ರಾಜ್ಯಸಭೆ ಚುನಾವಣೆ: ಸೋನಿಯಾ ಗಾಂಧಿ ಅವಿರೋಧ ಆಯ್ಕೆ
x

ರಾಜ್ಯಸಭೆ ಚುನಾವಣೆ: ಸೋನಿಯಾ ಗಾಂಧಿ ಅವಿರೋಧ ಆಯ್ಕೆ


ಜೈಪುರ, ಫೆ.20: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಂಗಳವಾರ ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು.

ಬಿಜೆಪಿಯ ಚುನ್ನಿಲಾಲ್ ಗರಾಸಿಯಾ ಮತ್ತು ಮದನ್ ರಾಥೋಡ್ ಕೂಡ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಮಹಾವೀರ್ ಪ್ರಸಾದ್ ಶರ್ಮಾ ತಿಳಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಮಂಗಳವಾರ ಕೊನೆಯ ದಿನವಾಗಿತ್ತು. ಬೇರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿಲ್ಲ.

ರಾಜ್ಯಸಭೆ ಸದಸ್ಯರಾದ ಮನಮೋಹನ್ ಸಿಂಗ್ (ಕಾಂಗ್ರೆಸ್) ಮತ್ತು ಭೂಪೇಂದ್ರ ಯಾದವ್ (ಬಿಜೆಪಿ) ಅವರ ಅಧಿಕಾರಾವಧಿ ಏಪ್ರಿಲ್ 3 ರಂದು ಕೊನೆಗೊಳ್ಳುತ್ತಿದೆ. ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರು ಶಾಸಕರಾಗಿ ಆಯ್ಕೆಯಾದ ನಂತರ ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರಿಂದ, ಮೂರನೇ ಸ್ಥಾನ ತೆರವಾಗಿತ್ತು.

200 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 115 ಮತ್ತು ಕಾಂಗ್ರೆಸ್ 70 ಸದಸ್ಯರನ್ನು ಹೊಂದಿದೆ. ರಾಜಸ್ಥಾನದಲ್ಲಿ 10 ರಾಜ್ಯಸಭೆ ಸ್ಥಾನಗಳಿದ್ದು, ಕಾಂಗ್ರೆಸ್ ಆರು ಮತ್ತು ಬಿಜೆಪಿ ನಾಲ್ಕು ಸದಸ್ಯರನ್ನು ಹೊಂದಿದೆ.

Read More
Next Story