
Protest | ಕಂದಾಯ ಇಲಾಖೆ ವಿರುದ್ಧ ಸಬ್ ರಿಜಿಸ್ಟ್ರಾರ್ ಅಹೋರಾತ್ರಿ ಧರಣಿ
ಚಲನಾದೇಶ ಹಾಗೂ ಲಾಗಿನ್ ಐ ಡಿ ನೀಡದೇ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಮತ್ತು ಐಜಿಆರ್ ಕೆ.ಎ. ದಯಾನಂದ್ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿ ಉಪ ನೋಂದಣಾಧಿಕಾರಿಗಳು ಧರಣಿ ನಡೆಸುತ್ತಿದ್ದಾರೆ.
ಹೈಕೋರ್ಟ್ ವಿಭಾಗೀಯ ಪೀಠದ ಆದೇಶವಿದ್ದರೂ ಕರ್ತವ್ಯ ನಿರ್ವಹಿಸಲು ಚಲನಾದೇಶ ಮತ್ತು ಲಾಗಿನ್ ಐಡಿ ನೀಡದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸಬ್‌ರಿಜಿಸ್ಟ್ರಾರ್‌ಗಳು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಬೆಂಗಳೂರಿನ ಕೆ.ಜಿ.ರಸ್ತೆಯ ಕಂದಾಯ ಭವನದಲ್ಲಿರುವ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ. ದಯಾನಂದ್ ಕಚೇರಿ ಮುಂಭಾಗ ಬೆಂಗಳೂರು ನಗರದ ಹಿರಿಯ, ಕಿರಿಯ ಸಬ್‌ರಿಜಿಸ್ಟ್ರಾರ್‌ಗಳು ಪ್ರತಿಭಟನೆ ಕೈಗೊಂಡಿದ್ದಾರೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಡಿ.10ರ 90 ಅಧಿಕಾರಿಗಳ ಕೌನ್ಸೆಲಿಂಗ್ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಫೆ.18ರಂದು ತಡೆಯಾಜ್ಞೆ ವಿಧಿಸಿತ್ತು. ಆದೇಶ ಬಂದು 48 ಗಂಟೆ ಕಳೆದರೂ ಚಲನಾದೇಶ ಮತ್ತು ಲಾಗಿನ್ ಐಡಿ ಕೊಡದೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ. ದಯಾನಂದ್ ದ್ವೇಷ ಸಾಧಿಸುತ್ತಿದ್ದಾರೆ. ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕೆಂದು ಉಪ ನೋಂದಣಾಧಿಕಾರಿಗಳು ಆಗ್ರಹಿಸಿದರು.
1865ರಿಂದ ಉಪನೋಂದಣಾಧಿಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, 160 ವರ್ಷಗಳ ಇತಿಹಾಸವಿದೆ. ಇಲ್ಲಿಯವರೆಗೂ ಇಲಾಖೆಯಲ್ಲಿ ಧರಣಿ, ಪ್ರತಿಭಟನೆಗಳು ನಡೆದಿರಲಿಲ್ಲ. ಇದೀಗ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಆರ್‌ಎ) ಅಧೀನದಲ್ಲಿದೆ. ವರ್ಗಾವಣೆ ಸಮಯದಲ್ಲಿ ಡಿಪಿಆರ್‌ಎ ಮಾರ್ಗಸೂಚಿ ಪಾಲಿಸದೆ ಬೇಕಾಬಿಟ್ಟಿ ವರ್ಗಾವಣೆ ಮಾಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.
ವಯಸ್ಸಾದ ತಂದೆ-ತಾಯಿ ಮತ್ತು ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿದ್ದಾರೆ. ಇದ್ಯಾವುದನ್ನೂ ಪರಿಗಣಿಸದೆ ಏಕಾಏಕಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ವೈದ್ಯಕೀಯ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ನಾಗರಿಕ ಸೇವೆಗಳ (ವೈದ್ಯಕೀಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಕಾಯ್ದೆ-2011 ರೂಪಿಸಲಾಗಿದೆ. ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ-2020 ಹಾಗೂ ರಾಜ್ಯ ಪೊಲೀಸ್ ಇಲಾಖೆ (ವರ್ಗಾವಣೆ) (ವಿಶೇಷ) ನಿಯಮಗಳು 2022ರ ರಚಿಸಲಾಗಿದೆ. ಇದೇ ಮಾದರಿಯಲ್ಲಿ ನಿಯಮಗಳು ರೂಪಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೂ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಡಿ.10ರ ವರ್ಗಾವಣೆ ಆದೇಶದಂತೆ ಕರ್ತವ್ಯನಿರ್ವಹಿಸುತ್ತಿರುವ ಸಬ್‌ರಿಜಿಸ್ಟ್ರಾರ್‌ಗಳು ಹೈಕೋರ್ಟ್ ಆದೇಶದಂತೆ ವಾಪಸ್ ಹಳೆಯ ಕಚೇರಿಗೆ ಹೋಗಲೂ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಬಿಡುತ್ತಿಲ್ಲ. ಇದರಿಂದ ಹೈಕೋರ್ಟ್ ಆದೇಶ ಉಲ್ಲಂಘಿಸಿದ ಅಪವಾದವನ್ನು ಸಬ್ ರಿಜಿಸ್ಟ್ರಾರ್‌ಗಳು ಎದುರಿಸಬೇಕಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.