ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಛೀಮಾರಿ
x

ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಛೀಮಾರಿ


ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ 'ಸನಾತನ ಧರ್ಮ ನಿರ್ಮೂಲನೆ' ಹೇಳಿಕೆಗೆ ಸುಪ್ರೀಂ ಕೋರ್ಟ್ ಸೋಮವಾರ ಛೀಮಾರಿ ಹಾಕಿದೆ.

ಸ್ಟಾಲಿನ್‌ ಸಚಿವರಾಗಿದ್ದು, ಅವರ ಹೇಳಿಕೆಯ ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗಪಡಿಸಿಕೊಂಡ ನಂತರ ಏಕೆ ಮನವಿ ಸಲ್ಲಿಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಪ್ರಶ್ನಿಸಿದೆ.

ʻಸಂವಿಧಾನದ 19(1)(ಎ) ಮತ್ತು ಆರ್ಟಿಕಲ್‌ 25 ರ ಅಡಿಯಲ್ಲಿ ನೀವು ಹಕ್ಕು ದುರುಪಯೋಗಪಡಿಸಿಕೊಂಡಿದ್ದೀರಿ. ಆದರೆ, ಆರ್ಟಿಕಲ್ 32 ರ ಅಡಿಯಲ್ಲಿ ನಿಮ್ಮ ಹಕ್ಕನ್ನು ಚಲಾಯಿಸುತ್ತಿದ್ದೀರಿ. ನೀವು ಹೇಳಿದ್ದಕ್ಕೆ ಆಗುವ ದುಷ್ಪರಿಣಾಮ ಗೊತ್ತಿಲ್ಲವೇ? ನೀವು ಸಾಮಾನ್ಯ ವ್ಯಕ್ತಿಯಲ್ಲ. ಸಚಿವ. ಇದರ ಪರಿಣಾಮಗಳನ್ನು ತಿಳಿದುಕೊಳ್ಳಬೇಕು,ʼ ಎಂದು ಪೀಠ ಹೇಳಿತು. ಪ್ರಕರಣವನ್ನು ಮಾರ್ಚ್ 15 ಕ್ಕೆ ಮುಂದೂಡಿತು.

ಉದಯನಿಧಿ ಸ್ಟಾಲಿನ್ ಸೆ. 2023 ರಲ್ಲಿ ನಡೆದ ಸಮ್ಮೇಳನದಲ್ಲಿʻಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ʼಎಂದು ಹೇಳಿದ್ದರು. ಹೇಳಿಕೆಗೆ ಬಿಜೆಪಿ ನಾಯಕರಿಂದ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಅವರ ವಿರುದ್ಧ ಹಲವಾರು ಕ್ರಿಮಿನಲ್ ದೂರುಗಳು ದಾಖಲಿಸಲಾಗಿತ್ತು.

ಮತ್ತೊಂದೆಡೆ, ತಮ್ಮ ಹೇಳಿಕೆ ಸನಾತನ ಜಾತಿ ಆಧಾರಿತ ಸಮಾಜದ ವಿರುದ್ಧವಾಗಿದೆಯೇ ಹೊರತು ಹಿಂದೂ ಧರ್ಮದ ವಿರುದ್ಧವಲ್ಲ ಎಂದು ಉದಯನಿಧಿ ಸ್ಪಷ್ಟಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿನ ಪ್ರತಿಕ್ರಿಯಿಸಿ, ಸನಾತನ ಧರ್ಮವನ್ನು ಅನುಸರಿಸುವವರ ನರಮೇಧಕ್ಕೆ ಕರೆ ನೀಡಿಲ್ಲ ಎಂದು ಹೇಳಿದ್ದರು.

ʻ ಸನಾತನ ಧರ್ಮ ಮತ್ತು ಸಮಾಜದ ಮೇಲೆ ಅದರ ದುಷ್ಪರಿಣಾಮದ ಬಗ್ಗೆ ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ಬರಹಗಳನ್ನು ಯಾವುದೇ ವೇದಿಕೆಯಲ್ಲಿ ಪ್ರಸ್ತುತಪಡಿಸಲು ಸಿದ್ಧನಿದ್ದೇನೆ. ಪುನರುಚ್ಚರಿಸುತ್ತೇನೆ: ಸೊಳ್ಳೆಗಳಿಂದ ಡೆಂಗೆ ಮತ್ತು ಮಲೇರಿಯಾದಂತಹ ರೋಗಗಳು ಹರಡುವಂತೆ ಸನಾತನ ಧರ್ಮ ಅನೇಕ ಸಾಮಾಜಿಕ ಅನಿಷ್ಟಗಳಿಗೆ ಕಾರಣವಾಗಿದೆ ಎಂದು ನಾನು ನಂಬುತ್ತೇನೆ,ʼ ಎಂದು ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

Read More
Next Story