
ನವೆಂಬರ್ 13ರಂದು ಟ್ರಂಪ್‌ಗೆ ಶ್ವೇತಭವನಕ್ಕೆ ಆಹ್ವಾನ ನೀಡಿದ ಬೈಡನ್
ನಿರ್ಗಮಿತ ಅಧ್ಯಕ್ಷರು ಮತ್ತು ಮುಂಬರುವ ಅಧ್ಯಕ್ಷರ ನಡುವಿನ ಸಭೆ ಔಪಚಾರಿಕ. ಇದು ಆ ದೇಶದ ದಶಕಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಇದನ್ನು ಸಾಮಾನ್ಯವಾಗಿ ಓವಲ್ ಕಚೇರಿಯಲ್ಲಿ ನಡೆಸಲಾಗುತ್ತದೆ.
ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಅವರು ನವೆಂಬರ್ 13ರಂದು ಶ್ವೇತಭವನದಲ್ಲಿ ನಡೆಯಲಿರುವ ಸಭೆಗೆ ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಿದ್ದಾರೆ. "ಅಧ್ಯಕ್ಷ ಬೈಡೆನ್ ಆಹ್ವಾನದ ಮೇರೆಗೆ ನಿಯೋಜಿತ ಅಧ್ಯಕ್ಷ ಟ್ರಂಪ್ ಬುಧವಾರ ಬೆಳಿಗ್ಗೆ 11:00 ಗಂಟೆಗೆ ಓವಲ್ ಕಚೇರಿಯಲ್ಲಿ ಭೇಟಿಯಾಗಲಿದ್ದಾರೆ" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್-ಪಿಯರೆ ಹೇಳಿಕೆ ನೀಡಿದ್ದಾರೆ.
ನಿರ್ಗಮಿತ ಅಧ್ಯಕ್ಷರು ಮತ್ತು ಮುಂಬರುವ ಅಧ್ಯಕ್ಷರ ನಡುವಿನ ಸಭೆ ಔಪಚಾರಿಕ. ಇದು ಆ ದೇಶದ ದಶಕಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಇದನ್ನು ಸಾಮಾನ್ಯವಾಗಿ ಓವಲ್ ಕಚೇರಿಯಲ್ಲಿ ನಡೆಸಲಾಗುತ್ತದೆ. ಈ ಭೇಟಿಯ ಸಮಯದಲ್ಲಿ ನಿರ್ಗಮಿತ ಅಧ್ಯಕ್ಷರು ಚುನಾಯಿತ ಅಧ್ಯಕ್ಷರಿಗೆ ದೇಶದ ಪ್ರಮುಖ ಕಾರ್ಯಸೂಚಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ.
ನಿಯೋಜಿತ ಅಧ್ಯಕ್ಷರಿಗೆ ಶ್ವೇತಭವನವನ್ನುಪರಿಚಯಿಸುವ ಪದ್ಧತಿಯೂ ಇದರಲ್ಲಿ ಸೇರಿಕೊಂಡಿದೆ. ಇಲ್ಲಿ ಹಾಲಿ ಪ್ರಥಮ ಮಹಿಳೆ (ಅಧ್ಯಕ್ಷರ ಪತ್ನಿ) ಮತ್ತು ಮುಂಬರು ಪ್ರಥಮ ಮಹಿಳೆ ನಡುವಿನ ಸಭೆಯನ್ನು ಒಳಗೊಂಡಿರುತ್ತದೆ. ಅಂದ ಹಾಗೆ ಅಮೆರಿಕದ ಇತಿಹಾಸದಲ್ಲಿ ನಾಲ್ಕೇ ವರ್ಷಗಳ ಬಳಿಕ ಮಾಜಿ ಅಧ್ಯಕ್ಷರು ಮರು ಆಯ್ಕೆಯಾಗುತ್ತಿರುವುದು ಇದು ಎರಡನೇ ಬಾರಿ.
ಡೊನಾಲ್ಡ್ ಟ್ರಂಪ್‌ಗೆ ಶ್ವೇತ ಭವನ ಪರಿಚಯ
ಜನವರಿ 20, 2017ರಿಂದ ನಾಲ್ಕು ವರ್ಷಗಳ ಕಾಲ ಅಮೆರಿಕದ 45ನೇ ಅಧ್ಯಕ್ಷರಾಗಿದ್ದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಶ್ವೇತಭವನ ಮತ್ತು ಅಧ್ಯಕ್ಷೀಯ ಆಡಳಿತದ ಕಾರ್ಯಚಟುವಟಿಕೆಗಳ ತಿಳಿದುಕೊಂಡಿದ್ದಾರೆ. ಹೀಗಾಗಿ ಭೇಟಿಯು ಸಂಪೂರ್ಣವಾಗಿ ಔಪಚಾರಿಕವಾಗಿರಲಿದೆ.
ವಿಶೇಷ ಎಂದರೆ ಶಾಂತಿಯುತ ಅಧಿಕಾರ ಹಸ್ತಾಂತರ ಮತ್ತು ಅಧ್ಯಕ್ಷೀಯ ಸ್ಥಾನದಿಂದ ನಿರ್ಗಮನ ಪ್ರಕ್ರಿಯೆಯನ್ನು ಟ್ರಂಪ್ ಮಾಡಿರಲಿಲ್ಲ.2020ರಲ್ಲಿ ಟ್ರಂಪ್ ಸೋತ ಹೊರತಾಗಿಯೂ ಅಧಿಕಾರ ಬಿಟ್ಟುಕೊಡಲು ಒಪ್ಪಿರಲಿಲ್ಲ. ಹೀಗಾಗಿ ಆ ಸಂಪ್ರದಾಯ ಮುರಿದು ಹೋಗಿತ್ತು. ಅಧ್ಯಕ್ಷ ಜೋ ಬೈಡನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಟ್ರಂಪ್ ಭಾಗವಹಿಸಿರಲಿಲ್ಲ.
ನಿರ್ಗಮಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಅವರ ಉತ್ತರಾಧಿಕಾರಿ ಜೆಡಿ ವ್ಯಾನ್ಸ್ ನಡುವೆ ಇದೇ ರೀತಿಯ ಸಭೆ ಸಹ ನಿಗದಿಪಡಿಸಲಾಗಿದೆ.