ಮಳೆ ಕೊರತೆ, ಅಂತರ್ಜಲ ಮಟ್ಟ ಕುಸಿತ: ಮಹಾನಗರದಲ್ಲಿ ಹನಿ ಹನಿ ನೀರಿಗೂ ಹಾಹಾಕಾರ


ಬೆಂಗಳೂರಿನಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಕಳೆದ ವರ್ಷಗಳಿಗಿಂತ ಈ ಬಾರಿ ಸಮಸ್ಯೆ ತೀವ್ರವಾಗಿದೆ.

ಕಾವೇರಿ ನೀರು ಬೆಂಗಳೂರಿನ ಜೀವಜಲ. ನಗರಕ್ಕೆ ನೀರು ಪೂರೈಕೆಯಾಗುವುದು ಬಹುತೇಕ ಇಲ್ಲಿಂದಲೇ. 2023ನೇ ಸಾಲಿನಲ್ಲಿ ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಎರಡರಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ, ಕಾವೇರಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಮರ್ಪಕ ಮಳೆಯಾಗದೆ ಇರುವುದರಿಂದ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಕೆರೆಗಳಲ್ಲೂ ನೀರು ಬತ್ತಿದೆ.

ಹವಾಮಾನ ವೈಪರೀತ್ಯದ ಪರಿಣಾಮ

ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯವೂ ಸಹ ಅಂತರ್ಜಲ ಮಟ್ಟ ಇಳಿಕೆ ಆಗಲು ಕಾರಣವಾಗಿದೆ. ಬೆಂಗಳೂರಿಗೆ ಮುಖ್ಯವಾಗಿ ಕಾವೇರಿ ಜಲಾಶಯನದಿಂದ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ, ಬೆಂಗಳೂರಿಗೆ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಇನ್ನೂ ಕಾವೇರಿ ನೀರಿನ ಸಂಪರ್ಕ ಸಂಪೂರ್ಣವಾಗಿ ಆಗಿಲ್ಲ.

ಬೆಂಗಳೂರಿನ ಹಲವು ವಸತಿ ಸಮುಚ್ಛಯಗಳು (ಅಪಾರ್ಟ್‌ಮೆಂಟ್‌)ಗಳು ಬೋರ್‌ವೆಲ್‌ ನೀರನ್ನೇ ಅವಲಂಬಿಸಿವೆ. ಈ ಬಾರಿ ಮಳೆಯ ಕೊರೆತೆಯಿಂದ ಅಂತರ್ಜಲ ಮಟ್ಟವು ಕುಸಿದಿದ್ದು, ಬೋರ್‌ವೆಲ್‌ನಲ್ಲಿ ನೀರು ಬರುತ್ತಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ಕಾವೇರಿ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಈ ಬಾರಿ ಕಾವೇರಿ ಜಲಾಯನದಲ್ಲೂ ನೀರಿನ ಕೊರತೆ ಎದುರಾಗಿದೆ. ಇದು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ. ನಗರದಲ್ಲಿ ಬೇಸಿಗೆ ಪ್ರಾರಂಭವಾದ ಬೆನ್ನಲ್ಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.

ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳು ಸೇರಿದಂತೆ ಕೆಲವು ನಿರ್ದಿಷ್ಟ ಭಾಗದಲ್ಲಿ ಇನ್ನೂ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಈ ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ಅಥವಾ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ಪೂರ್ವ ಭಾಗದ ಅಪಾರ್ಟ್‌ಮೆಂಟ್‌ಗಳು ಬಹುತೇಕ ಬೋರ್‌ವೆಲ್‌ ಮತ್ತು ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿವೆ.


ಅನಿಯಂತ್ರಿತ ಅಭಿವೃದ್ಧಿ; ಅತಿಯಾದ ಅಂತರ್ಜಲ ಬಳಕೆ

ಬೆಂಗಳೂರು ಕಳೆದ ಎರಡರಿಂದ ಮೂರು ದಶಕಗಳ ಅವಧಿಯಲ್ಲಿ ಅನಿಯಂತ್ರಿತ ಅಭಿವೃದ್ಧಿ ಆಗಿದೆ. ಆದರೆ, ಅದೇ ಸಂದರ್ಭದಲ್ಲಿ ಅದಕ್ಕೆ ಅನುಗುಣವಾಗಿ ಯಾವುದೇ ಯೋಜನೆ ರೂಪಿಸಿಕೊಳ್ಳದೆ ಇರುವುದು ನೀರು ಪೂರೈಕೆ ಸಮಸ್ಯೆಗೆ ಕಾರಣವಾಗಿದೆ. ಆಘಾತಕಾರಿ ಅಂಶವೆಂದರೆ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಶೇ.79 ರಷ್ಟು ಜಲಮೂಲ ಹಾಗೂ ಶೇ.88ರಷ್ಟು ಹಸಿರೀಕರಣ ಮಾಯವಾಗಿದೆ ಇದು ಬೆಂಗಳೂರಿಗೆ ದುಬಾರಿಯಾಗಿದೆ. ಅಂತರ್ಜಲ ಬಳಕೆ ನೀರು ಹೆಚ್ಚು ಬಳಸುತ್ತಿರುವುದರ ಬಗ್ಗೆ ಕಳೆದ ಹಲವು ವರ್ಷಗಳಿಂದ ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರ ಎಚ್ಚರಿಕೆ ನೀಡುತ್ತಲೇ ಇದೆ. ನಗರದಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಬಗ್ಗೆ 2023ರ ರಲ್ಲೇ ಎಚ್ಚರಿಕೆ ನೀಡಿತ್ತು. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಅತೀ ಹೆಚ್ಚು ಅಂತರ್ಜಲ ಬಳಕೆ (ರೆಡ್‌ ಅಲರ್ಟ್‌) ಮಾಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿತ್ತು.

ತಾತ್ಕಾಲಿಕ ಪರಿಹಾರದಿಂದ ಸಮಸ್ಯೆ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ಆಡಳಿತ ಸಂಸ್ಥೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಲಿ ಅಥವಾ ಸರ್ಕಾರವಾಗಲಿ ಶಾಶ್ವತವಾದ ಪರಿಹಾರವನ್ನು ಕಂಡುಕೊಂಡಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ಪ್ರತಿ ಬಾರಿಯೂ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಎನ್ನುತ್ತಾರೆ ನಾಗರಿಕರಿಗಾಗಿ ನಾಗರಿಕರು (ಸಿಟಿಜನ್‌ ಫಾರ್‌ ಸಿಟಿಜನ್‌ನ)ಫೌಂಡರ್‌ ರಾಜ್‌ಕುಮಾರ್‌ ದುಗಾರ್‌.

ಬೆಂಗಳೂರಿನಲ್ಲಿ ಕೆರೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಇದರಿಂದಲೂ ಬೆಂಗಳೂರಿನಲ್ಲಿ ಅಂತರ್ಜಲ ಕುಸಿಯುತ್ತಿದೆ. ಬೋರ್‌ವೆಲ್‌ಗಳು ಬತ್ತುತ್ತಿವೆ ಎನ್ನುತ್ತಾರೆ ಅವರು. ಬೆಂಗಳೂರಿನಲ್ಲಿ ಕೆರೆಗಳನ್ನು ಉಳಿಸಿಕೊಂಡರೆ ಅಂತರ್ಜಲ ಮಟ್ಟ ಕುಸಿಯುವುದಿಲ್ಲ. ಇದರಿಂದ ಬೋರ್‌ವೆಲ್‌ಗಳು ಬತ್ತಿ ಹೋಗಿ ಕಾವೇರಿ ನೀರಿನ ಮೇಲೆ ಅವಲಂಬನೆ ಆಗುವುದಿಲ್ಲ. ಒಂದಕ್ಕೊಂದು ಸಂಬಂಧವಿದೆ ಎಂದು ಪ್ರತಿಪಾದಿಸುತ್ತಾರೆ.

ಬೆಂಗಳೂರಿಗೆ ದಿನಕ್ಕೆ ಸುಮಾರು 1,850 ಮಿಲಿಯನ್ ಲೀಟರ್ (ಎಂಎಲ್‌ಡಿ) ನೀರು ಪೂರೈಕೆಯಾಗುತ್ತಿದೆ. ಆದರೆ, ನೀರಿನ ಬೇಡಿಕೆ ಪೂರೈಸಲು ಕನಿಷ್ಠ 1,680 ಎಂಎಲ್‌ಡಿ ಅಗತ್ಯವಿದೆ. ನಗರದಲ್ಲಿ ಈಗಾಗಲೇ ಒಂದು ಕೋಟಿಗೂ ಹೆಚ್ಚು ಜನರಿದ್ದು, ಪ್ರತಿ ವರ್ಷ ಬೆಂಗಳೂರಿನ ಜನ ಸಂಖ್ಯೆ 10 ಲಕ್ಷ ಹೆಚ್ಚಾಗುತ್ತಲ್ಲೇ ಇದೆ. ಆದರೆ, ಅದಕ್ಕೆ ಅನುಗುಣವಾಗಿ ಸಿದ್ಧತೆ ಅಥವಾ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ.

ಕುಸಿದ ಅಂತರ್ಜಲ; ಬತ್ತಿದ ಬೋರ್‌ವೆಲ್‌ಗಳು

ಬೆಂಗಳೂರಿನಲ್ಲಿ ಈ ಬಾರಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಕುಸಿದಿರುವುದರಿಂದ ಇದರ ಪರಿಣಾಮ ಬೋರ್‌ವೆಲ್‌ ನೀರನ್ನು ಅವಲಂಬಿಸಿರುವವರ ಮೇಲೆ ಆಗಿದೆ. ಬೆಂಗಳೂರಿನಲ್ಲಿ 11,000ಕ್ಕೂ ಹೆಚ್ಚು ಬೋರ್‌ವೆಲ್‌ಗಳಿದ್ದು, 1,240 ಬೋರ್‌ವೆಲ್‌ಗಳಲ್ಲಿ ನೀರು ಪೂರೈಕೆ ಪ್ರಮಾಣ ಕುಸಿದಿದೆ ಎನ್ನುತ್ತಾರೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಧಿಕಾರಿಗಳು.

ಯಾವ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಳ

ಬೆಂಗಳೂರಿನ ಎಲ್ಲ ಭಾಗಗಳಿಗೂ ಕಾವೇರಿ ನೀರು ಪೂರೈಕೆ ಆಗುವುದಿಲ್ಲ. ಮುಖ್ಯವಾಗಿ ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಇದರೊಂದಿಗೆ ರಾಜರಾಜೇಶ್ವರಿ ನಗರ, ವೈಟ್‌ಫೀಲ್ಡ್‌, ಮಹದೇವಪುರ, ಕೆ.ಆರ್‌ಪುರ ಹಾಗೂ ದಾಸರಹಳ್ಳಿ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗುತ್ತಿದ್ದು, ಈ ಭಾಗದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡ ಮಂಡಳಿ ಮುಂದಾಗಿದೆ. ಟ್ಯಾಂಕರ್‌ ನೀರಿಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಖಾಸಗಿ ಟ್ಯಾಂಕರ್‌ ಮಾಲೀಕರು ಟ್ಯಾಂಕರ್‌ ನೀರಿಗೆ ಹೆಚ್ಚು ದರ ನಿಗದಿ ಮಾಡುತ್ತಿದ್ದಾರೆ ಎನ್ನುವ ಆರೋಪ ಸಾರ್ವಜನಿಕರಿಂದಲೂ ಕೇಳಿ ಬಂದಿದೆ.

Next Story