ಜ್ಞಾನವಾಪಿ ಮಸೀದಿ ಸಮಿತಿ ಮನವಿ: ಆಲಿಸಲು ಎಸ್‌ಸಿ ಸಮ್ಮತಿ
ಹೊಸದಿಲ್ಲಿ: ವಾರಾಣಸಿಯಲ್ಲಿ ಮಸೀದಿ ಇರುವ ದೇವಸ್ಥಾನದ ʻಪುನಸ್ಥಾಪನೆʼಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟಿನ ಆದೇಶದ ವಿರುದ್ಧ ಜ್ಞಾನವಾಪಿ ಆಡಳಿತ ಸಮಿತಿ ಸಲ್ಲಿಸಿದ ಮೇಲ್ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
2023ರ ಡಿಸೆಂಬರ್ 19 ರಂದು ಅಲಹಾಬಾದ್ ಹೈಕೋರ್ಟ್ ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ದೇವಾಲಯದ ʻಪುನಸ್ಥಾಪನೆʼಗೆ ಸಂಬಂಧಿಸಿದ ಮನವಿ ಗಳನ್ನು ವಜಾಗೊಳಿಸಿತ್ತು. ʻನಾವು ಇದನ್ನು ಮುಖ್ಯ ಪ್ರಕರಣದೊಂದಿಗೆ ಜೋಡಿಸುತ್ತೇವೆʼ ಎಂದು ಮು.ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ ಹೇಳಿದೆ.
ಜ್ಞಾನವಾಪಿ ಮಸೀದಿಯ ವ್ಯವಹಾರಗಳನ್ನು ನಿರ್ವಹಿಸುವ ಅಂಜುಮನ್ ಇಂತೆಜಾಮಿಯಾ ಮಸೀದಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ. 2023ರ ಡಿಸೆಂಬರ್ 19 ರಂದು ಅಲಹಾಬಾದ್ ಹೈಕೋರ್ಟ್, ವಿವಾದಿತ ಸ್ಥಳದ ಧಾರ್ಮಿಕ ಸ್ವರೂಪವನ್ನು ನ್ಯಾಯಾಲಯ ಮಾತ್ರ ನಿರ್ಧರಿ ಸುತ್ತದೆ ಎಂದು ಹೇಳಿತ್ತು. ಮಸೀದಿ ಸಮಿತಿ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ ಐದು ಅರ್ಜಿಗಳನ್ನು ವಜಾಗೊಳಿಸಿತ್ತು.
ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸುವ ಹಕ್ಕು ಕೋರಿ ಅರ್ಜಿದಾರರು ಮೊಕದ್ದಮೆ ಹೂಡಿದ್ದರು. ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆಯನ್ನು ಉಲ್ಲೇಖಿಸಿ, ಮುಸ್ಲಿಂ ದಾವೆದಾರರು ಅದರ ನಿರ್ವಹಣೆಯನ್ನು ಪ್ರಶ್ನಿಸಿದ್ದರು.