ಚಂಡೀಗಢ ಮೇಯರ್ ಚುನಾವಣೆ: ಆಪ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ವಿಜಯಿ
ಸುಪ್ರೀಂ ಕೋರ್ಟ್ ಮಹತ್ವದ ಬೆಳವಣಿಗೆಯೊಂದರಲ್ಲಿ ಚಂಡೀಗಢದ ಮೇಯರ್ ಚುನಾವಣೆ ಫಲಿತಾಂಶವನ್ನು ರದ್ದುಗೊಳಿಸಿದೆ ಮತ್ತು ಎಎಪಿ-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಹೊಸ ಮೇಯರ್ ಎಂದು ಮಂಗಳವಾರ ಘೋಷಿಸಿದೆ.
ಜನವರಿ 30 ರಂದು ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರ ʻದುಷ್ಕೃತ್ಯʼ ಕ್ಕಾಗಿ ಕಾನೂನು ಕ್ರಮ ಜರುಗಿಸು ವಂತೆ ಅದು ಆದೇಶಿಸಿದೆ. ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ವಿಜಯಿಯಾಗಿ ಹೊರಹೊಮ್ಮಿದ್ದರು ಮತ್ತು ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್-ಎಎಪಿ ಮೈತ್ರಿಕೂಟ ನ್ಯಾಯಾಲಯದ ಮೆಟ್ಟಿಲೇರಿತ್ತು.
ಎಣಿಕೆಯಲ್ಲಿ ತಪ್ಪು: ʻಇಡೀ ಚುನಾವಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವುದಿಲ್ಲ ಮತ್ತು ಎಣಿಕೆ ಪ್ರಕ್ರಿಯೆಯಲ್ಲಿ ನಡೆದ ತಪ್ಪನ್ನು ಮಾತ್ರ ಪರಿಶೀಳಿಸಲಾಗಿದೆ ಎಂದ ಕೋರ್ಟ್, ಕುಮಾರ್ ಪರವಾಗಿ ಚಲಾವಣೆಯಾದ ಎಂಟು ಮತಗಳನ್ನು ಮಾನ್ಯಗೊಳಿಸಿತು.
ಮು.ನ್ಯಾ. ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ʻಮಸೀಹ್ ಉದ್ದೇಶಪೂರ್ವಕವಾಗಿ ಎಂಟು ಮತಪತ್ರಗಳನ್ನು ವಿರೂಪಗೊಳಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆʼ ಎಂದು ಹೇಳಿತು. ಚುನಾವಣಾಧಿಕಾರಿ ಮೇಲೆ ಅವ್ಯವಹಾರ ದ ಆರೋಪ ಹೊರಿಸಿತು.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ನೇಮಿಸಿದ ನ್ಯಾಯಾಂಗ ಅಧಿಕಾರಿಯೊಬ್ಬರು ತಂದಿದ್ದ ವಿಡಿಯೋ ರೆಕಾರ್ಡಿಂಗ್‌ಗಳನ್ನು ಮತ್ತು ಮತಪತ್ರಗಳನ್ನು ಪರಿಶೀಲಿಸಿತು.
ಪ್ರಹಸನದ ಚುನಾವಣೆ: ಚಂಡೀಗಢದಲ್ಲಿ ಮೇಯರ್ ಹುದ್ದೆಗೆ ನಡೆದ ʻಚುನಾವಣೆ ಪ್ರಹಸನʼ ಕುರಿತ ನ್ಯಾಯಾಲಯದ ತೀರ್ಪು ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ʻಇಡೀ ಚುನಾವಣಾ ಪ್ರಕ್ರಿಯೆ ಸಂಪೂರ್ಣ ಪ್ರಹಸನವಾಗಿತ್ತು. ಈ ಐತಿಹಾಸಿಕ ತೀರ್ಪಿನಿಂದ ಅದು ಬಹಿರಂಗಗೊಂಡಿದೆʼ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ʻ4 ತಿಂಗಳಿನಿಂದ ವಿವಿಪ್ಯಾಟ್ ಎಣಿಕೆಯ ಸಮಸ್ಯೆ ಚರ್ಚಿಸಲು ಚುನಾವಣಾ ಆಯೋಗದಿಂದ ಸಮಯ ಕೇಳುತ್ತಿದ್ದೇವೆ. ಆದರೆ, ಇದುವರೆಗೆ ಸಮಯ ನಿಗದಿಗೊಳಿಸಿಲ್ಲ. ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನಂಬಿಕೆ ಇದ್ದು, ಅದನ್ನು ಹಾಳು ಮಾಡಬೇಡಿʼ ಎಂದು ಹೇಳಿ ದರು.
ಮತಯಂತ್ರಗಳನ್ನು ತಿದ್ದುವುದು: ಎಎಪಿ-ಕಾಂಗ್ರೆಸ್‌ನ ಎಂಟು ಮತಗಳು ಅಸಿಂಧು ಎಂದ ಚುನಾವಣಾಧಿಕಾರಿ, ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಅವರು 12-16 ಮತಗಳಿಂದ ಕುಲದೀಪ್ ಕುಮಾರ್ ಅವರನ್ನು ಸೋಲಿಸಿದರು ಎಂದು ಪ್ರಕಟಿಸಿದರು. ಆದರೆ, ಸೋಂಕರ್ ಅವರು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಂದು ದಿನ ಮೊದಲು ರಾಜೀನಾಮೆ ನೀಡಿದರು. ಆದರೆ, ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಪಕ್ಷಾಂತರಗೊಂಡರು.