ಲಾಭಾಕಾಂಕ್ಷಿಗಳು ಪಕ್ಷ ಬಿಡಲಿ: ಅಖಿಲೇಶ್
x

ಲಾಭಾಕಾಂಕ್ಷಿಗಳು ಪಕ್ಷ ಬಿಡಲಿ: ಅಖಿಲೇಶ್


ಉತ್ತರಪ್ರದೇಶದಿಂದ 10 ರಾಜ್ಯಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿರುವಾಗಲೇ ಸಮಾಜವಾದಿ ಪಕ್ಷವನ್ನು ತೊರೆದಿರುವ ಮುಖ್ಯ ಸಚೇತಕ ಮನೋಜ್‌ ಪಾಂಡೆ ರಾಜೀನಾಮೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಲಾಭ ಗಳಿಸಲು ಬಯಸುವವರು ಬಿಡುತ್ತಾರೆ ಎಂದು ಫೆ.27 ರಂದು ಹೇಳಿದ್ದಾರೆ.

ಯಾದವ್ ಕರೆದ ಸಭೆಗೆ ಎಂಟು ಶಾಸಕರು ಗೈರುಹಾಜರಾಗಿದ್ದು, ಕೆಲವು ಎಸ್‌ಪಿ ಶಾಸಕರು ಅಡ್ಡ ಮತದಾನ ಮಾಡುವ ಬಗ್ಗೆ ಕಳವಳ ವ್ಯಕ್ತವಾಗಿದೆ.

ಬಿಜೆಪಿಯಿಂದ ಗೆಲುವಿಗೆ ವಾಮ ಮಾರ್ಗ: ಮತ ಚಲಾಯಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಬಿಜೆಪಿ ಚುನಾವಣೆ ಗೆಲ್ಲಲು ಯಾವು ದೇ ಮಾರ್ಗವನ್ನಾದರೂ ಹಿಡಿಯುತ್ತದೆ ಎಂದು ಆರೋಪಿಸಿದರು. ʻಪರಿಸ್ಥಿತಿಯ ಲಾಭ ಪಡೆಯಲು ಬಯಸುವವರು ಹೋಗುತ್ತಾರೆʼ ಎಂದು ಹೇಳಿದರು.

ʻಬೇರೊಬ್ಬರ ಹಾದಿಯಲ್ಲಿ ಮುಳ್ಳುಗಳನ್ನು ಚೆಲ್ಲುವವರು ಅಥವಾ ಇತರರಿಗೆ ಗುಂಡಿ ತೋಡುವವರು ಬೆಲೆ ತೆರುತ್ತಾರೆ. ಚಂಡೀಗಢದಲ್ಲಿ ಏನಾಯಿತು ಎಂಬುದನ್ನು ನೋಡಿದ್ದೀರಿ. ಸಂವಿಧಾನವನ್ನು ಉಳಿಸಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳುತ್ತೇನೆ. ಚುನಾವಣೆ ಗೆಲ್ಲಲು ಬಿಜೆಪಿ ಕೆಲವು ಶಾಸಕರಿಗೆ ಲಾಭದ ಆಸೆ ತೋರಿಸಿರಬೇಕು. ಹೋರಾಟ ಮಾಡಲು ಧೈರ್ಯವಿಲ್ಲದವರು ಹೋಗುತ್ತಾರೆ. ಕೆಲವರು ತಮ್ಮ ಭದ್ರತೆಗಾಗಿ ಹೆದರಿರಬಹುದು, ಕೆಲವರಿಗೆ ಬೆದರಿಕೆ ಹಾಕಿರಬಹುದುʼ ಎಂದು ಯಾದವ್‌ ಹೇಳಿದರು.

ಸಮೀಕರಣಗಳು: ರಾಜ್ಯದ 10 ರಾಜ್ಯಸಭೆ ಸ್ಥಾನಗಳಿಗೆ ಬಿಜೆಪಿ ಎಂಟು ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿ ಮತ್ತು ಎಸ್‌ಪಿ ಕ್ರಮವಾಗಿ ಏಳು ಮತ್ತು ಮೂರು ಸದಸ್ಯರನ್ನುಮೇಲ್ಮನೆಗೆ ಕಳುಹಿಸುವಷ್ಟು ಸಂಖ್ಯೆಯನ್ನು ಹೊಂದಿವೆ. ಬಿಜೆಪಿ ತನ್ನ ಎಂಟನೇ ಅಭ್ಯರ್ಥಿಯಾಗಿ ಸಂಜಯ್ ಸೇಠ್ ಅವರನ್ನು ಕಣಕ್ಕಿಳಿಸಿದ್ದು, ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಕೈಗಾರಿಕೋದ್ಯಮಿ ಮತ್ತು ಮಾಜಿ ಎಸ್‌ಪಿ ನಾಯಕ ಸೇಠ್, 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಎಸ್‌ಪಿ ನಾಯಕರಿಂದ ಅಡ್ಡ ಮತದಾನ ನಡೆದರೆ, ಸೇಠ್ ಆಯ್ಕೆಯಾಗಬಹುದು.

403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 252 ಮತ್ತು ಎಸ್‌ಪಿ 108 ಶಾಸಕರನ್ನು ಹೊಂದಿವೆ. ಎಸ್‌ಪಿಯ ಮೈತ್ರಿಕೂಟದ ಪಾಲುದಾರ ಕಾಂಗ್ರೆಸ್ ಎರಡು ಸ್ಥಾನ ಹೊಂದಿದೆ. ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳ (ಸೋನೆಲಾಲ್) 13 ಸ್ಥಾನ, ನಿಶಾದ್ ಪಕ್ಷ ಆರು, ಆರ್‌ಎಲ್‌ಡಿ ಒಂಬತ್ತು, ಎಸ್‌ಬಿಎಸ್‌ಪಿ ಆರು, ಜನಸತ್ತಾ ದಳ ಲೋಕತಾಂತ್ರಿಕ್ ಎರಡು ಮತ್ತು ಬಿಎಸ್‌ಪಿ ಒಂದು ಸ್ಥಾನ ಹೊಂದಿದೆ. ನಾಲ್ಕು ಸ್ಥಾನಗಳು ಖಾಲಿ ಇವೆ.

ಅಭ್ಯರ್ಥಿಗಳು: ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್, ಮಾಜಿ ಸಂಸದ ಚೌಧರಿ ತೇಜ್‌ವೀರ್ ಸಿಂಗ್, ಪಕ್ಷದ ಉತ್ತರ ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ ಅಮರ್‌ಪಾಲ್ ಮೌರ್ಯ, ಮಾಜಿ ರಾಜ್ಯ ಸಚಿವೆ ಸಂಗೀತಾ ಬಲ್ವಂತ್, ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, ಮಾಜಿ ಶಾಸಕ ಸಾಧನಾ ಸಿಂಗ್ ಮತ್ತು ಆಗ್ರಾ. ಮೇಯರ್ ನವೀನ್ ಜೈನ್ ಕಣದಲ್ಲಿದ್ದಾರೆ. ಎಸ್ಪಿ ನಟಿ-ಸಂಸದೆ ಜಯಾ ಬಚ್ಚನ್, ನಿವೃತ್ತ ಐಎಎಸ್ ಅಧಿಕಾರಿ ಅಲೋಕ್ ರಂಜನ್ ಮತ್ತು ದಲಿತ ನಾಯಕ ರಾಮ್‌ಜಿ ಲಾಲ್ ಸುಮನ್ ಅವರನ್ನು ಕಣಕ್ಕಿಳಿಸಿದೆ. ಒಬ್ಬ ಅಭ್ಯರ್ಥಿಗೆ 37 ಪ್ರಥಮ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ.

Read More
Next Story