ಮುಳುವಾದ ಹೇಳಿಕೆ | ಎಚ್‌ಡಿಕೆಗೆ ಮಹಿಳಾ ಆಯೋಗ ನೋಟಿಸ್;‌ ಮಂಡ್ಯದಲ್ಲಿ ಮಹಿಳೆಯರಿಂದ ʼಗೋ ಬ್ಯಾಕ್ʼ
x

ಮುಳುವಾದ ಹೇಳಿಕೆ | ಎಚ್‌ಡಿಕೆಗೆ ಮಹಿಳಾ ಆಯೋಗ ನೋಟಿಸ್;‌ ಮಂಡ್ಯದಲ್ಲಿ ಮಹಿಳೆಯರಿಂದ ʼಗೋ ಬ್ಯಾಕ್ʼ

ತುಮಕೂರಿನ ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ಪ್ರಚಾರ ಮಾಡುತ್ತಾ, “ಕಾಂಗ್ರೆಸ್‌ ಗ್ಯಾರಂಟಿಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ” ಎಂದು ಹೆಚ್‌ ಡಿಕೆ ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.


ಲೋಕಸಭಾ ಚುನಾವಣಾ ಪ್ರಚಾರ ಭರದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಮಹಿಳೆಯರ ವಿಷಯದಲ್ಲಿ ನಾಲಗೆ ಹರಿಬಿಟ್ಟು ಹಳ್ಳಿ ಮಹಿಳೆಯರಿಗೆ ಅಪಮಾನಕಾರಿ ಹೇಳಿಕೆ ನೀಡಿರುವುದು ಇದೀಗ ಅವರಿಗೇ ತಿರುಗುಬಾಣವಾಗಿದೆ.

ತುಮಕೂರಿನ ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ಪ್ರಚಾರ ಮಾಡುತ್ತಾ, “ಕಾಂಗ್ರೆಸ್‌ ಗ್ಯಾರಂಟಿಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ” ಎಂದು ಎಚ್‌ ಡಿಕೆ ಹೇಳಿದ್ದರು.

ಕಾಂಗ್ರೆಸ್‌ ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, “ಇವತ್ತಿನ ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರಿಂದ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಈ ರೀತಿ ಉಚಿತ ಯೋಜನೆ ಕೊಟ್ಟರೆ ಹಳ್ಳಿಯ ತಾಯಂದಿರ ಬದುಕು ಏನಾಗಬೇಕು? ಈ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕಿದೆ. ನಿಮ್ಮ ಕುಟುಂಬದ ಬದುಕೇನಾಗಬೇಕು ಯೋಚನೆ ಮಾಡಬೇಕಿದೆ. ಅವರಿಗೆ ಐದು ಉಚಿತ ಗ್ಯಾರಂಟಿ ಬಿಟ್ಟು ಬೇರೆ ಏನೂ ಇಲ್ಲ”ಎಂದು ಹೇಳಿದ್ದರು.

ಕಾಂಗ್ರೆಸ್‌ ಖಂಡನೆ

ಕಾಂಗ್ರೆಸ್‌ ನಾಯಕರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಕುಮಾರಸ್ವಾಮಿ ಅವರು ಹಳ್ಳಿ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂಬಿ ಪಾಟೀಲ್‌, ವಿ.ಎಸ್‌ ಉಗ್ರಪ್ಪ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಮೊದಲಾದ ಕಾಂಗ್ರೆಸ್‌ ನಾಯಕರು ಎಚ್‌ ಡಿಕೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

“ಹೋರಾಟ ಮಾಡುವ ರೈತ ಮಹಿಳೆಗೆ ಇಷ್ಟು ದಿನ ಎಲ್ಲಿ ಮಲಗಿದ್ದೆ ಎಂದು ಕೇಳಿದ್ದ ಇದೇ ನಾಯಕರು ಸಂಸದೆ ಸುಮಲತಾ ಅವರಿಗೆ ಕೆಆರ್‌ಎಸ್‌ಗೆ ಅಡ್ಡ ಮಲಗು ಎಂದು ಹೇಳಿದ್ದರು! ಮಹಿಳೆಯರನ್ನು ಹೀಯಾಳಿಸುವ ಇಂತಹ ಸಂಸ್ಕೃತಿಯ ನಾಯಕರನ್ನು ಎನ್‌ ಡಿ ಎ ಒಕ್ಕೂಟಕ್ಕೆ ಸೇರಿಸಿಕೊಂಡಿರುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು” ಎಂದು ಕಾಂಗ್ರೆಸ್ ಟ್ವೀಟ್‌ ಮಾಡಿದೆ.

ಎಚ್‌ ಡಿಕೆಗೆ ಮಹಿಳಾ ಆಯೋಗದಿಂದ ನೋಟಿಸ್‌

ಕುಮಾರಸ್ವಾಮಿ ಅವರು ಮಹಿಳೆಯರ ಕುರಿತು ನೀಡಿದ್ದ ಹೇಳಿಕೆ ಸಂಬಂಧ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಈ‌ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಮಹಿಳಾ ಆಯೋಗವು ಮಾಜಿ ಸಿಎಂ ಕುಮಾರಸ್ವಾಮಿಗೆ ನೋಟಿಸ್ ಜಾರಿ ಮಾಡಿದೆ.

ಮಂಡ್ಯದಲ್ಲಿ ಗ್ಯೋ ಬ್ಯಾಕ್

ಕುಮಾರಸ್ವಾಮಿ ಹೇಳಿಕೆ ವಿರೋಧಿಸಿ ಮಂಡ್ಯದಲ್ಲಿ ಮಹಿಳೆಯರು ಗೋಬ್ಯಾಕ್‌ ಘೋಷಣೆ ಕೂಗಿದ್ದಾರೆ. ʼಹೆಣ್ಣು ಮಕ್ಕಳ ವಿರುದ್ಧ ನಾಲಿಗೆ ಹರಿಬಿಟ್ಟ ಕುಮಾರಸ್ವಾಮಿಗೆ ಧಿಕ್ಕಾರʼ ಎಂದು ಘೋಷಣೆ ಕೂಗಿದ ಮಹಿಳಾ ಪ್ರತಿಭಟನಾಕಾರರು ತಟ್ಟೆ ಬಡಿದು, ಎಚ್‌ ಡಿಕೆ ವಿರುದ್ಧ ಹಾಡು ಹಾಡಿ ಪ್ರತಿಭಟನೆ ನಡೆಸಿದ್ದಾರೆ.

ನಾನು ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಲ್ಲ: ಎಚ್‌ ಡಿಕೆ ಸ್ಪಷ್ಟನೆ

ಹಳ್ಳಿ ಮಹಿಳೆಯರ ಬಗ್ಗೆ ಆಡಿರುವ ಮಾತಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ ಅವರು, “ನಾನು ಮಹಿಳೆಯರನ್ನು ಅಪಮಾನ ಮಾಡಿಲ್ಲ” ಎಂದಿದ್ದಾರೆ.

“ಗ್ಯಾರಂಟಿ ಯೋಜನೆ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ಮುಗ್ಧ ಜನರನ್ನು, ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ. ಮಹಿಳೆಯರು ಕಷ್ಟ ಎಂದು ಬಂದಾಗ ನಾನು ಆಶ್ರಯ ನೀಡಿದ್ದೇನೆ. ನಾನು ಸಿಎಂ ಆಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ತಂದಿದ್ದೇನೆ. ಮಹಿಳೆಯರ‌ ಕೂಗಿಗೆ ಸ್ಪಂದಿಸಿ ರಾಜ್ಯದಲ್ಲಿ ಸಾರಾಯಿ‌ ನಿಷೇಧಿಸಿದ್ದೇನೆ. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ. ಮಹಿಳೆಯರನ್ನು ಅಸಡ್ಡೆಯಿಂದ ಕಂಡಿಲ್ಲ, ಅಪಮಾನ ಆಗುವ ರೀತಿ ಎಲ್ಲೂ ಮಾತನಾಡಿಲ್ಲ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Read More
Next Story