ಪಾಕಿಸ್ತಾನದ ಅಧ್ಯಕ್ಷೀಯ ಚುನಾವಣೆ:  ಜರ್ದಾರಿ ಮುಂಚೂಣಿಯಲ್ಲಿ
x

ಪಾಕಿಸ್ತಾನದ ಅಧ್ಯಕ್ಷೀಯ ಚುನಾವಣೆ: ಜರ್ದಾರಿ ಮುಂಚೂಣಿಯಲ್ಲಿ


ಇಸ್ಲಾಮಾಬಾದ್, ಮಾ.1- ಪಾಕಿಸ್ತಾನದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಮಾರ್ಚ್ 9 ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. 11 ವರ್ಷಗಳ ನಂತರ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತೆ ಗೆಲ್ಲುವುದು ಬಹುತೇಕ ಖಚಿತವಾಗಿದೆ.

ಡಾ.ಆರಿಫ್ ಅಲ್ವಿ ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರು ಬರಲಿದ್ದಾರೆ. ಆದರೆ, ಹೊಸ ಚುನಾವಣೆ ನಡೆಯದ ಕಾರಣ ಅವರು ಮುಂದುವರಿದಿದ್ದಾರೆ. ಆಗಸ್ಟ್ 2023 ರಲ್ಲಿ ವಿಸರ್ಜಿಸಲ್ಪಟ್ಟ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಅಸೆಂಬ್ಲಿಗಳ ಅನುಪಸ್ಥಿತಿಯಿಂದ ಅಲ್ವಿ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಆಗಿರಲಿಲ್ಲ. ಫೆಡರಲ್ ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗಳ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡುವ ಮಂಡಳಿಯನ್ನು ರೂಪಿಸುತ್ತಾರೆ.

ಫೆಬ್ರವರಿ 8 ರ ಚುನಾವಣೆ ನಂತರ ರಾಷ್ಟ್ರೀಯ ಅಸೆಂಬ್ಲಿ ಮತ್ತು ನಾಲ್ಕು ಪ್ರಾಂತೀಯ ಅಸೆಂಬ್ಲಿಗಳು ಚುನಾಯಿತ ಸದಸ್ಯರನ್ನು ಹೊಂದಿವೆ. ಮಾರ್ಚ್ 2 ರಂದು 12:00 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ, ಮಾರ್ಚ್ 4 ರಂದು ನಾಮಪತ್ರಗಳ ಪರಿಶೀಲನೆ ಹಾಗೂ 5 ರಂದು ಉಮೇದುವಾರಿಕೆ ಹಿಂಪಡೆಯಬಹುದು. ಆನಂತರ ಆಯೋಗ ಅಭ್ಯರ್ಥಿಗಳ ಪಟ್ಟಿಯನ್ನು ಅದೇ ದಿನ ಪ್ರಕಟಿಸುತ್ತದೆ. ಮಾರ್ಚ್ 6 ನಿವೃತ್ತಿ ದಿನಾಂಕ. ಮಾರ್ಚ್ 9 ರಂದು ಬೆಳಗ್ಗೆ 10:00 ರಿಂದ ಸಂಜೆ 4:00 ರವರೆಗೆ ಮತದಾನ ನಡೆಯಲಿದೆ.

ಇಮ್ರಾನ್‌ ಖಾನ್ ಅವರ ಪಿಟಿಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 93, ಪಿಎಂಎಲ್‌-ಎನ್‌ 75, ಪಿಪಿಪಿ 54, ಎಂಕ್ಯುಎಂ-ಪಿ 17 ಸ್ಥಾನ ಗೆದ್ದುಕೊಂಡಿದೆ. ಜರ್ದಾರಿ(68) ಪಿಎಂಎಲ್‌ ಎನ್‌ ಮತ್ತು ಪಿಪಿಪಿಯ ಜಂಟಿ ಅಭ್ಯರ್ಥಿ. ಪಿಎಂಎಲ್‌-ಎನ್‌ ನ ಶೆಹಬಾಜ್ ಷರೀಫ್( 72) ಪ್ರಧಾನ ಮಂತ್ರಿ ಅಭ್ಯರ್ಥಿ ಆಗಲಿದ್ದಾರೆ.

Read More
Next Story