
ರೈತರ ಆತ್ಮಹತ್ಯೆಗಿಂತ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಿದೆ: ಕಾರ್ಯಪಡೆ ರಚನೆಗೆ ಸುಪ್ರೀಂ ಆದೇಶ
ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠವು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ರೈತರ ಆತ್ಮಹತ್ಯೆಯನ್ನೂ ಮೀರಿಸಿದೆ ಎಂದು ಗಂಭೀರ ಕಳವಳ ವ್ಯಕ್ತಪಡಿಸಿತು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕುರಿತಾದ ಆತಂಕಗಳನ್ನು ನಿವಾರಿಸಲು ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ಹತ್ತು ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸುವಂತೆ ಆದೇಶಿಸಿದೆ. ಈ ಆದೇಶವು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ ದೆಹಲಿ) 2023ರಲ್ಲಿ ಇಬ್ಬರು ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆಯ ಸಂದರ್ಭದಲ್ಲಿ ಬಂದಿದೆ. ಈ ಘಟನೆಗಳನ್ನು ಪೋಷಕರು ಕೊಲೆ ಎಂದು ಆರೋಪಿಸಿದ್ದರೂ, ಪೊಲೀಸರು ಆತ್ಮಹತ್ಯೆ ಎಂದು ಹೇಳಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಮಾರ್ಚ್ 24, 2025) ದೆಹಲಿ ಪೊಲೀಸರಿಗೆ ಸೂಚಿಸಿತು.
ರೈತರ ಸಾವನ್ನು ಮೀರಿಸಿದ ಅಂಕಿಗಳು
ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠವು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ರೈತರ ಆತ್ಮಹತ್ಯೆಯನ್ನೂ ಮೀರಿಸಿದೆ ಎಂದು ಗಂಭೀರ ಕಳವಳ ವ್ಯಕ್ತಪಡಿಸಿತು. "2021ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ, ದೇಶದಲ್ಲಿ 13,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಒಂದು ದಶಕದ ಹಿಂದಿನ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿದೆ. 2024ರಲ್ಲಿಯೇ ಶೇಕಡಾ 4ರಷ್ಟು ಏರಿಕೆಯಾಗಿದ್ದು, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವು ಕೃಷಿ ಸಂಕಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆಯನ್ನು ಮೀರಿಸಿದೆ " ಎಂದು ನ್ಯಾಯಾಲಯ ಹೇಳಿತು.
ಕಾರ್ಯಪಡೆ ಯಾಕೆ? ಸದಸ್ಯರು ಯಾರು?
ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಮುಖ ಕಾರಣಗಳನ್ನು ಗುರುತಿಸುವುದು ಮತ್ತು ರ‍್ಯಾಗಿಂಗ್, ಜಾತಿ ಆಧಾರಿತ ತಾರತಮ್ಯ, ಲಿಂಗ ಆಧಾರಿತ ತಾರತಮ್ಯ, ಲೈಂಗಿಕ ಕಿರುಕುಳ, ಶೈಕ್ಷಣಿಕ ಒತ್ತಡ, ಆರ್ಥಿಕ ಭಾರ ಮತ್ತು ಇತರ ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟುವ ಕಾನೂನುಗಳ ಪರಿಣಾಮಗಳನ್ನು ಅಳೆಯುವ ಜವಾಬ್ದಾರಿಯನ್ನು ಕಾರ್ಯಪಡೆಗೆ ವಹಿಸಲಾಗಿದೆ. ಈ ಕಾರ್ಯಪಡೆಯು ಸಮಗ್ರ ವರದಿ ಸಿದ್ಧಪಡಿಸಿ, ಶಿಫಾರಸುಗಳನ್ನು ಮಂಡಿಸಲಿದೆ. ನಾಲ್ಕು ತಿಂಗಳಲ್ಲಿ ಮಧ್ಯಂತರ ವರದಿ ಮತ್ತು ಎಂಟು ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಕಾರ್ಯಪಡೆಯ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ನೇಮಕಗೊಂಡಿದ್ದಾರೆ. ಸದಸ್ಯರ ವಿವರ ಈ ಕೆಳಗಿನಂತಿದೆ:
1. ಡಾ. ಅಲೋಕ್ ಸರಿನ್, ಮನೋವೈದ್ಯರು, ಸೀತಾರಾಮ್ ಭಾರ್ತಿಯಾ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ನವದೆಹಲಿ
2. ಪ್ರೊ. ಮೇರಿ ಇ ಜಾನ್ (ನಿವೃತ್ತ), ಮಾಜಿ ನಿರ್ದೇಶಕಿ, ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರ, ನವದೆಹಲಿ
3. ಅರ್ಮಾನ್ ಅಲಿ, ಕಾರ್ಯನಿರ್ವಾಹಕ ನಿರ್ದೇಶಕ, ಅಂಗವಿಕಲರಿಗಾಗಿ ಉದ್ಯೋಗ ಉತ್ತೇಜನ ರಾಷ್ಟ್ರೀಯ ಕೇಂದ್ರ
4. ಪ್ರೊ. ರಾಜೇಂದರ್ ಕಚ್ರೂ, ಸ್ಥಾಪಕ, ಅಮನ್ ಸತ್ಯ ಕಚ್ರೂ ಟ್ರಸ್ಟ್
5. ಡಾ. ಅಕ್ಸಾ ಶೇಖ್, ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕಿ, ಹಮ್ದರ್ದ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್, ನವದೆಹಲಿ
6. ಡಾ. ಸೀಮಾ ಮೆಹ್ರೋತ್ರಾ, ಕ್ಲಿನಿಕಲ್ ಮನಶಾಸ್ತ್ರ ಪ್ರಾಧ್ಯಾಪಕಿ, ನಿಮ್ಹಾನ್ಸ್
7. ಪ್ರೊ. ವರ್ಜೀನಿಯಸ್ ಕ್ಸಾಕ್ಸಾ, ಸಂದರ್ಶಕ ಪ್ರಾಧ್ಯಾಪಕರು, ಮಾನವ ಅಭಿವೃದ್ಧಿ ಸಂಸ್ಥೆ (IHD), ನವದೆಹಲಿ
8. ಡಾ. ನಿಧಿ ಎಸ್ ಸಭರ್ವಾಲ್, ಅಸೋಸಿಯೇಟ್ ಪ್ರೊಫೆಸರ್, ಉನ್ನತ ಶಿಕ್ಷಣ ನೀತಿ ಸಂಶೋಧನಾ ಕೇಂದ್ರ, ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ವಿಶ್ವವಿದ್ಯಾಲಯ, ನವದೆಹಲಿ
9. ಅಪರ್ಣಾ ಭಟ್, ಹಿರಿಯ ವಕೀಲೆ (ಅಮಿಕಸ್ ಕ್ಯೂರಿ)
ತನಿಖೆಗೆ ಆದೇಶ
ಐಐಟಿ ದೆಹಲಿಯಲ್ಲಿ ಜುಲೈ 2023ರಲ್ಲಿ ಆಯುಷ್ ಆಶ್ನಾ ಮತ್ತು ಸೆಪ್ಟೆಂಬರ್ 1, 2023ರಲ್ಲಿ ಅನಿಲ್ ಕುಮಾರ್ ಎಂಬ ಇಬ್ಬರು ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಗಳಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಪೋಷಕರು ತಮ್ಮ ಮಕ್ಕಳು ಜಾತಿ ತಾರತಮ್ಯಕ್ಕೆ ಒಳಗಾಗಿದ್ದರು ಮತ್ತು ಇದು ಕೊಲೆ ಪ್ರಕರಣ ಎಂದು ಆರೋಪಿಸಿದ್ದರು. ಈ ಬಗ್ಗೆ ದೆಹಲಿ ಹೈಕೋರ್ಟ್ ಜನವರಿ 2024ರಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. "ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕಾಗಿತ್ತು. ಕೇವಲ ಸಿಆರ್‌ಪಿಸಿ ಸೆಕ್ಷನ್ 174ರ ಅಡಿಯಲ್ಲಿ ತನಿಖೆ ಸಾಕಾಗದು" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಆತ್ಮಹತ್ಯೆ ತಡೆಗೆ ಸಮಗ್ರ ಕ್ರಮ ಅಗತ್ಯ
ನ್ಯಾಯಾಲಯವು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಪ್ರತ್ಯೇಕ ಘಟನೆಗಳಲ್ಲ ಎಂದು ಒತ್ತಿ ಹೇಳಿತು. "ರ‍್ಯಾಗಿಂಗ್, ಜಾತಿ ಆಧಾರಿತ ತಾರತಮ್ಯ, ಲೈಂಗಿಕ ಕಿರುಕುಳ, ಶೈಕ್ಷಣಿಕ ಒತ್ತಡ ಇತ್ಯಾದಿ ಕಾರಣಗಳಿಂದ ಇಂಥ ಘಟನೆಗಳು ಸಂಭವಿಸುತ್ತಿವೆ. ಇದನನ್ಉ ತಡೆಗಟ್ಟಲು ಪ್ರಸ್ತುತ ಕಾನೂನು ಮತ್ತು ಸಾಂಸ್ಥಿಕ ವ್ಯವಸ್ಥೆ ಸಾಕಾಗುತ್ತಿಲ್ಲ" ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.