ಸಂದೇಶಖಲಿ: ಶೇಖ್ ಶಾಜಹಾನ್‌ ಬಂಧನಕ್ಕೆ ಆದೇಶ
x

ಸಂದೇಶಖಲಿ: ಶೇಖ್ ಶಾಜಹಾನ್‌ ಬಂಧನಕ್ಕೆ ಆದೇಶ


ಸಂದೇಶಖಲಿ ಗ್ರಾಮಸ್ಥರಿಂದ ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣ ಆರೋಪ ಹೊತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶೇಖ್ ಶಾಜಹಾನ್ ಅವರನ್ನು ಬಂಧಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಫೆ. 26ರಂದು ಹೇಳಿದೆ.

ʻಶಾಜಹಾನ್ ತಲೆಮರೆಸಿಕೊಂಡಿದ್ದಾರೆ. ಟಿಎಂಸಿ ಅವರನ್ನು ರಕ್ಷಿಸುತ್ತಿಲ್ಲ.ಯಾವುದೇ ಅಪರಾಧ ಮಾಡುವವರ ವಿರುದ್ಧ ನಾವು ಶೂನ್ಯ ಸಹಿಷ್ಣುತೆ ನೀತಿ ಹೊಂದಿದ್ದೇವೆʼ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಭಾನುವಾರ ಹೇಳಿದ್ದರು.

ಬಂಗಾಳ ಪೊಲೀಸರಿಗೆ ಪ್ರಶ್ನೆ: ʻಬಂಧನಕ್ಕೆ ಯಾವುದೇ ತಡೆ ಇಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಪ್ರಥಮ ಮಾಹಿತಿ ವರದಿಯಲ್ಲಿ ಆತನನ್ನು ಆರೋಪಿ ಎಂದು ಹೆಸರಿಸಲಾಗಿದೆ. ಅವರನ್ನು ಬಂಧಿಸಬೇಕಿದೆ, ʼ ಎಂದು ಹೈಕೋರ್ಟ್ ಹೇಳಿದೆ.

ʻಈ ಪ್ರದೇಶದಲ್ಲಿ ನಡೆದ ಘಟನೆಗಳ ಬಗ್ಗೆ ನಾಲ್ಕು ವರ್ಷಗಳ ಹಿಂದೆ ರಾಜ್ಯ ಪೊಲೀಸರಿಗೆ ವರದಿಯಾಗಿದೆ.ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. 42 ಚಾರ್ಜ್‌ಶೀಟ್‌ಗಳು ಸಿದ್ಧವಾಗಲು ನಾಲ್ಕು ವರ್ಷ ತೆಗೆದುಕೊಂಡಿದೆ ಎಂಬುದು ಆಶ್ಚರ್ಯಕರʼ ಎಂದು ಕೋರ್ಟ್‌ ಹೇಳಿದೆ.

ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಲಿ ಪ್ರದೇಶವು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಕುದಿಯುತ್ತಿದೆ. ಸ್ಥಳೀಯ ಟಿಎಂಸಿ ನಾಯಕ ಶೇಖ್ ಷಹಜಹಾನ್ ಮತ್ತು ಅವರ ಬೆಂಬಲಿಗರ ವಿರುದ್ಧ ಭೂಹಗರಣ ಮತ್ತು ಸ್ಥಳೀಯರ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪ್ರತಿಭಟನೆಗಳು ನಡೆಯುತ್ತಿವೆ.

ಅಭಿಷೇಕ್ ಬ್ಯಾನರ್ಜಿ ಹೇಳಿದ್ದೇನು?: ಪಶ್ಚಿಮ ಬಂಗಾಳದ ವಿರೋಧ ಪಕ್ಷಗಳು ಆಡಳಿತಾರೂಢ ಟಿಎಂಸಿ, ಶೇಖ್ ಅವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿವೆ.

ಪಡಿತರ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶೇಖ್‌ ಅವರ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವುದರಿಂದ ರಾಜ್ಯ ಪೊಲೀಸರು ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದರು.

ʻಉತ್ತಮ್ ಸರ್ದಾರ್ ಮತ್ತು ಸಿಬು ಹಜ್ರಾ ಅವರಂತಹ ಟಿಎಂಸಿ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ತನಿಖಾ ಸಂಸ್ಥೆಗಳ ಮೇಲಿನ ನಿರ್ಬಂಧ ತೆಗೆದುಹಾಕಿದರೆ, ನೀವು ಬೇರೆ ಫಲಿತಾಂಶವನ್ನು ನೋಡುತ್ತೀರಿ. ಏಕೆಂದರೆ ಯಾವ ತಪ್ಪಿತಸ್ಥರನ್ನೂ ಪಕ್ಷ ರಕ್ಷಿಸುವುದಿಲ್ಲʼ ಎಂದು ಡೈಮಂಡ್ ಹಾರ್ಬರ್ ಕ್ಷೇತ್ರದ ಸಂಸದ ಹೇಳಿದರು.

Read More
Next Story