
ಬಿಆರ್‌ಎಸ್ ಸಂಸದ ಪೋತುಗಂಟಿ ರಾಮುಲು ಬಿಜೆಪಿಗೆ ಸೇರ್ಪಡೆ
ಹೊಸದಿಲ್ಲಿ, ಫೆ.29- ತೆಲಂಗಾಣದ ಬಿಆರ್‌ಎಸ್ ಸಂಸದ ಪೋತುಗಂಟಿ ರಾಮುಲು ಅವರು ಗುರುವಾರ ಬಿಜೆಪಿ ಸೇರಿದರು.
ರಾಮುಲು ಅವರೊಂದಿಗೆ ಅವರ ಪುತ್ರ ಭರತ್ ಪ್ರಸಾದ್ ಮತ್ತು ತೆಲಂಗಾಣದ ಹಲವಾರು ಬಿಆರ್‌ಎಸ್ ನಾಯಕರು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ತೆಲಂಗಾಣ ಪಕ್ಷದ ಉಸ್ತುವಾರಿ ತರುಣ್ ಚುಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪ ಡೆಗೊಂಡರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಕೆ. ಅರುಣಾ ಮತ್ತು ಪಕ್ಷದ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್ ಉಪಸ್ಥಿತರಿದ್ದರು.
ರಾಮುಲು ಅವರನ್ನು ಸ್ವಾಗತಿಸಿದ ಲಕ್ಷ್ಮಣ್, ಸಂಸದ ರಾಮುಲು ತೆಲಂಗಾಣದ ʻಅತ್ಯಂತ ಸಮರ್ಪಿತ ದಲಿತ ನಾಯಕʼ ಎಂದರು. ʻಪಕ್ಷದ ಮುಖ್ಯಸ್ಥ ಜೆ.ಪಿ. ನಡ್ಡಾ ಪರವಾಗಿ ಅವರನ್ನು ಬಿಜೆಪಿಗೆ ಸ್ವಾಗತಿಸುತ್ತೇನೆʼ ಎಂದು ಚುಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ʻಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಕಛ್‌ನಿಂದ ಗುವಾಹಟಿಯವರೆಗೆ ಸಮಾಜಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು ಬಿಜೆಪಿ ಸೇರುತ್ತಿದ್ದಾರೆʼ ಎಂದು ಚುಗ್ ಹೇಳಿದರು. ʻಅವರು ಮೋದಿ ತಂಡಕ್ಕೆ ಸೇರ್ಪಡೆಗೊಂಡಿರುವುದಕ್ಕೆ ನನಗೆ ಸಂತೋಷ ಮತ್ತು ಕೃತಜ್ಞತೆ ಇದೆ. ವಿಕಸಿತ್ ಭಾರತ್ ರಚಿಸಲು ಪ್ರಧಾನಿ ಮೋದಿಯವರ ಪ್ರಯತ್ನಗಳು, ದೂರದೃಷ್ಟಿ ಮತ್ತು ಸಂಕಲ್ಪದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆʼ ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.