Donald Trump | ನಿರ್ದಯಿ, ದ್ವೇಷ ಭಾಷಣಕಾರ ಟ್ರಂಪ್ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ?
ಟ್ರಂಪ್ ಈ ಪುನರಾಗಮನ ಮಾಡಿರುವುದಕ್ಕೆ ಅವರ ಆಕ್ರಮಣಕಾರಿ ನೀತಿಯೇ ಕಾರಣ. ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಟ್ರಂಪ್ ನೀಡುವ ಹಿಂಸಾತ್ಮಕ ಹೇಳಿಕೆಗಳೇ ಅವರನ್ನು ಗೆಲ್ಲಿಸಿದವು ಎಂಬುದೇ ಅಚ್ಚರಿ!
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದ್ದಾರೆ. ಇದರೊಂದಿಗೆ ಅವರು ಹಿಂದಿನ ಚುನಾವಣೆಯಲ್ಲಿ ಸೋತ ನಂತರ ಅಧ್ಯಕ್ಷೀಯ ಚುನಾವಣೆ ಗೆದ್ದ ಅಪರೂಪದ ಸಾಧನೆ ಮಾಡಿದ್ದಾರೆ.
ತಮ್ಮದೇ ರಿಪಬ್ಲಿಕನ್ ಪಕ್ಷದ ಸದಸ್ಯರು ಅವರ ಬಗ್ಗೆ ಎಚ್ಚರಿಕೆ ಮಾತುಗಳನ್ನು ಪ್ರಕಟಿಸಿದ ಹೊರತಾಗಿಯೂ ಟ್ರಂಪ್ ಈ ಪುನರಾಗಮನ ಮಾಡಿರುವುದಕ್ಕೆ ಅವರ ಆಕ್ರಮಣಕಾರಿ ನೀತಿಯೇ ಕಾರಣ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಟ್ರಂಪ್ ಅಧ್ಯಕ್ಷರಾಗಿ ಚುನಾಯಿತರಾದ ತಕ್ಷಣ ಅವರ ಕಟು ಟೀಕಾಕಾರರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಬಿಲೇನಿಯರ್ ಟ್ರಂಪ್ ಮಾಡುವ ದ್ವೇಷ ತುಂಬಿದ ಭಾಷಣ, ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ನೀಡುವ ಹಿಂಸಾತ್ಮಕ ಹೇಳಿಕೆಗಳೇ ಅವರನ್ನು ಗೆಲ್ಲಿಸಿದವು ಎಂಬುದೇ ಅಚ್ಚರಿ.
78 ವರ್ಷದ ರಾಜಕಾರಣಿ ಮೂವತ್ತನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ವಂಚನೆ, ಚುನಾವಣಾ ವ್ಯವಸ್ಥೆಗೆ ಧಕ್ಕೆ ಸೇರಿದಂತೆ ಹಲವರು ಆರೋಪಗಳಿವೆ. 26 ವರ್ಷದ ಯುವತಿಯರೂ ಆತನ ವಿರುದ್ಧ ಲೈಂಗಿಕ ದುರ್ನಡತೆಯ ಆರೋಪ ಮಾಡಿದ್ದಾರೆ. ಪತ್ರಕರ್ತೆ ಇ ಜೀನ್ ಕ್ಯಾರೊಲ್ ಪ್ರಕರಣದಲ್ಲಿ ನ್ಯಾಯಾಧೀಶರು 1996ರಲ್ಲಿ ಅವರು ತಪ್ಪಿತಸ್ಥ ಎಂದು ಘೋಷಿಸಿದ್ದಾರೆ.
ಗಣನೀಯ ಸಂಖ್ಯೆಯ ಅಮೆರಿಕನ್ನರು ಟ್ರಂಪ್ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿರುವುದರಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ದೂರವಿರಿಸಲು ಸಾಧ್ಯವೇ ಇಲ್ಲ. ಹಾಗಾದರೆ, ಟ್ರಂಪ್ ರಾಜಕಾರಣಿಯಾಗಿದ್ದು ಹೇಗೆ, ಅವರ ಆರಂಭಿಕ ಪ್ರಭಾವಗಳು ಹೇಗಿದ್ದವು? ಅಮೆರಿಕದ ರಾಜಕೀಯದಲ್ಲಿ ಸದಾ ಇರಲು ಯಾಕೆ ಬಯಸುತ್ತಾರೆ ಎಂಬುದರ ಬಗ್ಗೆ ಗಮನ ಹರಿಸೋಣ.
ಕ್ವೀನ್ಸ್ನಲ್ಲಿ ಜನನ
ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಟ್ಟಿದ್ದು ಕ್ವೀನ್ಸ್ನಲ್ಲಿ. ಪೋಷಕರ ಐದು ಮಕ್ಕಳ ಮಧ್ಯದ ಪುತ್ರ . ಟ್ರಂಪ್ ತಾಯಿ ಸ್ಕಾಟ್ಲೆಂಡ್ನಿಂದ ವಲಸೆ ಬಂದವರು. ಆದಾಗ್ಯೂ ಟ್ರಂಪ್ ತಂದೆಯ ಪ್ರಭಾವಕ್ಕೆ ಹೆಚ್ಚು ಒಳಗಾಗಿದ್ದಾರೆ. ತಂದೆಗೆ ಹೆಚ್ಚು ಹೆದರುತ್ತಿದ್ದರು ಎಂದೂ ಹೇಳಲಾಗಿದೆ.
ಡೊನಾಲ್ಡ್ ತಂದೆ ಫ್ರೆಡ್ ಟ್ರಂಪ್ ಯಶಸ್ವಿ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದರು, ಅವರು ಬ್ರೂಕ್ಲಿನ್ ಮತ್ತು ಕ್ವೀನ್ಸ್ನಲ್ಲಿ ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿ ಕೊಡುತ್ತಾ ಹಣ ಗಳಿಸಿದ್ದರು. ದುಡ್ಡು ಮಾಡುವ ಉದ್ಯಮದಲ್ಲಿ ತನ್ನ ಮಗನೂ ಮುಂದುವರಿಯಬೇಕು ಎಂಬುದು ಫ್ರೆಡ್ ಆಸೆಯಾಗಿತ್ತು. ಅವರು ಬರೆದ ಆತ್ಮಚರಿತ್ರೆಗಳಾದ 'ದಿ ಆರ್ಟ್ ಆಫ್ ದಿ ಡೀಲ್' ಮತ್ತು 'ಟ್ರಂಪ್ ರಿವೀಲ್ಡ್' ಪ್ರಕಾರ, ಟ್ರಂಪ್ ಬಾಲ್ಯದಿಂದಲೇ ತುಂಟ. ಕೆಣಕುವುದೆಂದರೆ ಇಷ್ಟ. ಈಗಲೂ ಅದನ್ನೇ ಮಾಡುತ್ತಿದ್ದಾರೆ!
13 ವರ್ಷದವನಾಗಿದ್ದಾಗ ಟ್ರಂಪ್ ನ್ಯೂಯಾರ್ಕ್ ಮಿಲಿಟರಿ ಶಾಲೆಗೆ ಸೇರಿಕೊಂಡಿದ್ದರು. ಮಿಲಿಟರಿ ಶಾಲೆಯಂದಲೇ ಅವರು ಕಠಿಣ ಮನಸ್ಥಿತಿ ಕಲಿತಿದ್ದರು ಎನ್ನಲಾಗಿದೆ.
ಟ್ರಂಪ್ ಹಲವು ಸಂದರ್ಶನಗಳಲ್ಲಿ ಶಾಲೆಯನ್ನು "ಉತ್ತಮ ತರಬೇತಿ" ಎಂದು ಕರೆದಿದ್ದಾರೆ. ಆದರೆ ಅಮೆರಿಕದ ಪತ್ರಕರ್ತರು ಈ ಶಾಲೆಯನ್ನು "ದೈಹಿಕ ಕ್ರೌರ್ಯ ಮತ್ತು ಮೌಖಿಕ ನಿಂದನೆ" ಎಂದು ಹೇಳಿಕೊಳ್ಳುತ್ತಾರೆ.
ಈ ಶಾಲೆ ಟ್ರಂಪ್ ಅವರ ಸ್ಪರ್ಧಾತ್ಮಕ ಸ್ವಭಾವ ಪ್ರಚೋದಿಸಿತು ಎಂದು ಹೇಳುತ್ತಾರೆ. ಒಂದಲ್ಲ ಒಂದು ದಿನ ವಿಶ್ವ ಪ್ರಸಿದ್ಧನಾಗುತ್ತೇನೆ ಎಂದು ತನ್ನ ಸಹವರ್ತಿಗಳಿಗೆ ಟ್ರಂಪ್ ಹೇಳುತ್ತಿದ್ದರು. ಹೇಗೆಂದರೆ ಗೆಲುವಿಗಾಗಿ ಏನು ಬೇಕಾದರೂ ಮಾಡಬಲ್ಲೆ ಎಂಬುದು ಟ್ರಂಪ್ ಬಾಲ್ಯದಿಂದಲೇ ಬೆಳೆಸಿಕೊಂಡು ಬಂದ ಅಭ್ಯಾಸ.
ಮಿಲಿಟರಿ ಶಾಲೆ ತೊರೆದ ನಂತರ ಟ್ರಂಪ್ ತಮ್ಮ ತಂದೆಯ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು.
ಕರಿ ವರ್ಣದವರಿಗೆ ಮನೆ ಕೊಡುತ್ತಿರಲಿಲ್ಲ
70 ರ ದಶಕದಲ್ಲಿ ಅವರ ತಂದೆಯೊಂದಿಗೆ ರಿಯಲ್ ಎಸ್ಟೇಟ್ ಕೆಲಸ ಮಾಡುವಾಗ, ನ್ಯಾಯಾಂಗ ಇಲಾಖೆಯಿಂದ ಛೀಮಾರಿ ಹಾಕಿಸಿಕೊಂಡಿದ್ದವರು. ಕಾರಣ ಏನು ಗೊತ್ತೇ? ಅವರು ತಮ್ಮ ವಸತಿ ಯೋಜನೆಗಳಲ್ಲಿ ಕರಿ ವರ್ಣದವರು ಮತ್ತು ವಲಸಿಗರಿಗೆ ಬಾಡಿಗೆಗೆ ಮನೆ ನೀಡುತ್ತಿರಲಿಲ್ಲ. ಆದರೆ, ಟ್ರಂಪ್ ಅದನ್ನು ನಿರಾಕರಿಸಿದ್ದರು. ದೀರ್ಘ ಕಾಲ ಕಾನೂನು ಸಮರ ನಡೆಸಿದ್ದರು. ಸರ್ಕಾರದ ವಿರುದ್ಧ ತಿರುಗಿಬಿದ್ದರು ಮತ್ತು ನ್ಯಾಯಾಂಗ ಇಲಾಖೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಟ್ರಂಪ್ ಅವರು ಸದಾ ಹೆಸರುವಾಸಿಯಾಗಲು ಮತ್ತು ಎಲ್ಲರ ಗಮನ ಸೆಳೆಯಲು ಹಂಬಲಿಸುತ್ತಿದ್ದರು. 'ನಾನು ಹುಟ್ಟಿದಾಗಿನಿಂದಲೂ ಮತ್ತು ನನ್ನ ಜೀವನದುದ್ದಕ್ಕೂ ಟ್ರೆಂಡಿಂಗ್ನಲ್ಲಿ ಇರಲು ಬಯಸುತ್ತೇನೆ ' ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಅದನ್ನು ಅವರು ಹಾಗೆಯೇ ಪಾಲಿಸುತ್ತಿದ್ದಾರೆ.
ಟ್ಯಾಬ್ಲಾಯ್ಡ್ ಹೀರೋ
ವಿಶ್ವ ಪ್ರಸಿದ್ಧ ಫಿಫ್ತ್ ಅವೆನ್ಯೂನಲ್ಲಿರುವ 50 ಅಂತಸ್ತಿನ ಟ್ರಂಪ್ ಟವರ್ ಅವರ ಮನೆ. ಇಲ್ಲಿ ಪಾರಂಪರಿಕ, ಐಷಾರಾಮಿ ಹಾಗೂ ಅತ್ಯಂತ ದುಬಾರಿ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಇನ್ನು ಟ್ರಂಪ್ ಹೆಸರು ಹೊಂದಿರುವ ಕ್ಯಾಸಿನೊಗಳು, ವಿಲ್ಲಾಗಳು, ಗಾಲ್ಫ್ ಕೋರ್ಸ್ಗಳು ಮತ್ತು ಹೋಟೆಲ್ಗಳಂಥ ಇತರ ಆಸ್ತಿಗಳನ್ನು ಅಟ್ಲಾಂಟಿಕ್ ಸಿಟಿ, ಚಿಕಾಗೋ, ಲಾಸ್ ವೇಗಾಸ್ ಮತ್ತು ಟರ್ಕಿ ಮತ್ತು ಫಿಲಿಫೈನ್ಸ್ನಂಥ ನಗರಗಳಲ್ಲಿ ಇವೆ.
ಮಹಿಳೆಯರ ತಮ್ಮ ಸುತ್ತ ಸುತ್ತುವುದು ಟ್ರಂಪ್ಗೆ ನೆಚ್ಚಿನ ಸಂಗತಿ. ಅದಕ್ಕಾಗಿ ಸೌಂದರ್ಯ ಸ್ಪರ್ಧೆಗಳನ್ನು ಖರೀದಿ ಮಾಡಿದ್ದಾರೆ. ಅವರ ಮಿರಮಿರ ಮಿಂಚುವ ಜೀವನ ಶೈಲಿ ನ್ಯೂಯಾರ್ಕ್ ನಗರದ ಟ್ಯಾಬ್ಲಾಯ್ಡ್ ಮಾಧ್ಯಮಗಳನ್ನು ಆಕರ್ಷಿತ್ತು. ಆಗಾಗ್ಗೆ ಆ ಪತ್ರಿಕೆಗಳ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ʼಪ್ಲೇಬಾಯ್ʼ ಮ್ಯಾಗಜೀನ್ ಮುಖಪುಟದಲ್ಲಿಯೂ ಕಾಣಿಸಿಕೊಂಡವರು.
ಟ್ರಂಪ್ ಹೆಸರಿನ ಪ್ರಯಾಣ ಮತ್ತು ಪ್ರವಾಸೋದ್ಯಮ ತಾಣ, ವೈನರಿ, ಅಡಮಾನ ಕಂಪನಿ, ಪುರುಷರ ಬಟ್ಟೆ , ಟ್ರಂಪ್ ಐಸ್ ವಾಟರ್ ಮತ್ತು ವಿಮಾನಯಾನ ಸಂಸ್ಥೆಗಳಿವೆ. ಅವುಗಳಲ್ಲಿ ಹೆಚ್ಚಿನವುಗಳಿಗೆ ಅವರು ಮಾಲೀಕರಲ್ಲ. ಆದರೆ ಅವರ ಹೆಸರಿನ ಬ್ರಾಂಡ್ ಅನ್ನೇ ಮಾರಾಟ ಮಾಡಿದ್ದಾರೆ.
ರಿಯಾಲಿಟಿ ಟಿವಿ ಸ್ಟಾರ್
2004 ರಲ್ಲಿ ರಿಯಾಲಿಟಿ ಶೋ ʼದಿ ಅಪ್ರೆಂಟಿಸ್ʼ ಟ್ರಂಪ್ ಅವರನ್ನು ಮನೆಮಾತಾಗಿಸಿತು. ಅಲ್ಲಿಗೆ ಅವರು ಜಗತ್ಪ್ರಸಿದ್ಧರಾದರು.14 ಸೀಸನ್ಗಳಲ್ಲಿ ಅವರು ಬಾಸ್ ಆಗಿ ಅಪ್ರೆಂಟಿಸ್ ಸ್ಪರ್ಧಿಗಳ ನೇತೃತ್ವ ವಹಿಸಿದ್ದರು. ಈ ಪ್ರದರ್ಶನವು 10 ಮಿಲಿಯನ್ ವೀಕ್ಷಕರನ್ನು ಹೊಂದಿತ್ತು. ಹೀಗಾಗಿ ಅವರ ಹೆಸರನ್ನು ಜನಪ್ರಿಯಗೊಳಿಸಿತು. ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ ಇದು ಅಮೆರಿಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವರ ಮೊದಲ ಹೆಜ್ಜೆಯಾಯಿತು.
ಅವರು ಜನರನ್ನು ರಂಜಿಸುತ್ತಿದ್ದ ಶೋಮ್ಯಾನ್ ಆಗಿದ್ದರು. ಆದರೆ ಯಶಸ್ವಿ ಮತ್ತು ನಿರ್ದಯ ಉದ್ಯಮಿಯಾಗಿಯೂ ಆಗಿದ್ದರು.
2008ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಬರಾಕ್ ಒಬಾಮಾ ಅವರ ಪೌರತ್ವದ ಪ್ರಶ್ನೆ ಬಂದಾಗ ಟ್ರಂಪ್ ರಾಜಕೀಯ ಆಟ ಆರಂಭಿಸಿದ್ದರು. 2015ರಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. "ನನಗೆ ಅನೇಕ ಶ್ರೀಮಂತ ಸ್ನೇಹಿತರಿದ್ದಾರೆ ಮತ್ತು ಅವರು ಯಾರೆಂದು ಯಾರಿಗೂ ತಿಳಿದಿಲ್ಲ" ಎಂದು ಹೇಳುವ ಮೂಲಕ ಕುಖ್ಯಾತಿ ಪಡೆದರು.
ಅಮೆರಿಕದ ಅಧ್ಯಕ್ಷ
ಅಮೆರಿಕ ಅಧ್ಯಕ್ಷರಾದ ಬಳಿ ಟ್ರಂಪ್ ಸುಳ್ಳು ಹೇಳಿದ್ದಾರೆ, ಚುನಾವಣಾ ವ್ಯವಸ್ಥೆಯನ್ನು ತಿರುಚಿದ್ದಾರೆ, ರಷ್ಯಾಕ್ಕೆ ನಡು ಬಗ್ಗಿಸಿದ್ದಾರೆ, ಮಿತ್ರರಾಷ್ಟ್ರಗಳನ್ನು ದೂರವಿಟ್ಟರು, ರಾಷ್ಟ್ರೀಯ ಸಾಲವನ್ನು ಹೆಚ್ಚಿಸಿದರು ಎಂಬೆಲ್ಲ ಆರೋಪಗಳನ್ನು ಹೊತ್ತುಕೊಂಡಿದ್ದಾರೆ.
ಟ್ರಂಪ್ ಅಧಿಕಾರದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಪಸರಿಸಿತು. 400,000 ಕ್ಕೂ ಹೆಚ್ಚು ಅಮೆರಿಕನ್ನರು ಮೃತಪಟ್ಟಿದ್ದರು. ಉದ್ಯೋಗ ನಷ್ಟ ಮತ್ತು ಆರ್ಥಿಕ ಹಿಂಜರಿತಕ್ಕೆ ಅದು ಕಾರಣವಾಯಿತು. ಇದೇ ವೇಳೆ ಕರಿ ವರ್ಣದ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಪೊಲೀಸರ ಕಸ್ಟಡಿಯಲ್ಲಿ ಮೃತಪಟ್ಟಿದ್ದು ಈ ಘಟನೆ ಜಾಗತಿಕ ಅಭಿಯಾನವಾಗಿ ಮಾರ್ಪಟ್ಟಿತು. "ಬ್ಲ್ಯಾಕ್ ಲೈವ್ಸ್ ಮ್ಯಾಟರ್" ಅಭಿಯಾನವಾಗಿ ಮಾರ್ಪಟ್ಟಿತು. ಟ್ರಂಪ್ ವಿರೋಧಿ ಅಲೆಯೇ ಎದ್ದಿತ್ತು.
ಹಿಂದಿನ ಬಾರಿ ಟ್ರಂಪ್ ಅವರು ಅಧಿಕಾರ ವಹಿಸಿಕೊಳ್ಳುವ ವೇಳೆ ತಮ್ಮ ನೀತಿಗಳಲ್ಲಿ 'ಅಮೆರಿಕ ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತದೆ' ಎಂಬುದನ್ನು ಒತ್ತಿ ಒತ್ತಿ ಹೇಳಿದ್ದರು. ಅಮೆರಿಕ -ಮೆಕ್ಸಿಕೊ ನಡುವೆ ಗೋಡೆ ನಿರ್ಮಿಸುವಂತಹ ಕಠಿಣ ವಲಸೆ ನೀತಿಗಳನ್ನು ಪ್ರಸ್ತುತಪಡಿಸಿದ್ದರು.
ಟ್ರಂಪ್ ಅವರ ವಿರುದ್ಧ ಇರುವ ನಕಾರಾತ್ಮಕ ಅಂಶಗಳ ಹೊರತಾಗಿಯೂ ರಾಜಕೀಯ ವಿಶ್ಲೇಷಕರ ಪ್ರಕಾರ, ಟ್ರಂಪ್ ಜಾಗತಿಕ ಭಯೋತ್ಪಾದನೆಯ ವಿರುದ್ಧ ಯುದ್ಧ ನಡೆಸಿದ್ದಾರೆ. ಫೆಡರಲ್ ನ್ಯಾಯಾಂಗ ವ್ಯವಸ್ಥೆಯನ್ನು ಪುನರ್ರಚಿಸಿದ್ದರು. ಅಮೆರಿಕದ ಬಾಹ್ಯಾಕಾಶ ಶಕ್ತಿ ವಿಸ್ತರಿಸಿದ್ದರು. ತೆರಿಗೆ ಸುಧಾರಣೆಗೆ ಪ್ರಯತ್ನಿಸಿದ್ದಾರೆ. ಟ್ರಂಪ್ ಕಾಲದಲ್ಲಿ, ಭಯಂಕರ ಐಸಿಸ್ ನಾಯಕ ಅಬು ಬಕರ್ ಅಲ್-ಬಾಗ್ದಾದಿ ಹತ್ಯೆಯಾಗಿದ್ದಾನೆ.
ಎರಡು ಬಾರಿ ವಾಗ್ದಂಡನೆ
ಶ್ವೇತ ಭವನದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಿಂದ ಟ್ರಂಪ್ ಎರಡು ಬಾರಿ ವಾಗ್ದಂಡನೆಗೊಳಗಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಯೂ ಟ್ರಂಪ್ಗೆ ಉಂಟು. 2019ರಲ್ಲಿ ಅಧಿಕಾರ ದುರುಪಯೋಗ ಮತ್ತು ಅಲ್ಲಿನ ಸಂಸತ್ಗೆ ಅಡ್ಡಿಪಡಿಸಿದ ಆರೋಪದ ಮೇಲೆ ಟ್ರಂಪ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲಾಗಿತ್ತು. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸೋತ ನಂತರ ಅವರ ಬೆಂಬಲಿಗರನ್ನು ಪ್ರಚೋದಿಸಿದ್ದಕ್ಕಾಗಿ ಎರಡನೇ ಬಾರಿ ವಾಗ್ದಂಡನೆ ಒಳಗಾಗಿದ್ದರು. ಏಕೆಂದರೆ ಟ್ರಂಪ್ ಪ್ರಚೋದನೆಯಿಂದಾಗಿ ಅವರ ಬೆಂಬಲಿಗರು ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ದಾಳಿ ಮಾಡಿದ್ದರು.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೂ ನಿಜವಾದ ಟ್ರಂಪ್ ಶೈಲಿಯಲ್ಲಿ ಎಂದಿಗೂ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಚುನಾವಣೆ ವಂಚನೆ ಎಂದು ಆರೋಪಿಸಿದ್ದರು.
ಅಮೆರಿಕನ್ನರನ್ನು ಆಕರ್ಷಿಸಿದ್ದು ಹೇಗೆ?
'ಅಮೆರಿಕವನ್ನು ಮತ್ತೆ ಶ್ರೇಷ್ಠವನ್ನಾಗಿ ಮಾಡೋಣ' ಎಂಬ ಅವರ ಮುಷ್ಟಿ ಬಡಿದುಕೊಂಡು ಕೂಗಾಡುತ್ತಾರೆ ಟ್ರಂಪ್. ಅಮೆರಿಕಕ್ಕೆ ಅಪಮಾನವಾಗಿದೆ ಎಂಬುದನ್ನು ಪದೇಪದೇ ಹೇಳುತ್ತಾರೆ. ನಮ್ಮ ವ್ಯಾಪಾರ ಕುಸಿದಿದೆ ಎಂದು ಹೇಳುತ್ತಾರೆ. ಈ ಮಾತುಗಳೆಲ್ಲವೂ ಅಮೆರಿಕದ ಬಿಳಿ ಬಣ್ಣದವರ ಆಕರ್ಷಣೆಗೆ ಒಳಗಾಗಿದ್ದವು.
ತಮ್ಮ ಉದ್ಯೋಗಗಳು ಭಾರತ ಮತ್ತು ಫಿಲಿಫೈನ್ಸ್ಗೆ ಹೋಗುತ್ತಿವೆ ಅಮೆರಿಕದವರು ನಂಬುವಂತೆ ಮಾಡಿದ್ದಾರೆ ಟ್ರಂಪ್. ಉತ್ತಮ ವೇತನದ, ಹೈಟೆಕ್ ಉದ್ಯೋಗಗಳನ್ನು ವಲಸಿಗರು ಪಡೆಯುತ್ತಾರೆ ಎಂಬುದೇ ಟ್ರಂಪ್ ನಿರೂಪಣೆ.
ಟ್ರಂಪ್ ಚೀನಾ ಮತ್ತು ಅದರ ವ್ಯಾಪಾರ ಮತ್ತು ಬೌದ್ಧಿಕ ಆಸ್ತಿ ಅಭ್ಯಾಸಗಳನ್ನುಅನುಸರಿಸಿದರು. ಎಲ್ಲವೂ ನಮ್ಮದೇ ಎಂದರು. ಅಮೆರಿಕದ ಅಧ್ಯಕ್ಷರಲ್ಲಿ ಇದುವರೆಗೆ ಯಾರೂ ಚೀನಾಗೆ ಟ್ರಂಪ್ ಅವರಷ್ಟು ಸವಾಲು ಹಾಕಿಲ್ಲ.
ಕೆಲವು ರಾಜಕೀಯ ವಿಶ್ಲೇಷಕರು ಟ್ರಂಪ್ ಅವರ ಅಬ್ಬರ ಮತ್ತು ಹೊಗಳಿಕೆಯನ್ನು ಬಿಳಿ ರಾಷ್ಟ್ರೀಯವಾದಿ, ನವ-ನಾಜಿ ಮತ್ತು ಕಟು, ಬಲಪಂಥೀಯ ಗುಂಪುಗಳ ಉದಯ ಎಂದು ಹೇಳುತ್ತಾರೆ.
ಏನೇ ಆದರೂ ಟ್ರಂಪ್ ವಿಭಿನ್ನ ವ್ಯಕ್ತಿತ್ವದ ರಾಜಕೀಯ ನಾಯಕ. ಹೀಗಾಗಿ ಅಮೆರಿಕದ ರಾಜಕೀಯದರಿಂದ ಅವರನ್ನು ಸುಲಭವಾಗಿ ಬದಿಗಿಡಲು ಸಾಧ್ಯವೇ ಇಲ್ಲ.