ಪ್ರತಿಪಕ್ಷಗಳು ಚುನಾವಣೆ ಬಾಂಡ್‌ಗಳ ಮೂಲಕ ಹಣ  ಸ್ವೀಕರಿಸಿದ್ದು ಏಕೆ?:  ಬಿಜೆಪಿ
x

ಪ್ರತಿಪಕ್ಷಗಳು ಚುನಾವಣೆ ಬಾಂಡ್‌ಗಳ ಮೂಲಕ ಹಣ ಸ್ವೀಕರಿಸಿದ್ದು ಏಕೆ?: ಬಿಜೆಪಿ


ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಆಡಳಿತಾರೂಢ ಬಿಜೆಪಿ, ಇಂಡಿಯ ಒಕ್ಕೂಟದ ಸದಸ್ಯರು ಯೋಜನೆಗೆ ವಿರುದ್ಧವಾಗಿದ್ದರೆ ಏಕೆ ಹಣ ಸ್ವೀಕರಿಸಿದರು ಎಂದು ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್ ಚುನಾವಣೆ ಬಾಂಡ್‌ಗಳನ್ನು ರದ್ದು ಗೊಳಿಸಿ, ಅದು ಅಸಂವಿಧಾನಿಕ ಎಂದು ಕರೆದ ಒಂದು ತಿಂಗಳ ನಂತರ ಬಿಜೆಪಿ ಪ್ರತಿಕ್ರಿಯಿಸಿದೆ.

ಕಾಂ‌ಗ್ರೆಸ್ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಸುಪ್ರೀಂ ತೀರ್ಪನ್ನು ಬಳಸುತ್ತಿದೆ. ʻಕಳೆದ ಐದು ವರ್ಷಗಳಿಂದ ಇಂಡಿಯ ಒಕ್ಕೂಟದ ಪಾಲುದಾರರು ದಾನಿಗಳಿಂದ ಹಣವನ್ನು ನಿರಾಕರಿಸಲಿಲ್ಲ ಮತ್ತು ಈಗ ದಾನಿಗಳಿಗೆ ಹಣ ಹಿಂತಿರುಗಿಸಲು ಸಿದ್ಧರಿಲ್ಲʼ ಎಂದು ಬಿಜೆಪಿಯ ಹಿರಿಯ ನಾಯಕರು ಪ್ರತಿಕ್ರಿಯಿಸಿದ್ದಾರೆ.

ʻನೈತಿಕತೆ ಬಗ್ಗೆ ಪ್ರವಚನ ಬೇಡ': ʻಚುನಾವಣಾ ಬಾಂಡ್‌ಗಳ ಮೂಲಕ ಹಣ ಪಡೆಯುವುದು ಅಕ್ರಮವಲ್ಲ ಅಥವಾ ಅದು ಕಪ್ಪುಹಣವಲ್ಲ. ಎಸ್‌ಬಿಐನಿಂದ ಬಾಂಡ್‌ಗಳ ಮೂಲಕ ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಸುಪ್ರೀಂ ಕೋರ್ಟ್‌ನ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸುತ್ತದೆ. ಅದಕ್ಕೆ ನಾವು ಹಿಂಜರಿಯುವುದಿಲ್ಲ. ಆದರೆ, ಕಾಂಗ್ರೆಸ್ ಅಷ್ಟೊಂದು ನೈತಿಕತೆ ಹೊಂದಿದ್ದರೆ ಬಾಂಡ್‌ ಮೂಲಕ ಹಣ ಏಕೆ ಸ್ವೀಕರಿಸಿತು? ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಾಂಡ್‌ಗಳ ಮೂಲಕ ಪಡೆದ ಹಣವನ್ನು ವಾಪಸ್‌ ಏಕೆ ಮಾಡುತ್ತಿಲ್ಲ?ʼ ಎಂದು ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಸಿರೋಯಾ ʻಫೆಡರಲ್‌ʼನೊಂದಿಗೆ ಮಾತನಾಡುತ್ತ ಪ್ರಶ್ನಿಸಿದರು.

ʻಕಾಂಗ್ರೆಸ್ ನೇತೃತ್ವದ ಯುಪಿಎ ಎದುರಿಸಿದ ಭ್ರಷ್ಟಾಚಾರದ ಆರೋಪಗಳಿಂದ ಚುನಾವಣೆ ಬಾಂಡ್ ಯೋಜನೆಯನ್ನು ರೂಪಿಸಲಾಯಿ ತು. ಕಾಂಗ್ರೆಸ್ ಈಗ ನೈತಿಕ ನಿಲುವು ತೆಗೆದುಕೊಳ್ಳಬಾರದು. ಏಕೆಂದರೆ, ಅದು ಕಾಂಗ್ರೆಸ್‌ ಅಥವಾ ಮೈತ್ರಿಕೂಟದ ಪಕ್ಷಗಳಿಗೆ ಸರಿ ಹೊಂದುವುದಿಲ್ಲ. ಬಿಜೆಪಿ ಚುನಾವಣೆ ಪ್ರಕ್ರಿಯೆಯನ್ನು ಸ್ವಚ್ಛಗೊಳಿಸಲು ಬಾಂಡ್‌ ಯೋಜನೆ ರೂಪಿಸಿದೆʼ ಎಂದು ಸಿರೋಯಾ ಹೇಳಿದರು.

ಡಿಎಂಕೆ, ಟಿಎಂಸಿಯನ್ನೂ ಪ್ರಶ್ನಿಸಿ:

ʻಕಾಂಗ್ರೆಸ್ ಈ ಬಗ್ಗೆ ತಮಿಳುನಾಡಿನ ಡಿಎಂಕೆ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಮತ್ತಿತರ ಒಕ್ಕೂಟದ ಪಾಲುದಾರರನ್ನು ಕೂಡ ಪ್ರಶ್ನಿಸಬೇಕುʼ ಎಂದು ಸಿರೋಯಾ ಹೇಳಿದರು. ʻಬಿಜೆಪಿ ದೇಶಾದ್ಯಂತ ಅಸ್ತಿತ್ವ ಇರುವ ದೊಡ್ಡ ಪಕ್ಷ. 16 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಆದರೆ, ಒಂದೇ ರಾಜ್ಯದಲ್ಲಿ ಆಡಳಿತ ನಡೆ ಸುತ್ತಿರುವ ತೃಣಮೂಲ ಕಾಂಗ್ರೆಸ್‌ಗೆ 1,300 ಕೋಟಿ ರೂ.ದೇಣಿಗೆ ಸಂದಾಯವಾಗಿದೆ. ಇದು ಹೇಗೆ? ಲಾಟರಿ ರಾಜನಿಂದ ಶೇ.77 ರಷ್ಟು ಹಣ ಪಡೆದಿರುವ ಡಿಎಂಕೆಯನ್ನು ಪ್ರಶ್ನಿಸಿ ಎಂದು ರಾಹುಲ್ ಗಾಂಧಿ ಅವರನ್ನು ಕೇಳಲು ಬಯಸುತ್ತೇನೆʼ ಎಂದು ಹೇಳಿದರು.

ಬಿಜೆಪಿ ರಕ್ಷಣೆಗೆ ಆರ್‌ಎಸ್‌ಎಸ್: ಬಿಜೆಪಿ ರಕ್ಷಣೆಗೆ ಆರ್‌ಎಸ್‌ಎಸ್ ಮುಂದಾಗಿದೆ. ನಾಗ್ಪುರದಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಚುನಾವಣೆ ಬಾಂಡ್ ಯೋಜನೆ ಒಂದು ಪ್ರಯೋಗ ಎಂದು ಹೇಳಿದರು. ʻಚುನಾವಣಾ ಬಾಂಡ್‌ ಯೋಜನೆಯನ್ನು ಏಕಾಏಕಿ ಪರಿಚಯಿಸಿಲ್ಲ; ಏನನ್ನಾದರೂ ಪರಿಚಯಿಸಿದಾಗ ಪ್ರಶ್ನೆಗಳು ಉದ್ಭವಿಸುತ್ತವೆʼ ಎಂದು ಸಮರ್ಥಿಸಿಕೊಂಡಿದ್ದಾರೆ.

ವಿರೋಧ ಪಕ್ಷಗಳಿಗೆ ಸಹಾಯವಾಗದು: ಚುನಾವಣೆ ಬಾಂಡ್‌ ವಿಷಯವು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡಲು ವಿರೋಧ ಪಕ್ಷಗಳಿಗೆ ಸಹಾಯ ಮಾಡುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ʻಪ್ರತಿಪಕ್ಷಗಳ ಸಮಸ್ಯೆ ಏನೆಂದರೆ ಅವರು ಚುನಾವಣಾ ಬಾಂಡ್ ಯೋಜನೆಯನ್ನು ಟೀಕಿಸಿವೆ. ಆದರೆ, ಬಾಂಡ್‌ ಮೂಲಕ ಹಣ ಸ್ವೀಕರಿಸಿದ್ದಾರೆ. ಪ್ರತಿಪಕ್ಷಗಳು ಮೊದಲಿನಿಂದಲೇ ಯೋಜನೆಯನ್ನು ವಿರೋಧಿಸಿ, ಬಾಂಡ್‌ಗಳನ್ನು ಸ್ವೀಕರಿಸುವುದಿಲ್ಲ ಎಂಬ ನಿಲುವು ತೆಗೆದುಕೊಂಡಿದ್ದರೆ, ಅದು ಸಹಾಯ ಮಾಡುತ್ತಿತ್ತು. ಆದರೆ, ಬಹುತೇಕ ರಾಜಕೀಯ ಪಕ್ಷಗಳು ಬಾಂಡ್‌ ಮೂಲಕ ಹಣ ಸ್ವೀಕರಿಸಿರುವುದರಿಂದ, ಸಾರ್ವತ್ರಿಕ ಚುನಾವಣೆಯಲ್ಲಿ ಸಹಾಯ ಮಾಡುವ ಸಾಧ್ಯತೆಯಿಲ್ಲʼಎಂದು ಸೆಂಟರ್‌ ಫಾರ್‌ ಸ್ಟಡಿ ಆಫ್‌ ಡೆವಲಪಿಂಗ್‌ ಸೊಸೈಟಿಯ ಪ್ರಾಧ್ಯಾಪಕ ಅಭಯ್ ಕುಮಾರ್ ದುಬೆ ಫೆಡರಲ್‌ಗೆ ತಿಳಿಸಿದರು.

ʻಬಿಜೆಪಿ ವಿರುದ್ಧ ಪ್ರಬಲ ವಾದ ಮಂಡಿಸಲು ಸಾಧ್ಯವಾದರೆ ಮಾತ್ರ ವಿರೋಧ ಪಕ್ಷಗಳಿಗೆ ಇದರಿಂದ ಲಾಭವಾಗಲಿದೆʼ ಎಂದು ದುಬೆ ಹೇಳಿದರು.

Read More
Next Story