಲ್ ಮತಗಳು ಬೇಕಾಗಿದ್ದವು. ಈಗಾಗಲೇ ಅವರು ಆ ಲೆಕ್ಕವನ್ನು ದಾಟಿರುವ ಕಾರಣ ಅವರ ಗೆಲುವು ನಿಶ್ಚಿತ ಎನಿಸಿದೆ.
ನಿಕಟ ಸ್ಪರ್ಧೆಯಿದ್ದ ಕಾರಣ ಈ ಬಾರಿಯ ಅಮೆರಿಕ ಚುನಾವಣೆ ಐತಿಹಾಸಿಕ ಎನಿಸಿತು. ಮಂಗಳವಾರ (ನವೆಂಬರ್ 5ರಂದು) ಮತದಾರರು ಮತ ಚಲಾಯಿಸಿದ್ದರು. ಮತನ ಎಣಿಕೆ ಆರಂಭದಲ್ಲಿಯೇ ಟ್ರಂಪ್ ಮುನ್ನಡೆ ಸಾಧಿಸಿದ್ದರು. ಫ್ಲೋರಿಡಾ ಮತ್ತು ಟೆಕ್ಸಾಸ್ ಟ್ರಂಪ್ ಪಾಲಾದರೆ, ಕಮಲಾ ಹ್ಯಾರಿಸ್‌ಗೆ ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್‌ನಲ್ಲಿ ವಿಜಯ ಲಭಿಸಿತು.
ಯಾವುದೇ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕವೆಂದು ಪರಿಗಣಿಸಲಾದ ಜಾರ್ಜಿಯಾ, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ, ಅರಿಜೋನಾ, ಮಿಚಿಗನ್, ವಿಸ್ಕಾನ್ಸಿನ್ ಮತ್ತು ನೆವಾಡಾ ಟ್ರಂಪ್ ಪಾಲಾಗುವ ಮೂಲಕ ಅವರು ಮುಂದಿನ ಅಧ್ಯಕ್ಷರಾಗುವುದು ನಿಶ್ಚಿತ ಎನಿಸಿತು.
ಕಠಿಣ ಹೋರಾಟ
ಆಕ್ರಮಣಕಾರಿ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾದ ಮಾಜಿ ಅಧ್ಯಕ್ಷ ಟ್ರಂಪ್ ಪ್ರಚಾರದ ಕೊನೆಯ ದಿನದಂದು ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ ಮತ್ತು ಮಿಚಿಗನ್‌ನಲ್ಲಿ ರ್ಯಾಲಿಗಳನ್ನು ನಡೆಸಿದ್ದರು. ಹ್ಯಾರಿಸ್ ಫಿಲಡೆಲ್ಫಿಯಾ ಮತ್ತು ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದರು.
ಯುಎಸ್ 50 ರಾಜ್ಯಗಳನ್ನು ಹೊಂದಿದೆ ಮತ್ತು ಸ್ವಿಂಗ್ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಪ್ರತಿ ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಮತ ಚಲಾಯಿಸುತ್ತವೆ. ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ, ರಾಜ್ಯಗಳಿಗೆ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ನಿಗದಿಪಡಿಸಲಾಗುತ್ತದೆ. ಒಟ್ಟಾರೆ 538 ಎಲೆಕ್ಟೋರಲ್ ಕಾಲೇಜ್ ಮತಗಳು ಚಲಾವಣೆಯಲ್ಲಿವೆ. 270 ಅಥವಾ ಅದಕ್ಕಿಂತ ಹೆಚ್ಚಿನ ಎಲೆಕ್ಟೋರಲ್ ಮತಗಳನ್ನು ಹೊಂದಿರುವ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ವಿಜೇತರೆಂದು ಘೋಷಿಸಲಾಗುತ್ತದೆ.
ಕಳೆದ ಹಲವಾರು ದಶಕಗಳಲ್ಲಿ ಅತ್ಯಂತ ಬಿಗಿಯಾದ ಅಧ್ಯಕ್ಷೀಯ ಸ್ಪರ್ಧೆಗಳಲ್ಲಿ ಒಂದಾಗಿರುವುದರಿಂದ ಈ ಚುನಾವಣೆಯನ್ನು ಐತಿಹಾಸಿಕ ಎಂದು ಪರಿಗಣಿಸಲಾಗಿದೆ.