ಸಂವಿಧಾನ ಬದಲಾಯಿಸಲು ಸಾಧ್ಯ ಇಲ್ಲ ಎಂದ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸವಾಲು
x

ಸಂವಿಧಾನ ಬದಲಾಯಿಸಲು ಸಾಧ್ಯ ಇಲ್ಲ ಎಂದ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸವಾಲು

ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಅಂಬೇಡ್ಕರ್ ಅಥವಾ ಅವರ ಅನುಯಾಯಿಗಳಿಂದ ಅಲ್ಲ, ಅಪಾಯ ಎದುರಾಗಿರುವುದು ಪ್ರಧಾನಿ ಮೋದಿ ಅವರ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ನಿಂದ ಎಂದು ಸಿದ್ದರಾಮಯ್ಯ ಹೇಳಿದ್ದಾರೆ


ಅಂಬೇಡ್ಕರ್ ಅವರು ಮತ್ತೆ ಹುಟ್ಟಿಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯ ಇಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, “ಪ್ರಧಾನಿ ಮೋದಿ ಹೇಳಬೇಕಾಗಿರುವುದು ಅದಲ್ಲ, ಯಾವ ಆರ್ ಎಸ್ ಎಸ್ ನಾಯಕರು ಹೇಳಿದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯ ಇಲ್ಲ ಎಂದು ಹೇಳಬೇಕಾಗಿತ್ತು” ಎಂದು ಕುಟಕಿದ್ದಾರೆ.

ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ಸರಣಿ ಟ್ವೀಟ್‌ ಮಾಡಿದ ಸಿದ್ದರಾಮಯ್ಯ, “ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್, ಇಲ್ಲವೇ ಅವರ ಅನುಯಾಯಿಗಳಿಂದ ಅಲ್ಲ. ಅಪಾಯ ಎದುರಾಗಿರುವುದು ಪ್ರಧಾನಿ ಮೋದಿ ಅವರ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ಮತ್ತು ಅದರ ನಾಯಕರಿಂದ. ಇದಕ್ಕೆ ಇತಿಹಾಸ ಸಾಕ್ಷಿ ಇದೆ. ಇತಿಹಾಸವನ್ನು ಮರೆಯಬಾರದೆಂದು ನಮಗೆ ಪಾಠ ಮಾಡಿದವರು ಇದೇ ಬಾಬಾಸಾಹೇಬ್ ಅಂಬೇಡ್ಕರ್” ಎಂದು ಹೇಳಿದ್ದಾರೆ.

ಸಂವಿಧಾನ ಅಂಗೀಕಾರಗೊಂಡ ಬಳಿಕ ಆರ್‌ ಎಸ್‌ಎಸ್‌ ಮುಖವಾಣಿ ಆರ್ಗನೈಸರ್‌ ಪತ್ರಿಕೆಯ ಸಂಪಾದಕೀಯ ಸಾಲನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ಆರ್‌ಎಸ್‌ಎಸ್‌ ಬರೆದ ಸಂಪಾದಕೀಯದ ನಿಲುವನ್ನು ಈಗಲೂ ನೀವು ಒಪ್ಪುತ್ತೀರಾ ಎಂದು ಪ್ರಶ್ನಿಸಿದ್ದಾರೆ.

“ನಮ್ಮದು ಅಂತ ಕರೆದುಕೊಳ್ಳುವ ಯಾವ ಭಾರತೀಯ ಅಂಶವೂ ಇದರಲ್ಲಿಲ್ಲ” ಎಂದು ಸಂವಿಧಾನದ ಬಗ್ಗೆ ಆರ್ ಎಸ್ ಎಸ್ ನ ಎರಡನೇ ಸಂರಸಂಘ ಚಾಲಕ ಎಂ.ಎಸ್. ಗೋಳ್ವಾಲ್ಕರ್ ವ್ಯಕ್ತಪಡಿಸಿದ ಟೀಕೆಯನ್ನೂ ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ, “ನಿಮ್ಮ ಧರ್ಮ ಗ್ರಂಥವಾದ ʼಬಂಚ್ ಆಫ್ ಥಾಟ್ಟ್ʼನಲ್ಲಿ ವ್ಯಕ್ತಪಡಿಸಿರುವ ಈ ಅಭಿಪ್ರಾಯವನ್ನು ಇಲ್ಲಿಯವರೆಗೆ ನೀವು ನಿರಾಕರಿಸಿಲ್ಲ. ಈಗಲಾದರೂ ಈ ಅಭಿಪ್ರಾಯಕ್ಕೆ ನಿಮ್ಮ ಸಹಮತ ಇದೆಯೇ? ಭಿನ್ನಮತ ಇದೆಯೇ?” ಎಂದು ಪ್ರಶ್ನಿಸಿದ್ದಾರೆ.

“ನೀವು ಅಧಿಕಾರಕ್ಕೆ ಬಂದ ನಂತರ ನಿಮ್ಮ ಪಕ್ಷ ಮತ್ತು ಪರಿವಾರ, ಸಾವರ್ಕರ್ ಅವರನ್ನು ಅಪ್ರತಿಮ ದೇಶ ಭಕ್ತರೆಂದು ಬಿಂಬಿಸುತ್ತಾ ಬಂದಿದ್ದೀರಿ. ಅವರು ಸಂವಿಧಾನದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಕೂಡಾ ನೀವು ಸಮರ್ಥಿಸಬಹುದು ಎಂದು ಭಾವಿಸಿದ್ದೇನೆ. ಆ ಬಗ್ಗೆ ನಿಮಗೆ ಸಹಮತ ಇಲ್ಲ ಎಂದಾದರೆ ಅದನ್ನು ದೇಶದ ಮುಂದೆ ಹೇಳಿಬಿಡಿ” ಎಂದು ಸಿದ್ದರಾಮಯ್ಯ ಅವರು ನರೇಂದ್ರ ಮೋದಿಗೆ ಸವಾಲು ಹಾಕಿದ್ದಾರೆ.

ಪ್ರಧಾನಿ ಮೋದಿಯವರು ಅಂಬೇಡ್ಕರ್‌ ಜಯಂತಿಯ ದಿನವೇ ರಾಜ್ಯದಲ್ಲಿ ತಮ್ಮ ಮೂರನೇ ಸುತ್ತಿನ ಚುನಾವಣಾ ಪ್ರಚಾರಕ್ಕಾಗಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಂಬೇಡ್ಕರ್‌ ಮತ್ತು ಸಂವಿಧಾನ ಕುರಿತು ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ.

Read More
Next Story