ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಗೆ ಗೆಲುವು
x

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಗೆ ಗೆಲುವು

ಪುಟ್ಟಣ್ಣ ಬೆಂಬಲಿಗರ ಸಂಭ್ರಮಾಚರಣೆ, ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮುಖಭಂಗ


ಬೆಂಗಳೂರು: ವಿಧಾನ ಪರಿಷತ್‌ ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 1,506ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ನಗರದ ಸರಕಾರಿ ಕಲಾ ಕಾಲೇಜು ಮುಂಭಾಗದಲ್ಲಿ ಪುಟ್ಟಣ್ಣ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಸೋತು ಮುಖಭಂಗ ಅನುಭವಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿದ್ದ ಎ.ಪಿ. ರಂಗನಾಥ್ ಅವರು 1,507 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಪುಟ್ಟಣ್ಣ 8,260 ಮತಗಳನ್ನು ಪಡೆದರೆ, ರಂಗನಾಥ್ 6,753 ಮತಗಳನ್ನು ಗಳಿಸಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ ಮತದಾರರು ಫೆ.16ರಂದು ಮತದಾನ ಮಾಡಿದ್ದರು. ಒಟ್ಟು 19,152 ಮತಗಳ ಪೈಕಿ 16,544 ಮಂದಿ (ಪುರುಷರು 6,504, ಮಹಿಳೆಯರು 10,040) ಮತ ಚಲಾಯಿಸಿದರು.

ಇದೇ ಕ್ಷೇತ್ರದಿಂದ ಈ ಹಿಂದೆ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಾರ್ಚ್‌ ನಲ್ಲಿ ರಾಜೀನಾಮೆ ನೀಡಿದ್ದರು. ಅಂದಿನಿಂದ ಖಾಲಿ ಉಳಿದಿದ್ದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಇದೀಗ ಮತ್ತೆ ಪುಟ್ಟಣ್ಣ ಗೆಲುವು ಸಾಧಿಸಿದ್ದು, ಈ ಸ್ಥಾನದ ಅವಧಿ 2026 ನವೆಂಬರ್ 11ರವರೆಗೆ ಇರಲಿದೆ.

Read More
Next Story