
ಟಿಡಿಪಿ-ಬಿಜೆಪಿ ಮೈತ್ರಿ: ಶಾ, ನಾಯ್ಡು ಎರಡನೇ ಸುತ್ತಿನ ಮಾತುಕತೆ
ಹೊಸದಿಲ್ಲಿ, ಮಾ.9- ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರು ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಶನಿವಾರ ಎರಡನೇ ಸುತ್ತಿನ ಮಾತುಕತೆ ನಡೆಸಿದರು.
ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಯಲಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಬಂಡಾಯ ಸಂಸದ ಕೆ. ರಘು ರಾಮ ಕೃಷ್ಣರಾಜು, ʻಮೈತ್ರಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಪಕ್ಷಗಳ ಒಗ್ಗೂಡುವಿಕೆ ರಾಜ್ಯವನ್ನು ಆಳುತ್ತಿರುವ ʻದೆವ್ವʼ ದಿಂದ ಮುಕ್ತಗೊಳಿಸಲು ಅತ್ಯಗತ್ಯʼ ಎಂದು ಹೇಳಿದರು.
ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಗುರುವಾರ ಕೂಡ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಿದ್ದರು.
ʻಬಿಜೆಪಿ, ಜನಸೇನೆ ಮತ್ತು ಟಿಡಿಪಿ ಮುಂಬರುವ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡಲು ತಾತ್ವಿಕವಾಗಿ ನಿರ್ಧರಿಸಿವೆ. ವಿಧಾನಗಳನ್ನು ರೂಪಿಸಲಾಗುತ್ತಿದೆʼ ಎಂದು ಟಿಡಿಪಿಯ ಹಿರಿಯ ನಾಯಕ ಮತ್ತು ರಾಜ್ಯಸಭೆ ಸದಸ್ಯ ಕೆ. ರವೀಂದ್ರ ಕುಮಾರ್ ಶುಕ್ರವಾರ ಹೇಳಿದ್ದಾರೆ.