ಅಶ್ವಿನ್ ರಾಮಸ್ವಾಮಿ ತಮ್ಮ ಪೋಷಕರೊಂದಿಗೆ.(ಚಿತ್ರ: Instagram/ashwinforga)

ಅಮೆರಿಕದ ಸೆನೆಟ್‌ಗೆ ಸ್ಪರ್ಧಿಸುತ್ತಿರುವ ಅಶ್ವಿನ್ ರಾಮಸ್ವಾಮಿ ಯಾರು?


ಭಾರತೀಯ-ಅಮೆರಿಕನ್ ಅಶ್ವಿನ್ ರಾಮಸ್ವಾಮಿ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಮಾಡಿದ ಪೋಸ್ಟ್‌ ಅವರ ದೃಷ್ಟಿಕೋನ ವನ್ನು ಅನಾವರಣಗೊಳಿಸುತ್ತದೆ; ʻಇತರರು ನಿಮಗೆ ತೋರಿಸಿದ ಮಾರ್ಗವನ್ನು ನೀವು ಅನುಸರಿಸಬೇಕಿಲ್ಲ.ಯಾರೂ ನಿರೀಕ್ಷಿಸದ ಕೆಲಸ ಮಾ ಡುವುದು ಸ್ಪೂರ್ತಿದಾಯಕ ಮತ್ತು ಅದ್ಭುತ. ನಿಮ್ಮ ಪ್ರತಿಭೆಯಿಂದ ಸಮುದಾಯ ಹೇಗೆ ಪ್ರಯೋಜನ ಪಡೆಯುತ್ತದೆ ಎಂಬುದು ಮುಖ್ಯʼ

ಜಾರ್ಜಿಯಾದ 48 ನೇ ಜಿಲ್ಲೆಯಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸೆನೆಟ್‌ಗೆ ಸ್ಪರ್ಧಿಸುತ್ತಿರುವ ಮೊದಲ ಭಾರತೀಯ-ಅಮೆರಿಕನ್ ಅವರು. 2020 ರಲ್ಲಿ ಚುನಾವಣೆ ಫಲಿತಾಂಶಗಳನ್ನು ತಿದ್ದಲು ಪ್ರಯತ್ನಿಸಿದ್ದಾರೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಆರೋಪ ಎದುರಿಸುತ್ತಿರುವ ರಿಪಬ್ಲಿಕನ್ ಪಕ್ಷದ ಸದಸ್ಯ ಶಾನ್ ಸ್ಟಿಲ್ ಅವರು ಹಾಲಿ ಪ್ರತಿನಿಧಿ.

ಅಶ್ವಿನ್‌ ರಾಮಸ್ವಾಮಿ(24) ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್.‌ ಚುನಾವಣೆ ಭದ್ರತೆ ಮತ್ತು ತಂತ್ರಜ್ಞಾನ ಸಂಬಂಧಿ ಕಾನೂನು ಮತ್ತು ಕಾರ್ಯನೀತಿ ಸಂಶೋಧನೆಯಲ್ಲಿ ಏಳು ವರ್ಷ ಅನುಭವ ಹೊಂದಿದ್ದಾರೆ. ಟೆಕ್ ಸ್ಟಾರ್ಟ್‌ಅಪ್‌ ಗಳನ್ನು ಸ್ಥಾಪಿಸಲು ನೆರವಾಗಿದ್ದಾರೆ. ಸೈಬರ್‌ ಸುರಕ್ಷತೆ ಕುರಿತು ಸರ್ಕಾರದ ಕೆಲಸ ಮಾಡಿದ್ದಾರೆ; ಸಾಫ್ಟ್‌ವೇರ್ ಆರ್ಕಿಟೆಕ್ಚರ್, ತಂತ್ರಜ್ಞಾನ ಕಾನೂನು ಮತ್ತು ಕಾರ್ಯನೀತಿ ಕುರಿತ ಸಲಹಾ ಕಂಪನಿಯನ್ನು ನಡೆಸುತ್ತಿದ್ದಾರೆ.

ಅವರ ಪೋಷಕರು (ಸಾಫ್ಟ್‌ವೇರ್ ಎಂಜಿನಿಯರ್‌ಗಳು) 1990 ರ ದಶಕದಲ್ಲಿ ತಮಿಳುನಾಡಿನಿಂದ ಅಮೆರಿಕಕ್ಕೆ ಬಂದರು.ತಾಯಿ ಚೆನ್ನೈ ಮತ್ತು ತಂದೆ ಕೊಯಮತ್ತೂರಿನವರು. ಅವರ ಒಡಹುಟ್ಟಿದವರು ಕೂಡ ಕಂಪ್ಯೂಟರ್ ಸೈನ್ಸ್ ಎಂಜಿನಿಯರ್‌ಗಳು. ಜಾರ್ಜಿಯಾಟೆಕ್, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ವರ್ಜೀನಿಯಾ ವಿಶ್ವವಿದ್ಯಾನಿಲಯದ ಕಾನೂನು ಶಾಲೆಯಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದ್ದಾರೆ.

ʻನಾನು ವಲಸೆ ಬಂದವರ ಮಗ. ಜಾನ್‌ ಕ್ರೀಕ್‌ನಲ್ಲಿ ಹುಟ್ಟಿ ಬೆಳೆದೆ. ಭಾರತೀಯ ಮತ್ತು ಅಮೆರಿಕನ್ ಸಂಸ್ಕೃತಿಗಳಲ್ಲಿ ಆಸಕ್ತಿಯಿದೆ. ನಾನು ಹಿಂದೂ. ಭಾರತೀಯ ಸಂಸ್ಕೃತಿ ಮತ್ತು ತತ್ವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದೇನೆʼ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದರು. ಕಾಲೇಜಿನಲ್ಲಿ ಸಂಸ್ಕೃತವನ್ನು ಕಲಿತ ಅವರು ಪ್ರಾಚೀನ ಪಠ್ಯಗಳು, ಉಪನಿಷತ್ತುಗಳನ್ನು ಓದಿರುವುದಲ್ಲದೆ, ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುತ್ತಾರೆ.

ರಾಜಕೀಯ ಅರಿವು: ಶಿಕ್ಷಣ, ಆರೋಗ್ಯ, ಉದ್ಯೋಗ, ಉದ್ಯಮಶೀಲತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಸಂಬಂಧಿತ ವಿಷಯಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶ ಸಿಗಬೇಕು ಎನ್ನುವುದು ಅವರ ನಿಲುವು. ʻಬೆಳೆಯುತ್ತಿರುವಾಗ ನನಗೆ ಸಿಕ್ಕಿದಂತೆ ಬೇರೆಲ್ಲರಿಗೂ ಸಮಾನ ಅವ ಕಾಶ ಸಿಗಬೇಕು. ಅಸಾಂಪ್ರದಾಯಿಕ ಹಿನ್ನೆಲೆಯಿಂದ ಬಂದ ಯುವಜನರಿಗೆ ಧ್ವನಿ ಸಿಗಬೇಕುʼ ಎಂದರು.

ತಮ್ಮ ಪೀಳಿಗೆಯವರು ಉತ್ತಮ ರಾಜಕೀಯ ಅರಿವು ಹೊಂದಿದ್ದಾರೆ ಎನ್ನುವುದು ಅವರ ಅಭಿಮತ. ʻನಾವು ಸುದ್ದಿಗಳನ್ನು ನೋಡುತ್ತೇವೆ. ನಮ್ಮ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಖಾತ್ರಿಗೊಳಿಸಿಕೊಳ್ಳಲು ಬಯಸುತ್ತೇವೆ. ಆದರೆ, ನಾವು ಎದುರಿಸುತ್ತಿರುವ ಸಮಸ್ಯೆಯೇನೆಂದರೆ, ನಮ್ಮಲ್ಲಿ ಸಂಪನ್ಮೂಲಗಳು ಅಥವಾ ಸಾಮರ್ಥ್ಯಗಳಿಲ್ಲ. ನನ್ನ ವಯಸ್ಸಿನವರು ಚುನಾವಣೆಯಲ್ಲಿ ಯಶಸ್ವಿಯಾಗುವುದು ಕಷ್ಟಕರ. ಏಕೆಂದರೆ, ಚುನಾವಣೆ ಪ್ರಕ್ರಿಯೆ ಶ್ರೀಮಂತರು ಮತ್ತು ವಯಸ್ಸಾದವರ ಪರವಾಗಿ ತಿರುಚಲ್ಪಟ್ಟಿದೆ. ನಾನು ಯಶಸ್ಸು ಗಳಿಸುವ ಮೂಲಕ ನಮ್ಮ ವಯಸ್ಸಿನವರೂ ತಮ್ಮದೇ ಆದ ಧ್ವನಿಯನ್ನು ಹೊಂದಬಹುದು ಮತ್ತು ಹಿನ್ನೆಲೆಯನ್ನು ಪರಿಗಣಿಸದೆ ಕೆಲಸ ಮಾಡಬಹುದು ಎಂಬ ಸಂದೇಶ ಸಾರುವ ಭರವಸೆ ಹೊಂದಿದ್ದೇನೆʼ ಎಂದು ಹೇಳಿದರು.

Read More
Next Story