
ರಿಲಯನ್ಸ್-ಡಿಸ್ನಿ ವಿಲೀನ: 120 ಟಿವಿ ಚಾನೆಲ್, 2 ಸ್ಟ್ರೀಮಿಂಗ್ ವೇದಿಕೆ ಲಭ್ಯ
ರಿಲಯನ್ಸ್ ಮತ್ತು ಡಿಸ್ನಿ ತಮ್ಮ ಡಿಜಿಟಲ್ ಸ್ಟ್ರೀಮಿಂಗ್ ಮತ್ತು ಟೆಲಿವಿಷನ್ ಸ್ವತ್ತುಗಳನ್ನು ವಿಲೀನಗೊಳಿಸಲು ಮುಂದಾಗಿದ್ದು,ಮನರಂಜನೆ ಮತ್ತು ಕ್ರೀಡೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲಿವೆ.
ಫೆ.28 ರಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್), ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ದಿ ವಾಲ್ಟ್ ಡಿಸ್ನಿ ಕಂಪನಿಗಳು ಜಂಟಿ ಉದ್ಯಮ(ಜೆವಿ) ರೂಪಿಸಲು ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಘೋಷಿಸಿದವು.
120 ಚಾನೆಲ್, 2 ಸ್ಟ್ರೀಮಿಂಗ್ ವೇದಿಕೆ: ವಯಾಕಾಂ18 ಮಾಧ್ಯಮ ಉದ್ಯಮವನ್ನು ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಲೀನಗೊಳಿಸಲಾಗುತ್ತದೆ. ವಿಲೀನಗೊಂಡ ರಿಲಯನ್ಸ್-ಡಿಸ್ನಿ ಘಟಕವು 120 ಟಿವಿ ಚಾನೆಲ್ ಮತ್ತು ಎರಡು ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆಗಳನ್ನು ಹೊಂದಿರುತ್ತದೆ. ಟಿವಿ ಮತ್ತು ಡಿಜಿಟಲ್ ವೀಕ್ಷಕರಿಗೆ ಮನರಂಜನೆ, ಚಲನಚಿತ್ರ, ಕ್ರೀಡೆ ಒಂದೇ ಸೂರಿನಡಿ ಲಭ್ಯವಿರುತ್ತದೆ ಮತ್ತು ವಿಲೀನದಿಂದ ಜಾಹೀರಾತು ಆದಾಯ ಹೆಚ್ಚುವ ಸಾಧ್ಯತೆಯಿದೆ.
ದೂರದರ್ಶನ ಮಾಪನ ಸಂಸ್ಥೆ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಿಎಆರ್ ಸಿ) ಪ್ರಕಾರ, ಪ್ರಮುಖ 10 ಚಾನೆಲ್‌ಗಳಲ್ಲಿ ರಿಲಯನ್ಸ್ ಮತ್ತು ಡಿಸ್ನಿಯ ಟಿವಿ ವೀಕ್ಷಕರ ಪಾಲು 2023 ರಲ್ಲಿ ಶೇ. 40 ಎಂದು ಅಂದಾಜಿಸಿದೆ.
ಐಪಿಎಲ್ ಪಂದ್ಯ: ಐಪಿಎಲ್ 2024 ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಸ್ಟಾರ್ ಟಿವಿ ಹಕ್ಕು ಹಾಗೂ ವಯಾಕಾಂ18 ಡಿಜಿಟಲ್ ಹಕ್ಕುಗಳನ್ನು ಹೊಂದಿದೆ. ರಿಲಯನ್ಸ್-ಡಿಸ್ನಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಹಕ್ಕು ಮತ್ತು ಬಿಸಿಸಿಐ ದೇಶೀ ಕ್ರಿಕೆಟ್ ಪಂದ್ಯಗಳ ಹಕ್ಕುಗಳನ್ನು ಹೊಂದಿದೆ.
ಡಿಸ್ನಿ ಒಂಬತ್ತು ಭಾಷೆಗಳಲ್ಲಿ ಸುಮಾರು 80 ಚಾನೆಲ್ ಹಾಗೂ ವಯಾಕಾಂ 18 ಎಂಟು ಭಾಷೆಗಳಲ್ಲಿ 40 ಚಾನೆಲ್ ಹೊಂದಿದೆ. ವಯಾಕಾಂ 18ರ ಒಟಿಟಿ ವೇದಿಕೆ ಜಿಯೋ ಸಿನೆಮಾ ದೇಶದ ಪ್ರಮುಖ ಸ್ಟ್ರೀಮಿಂಗ್ ಸೇವೆಗಳಲ್ಲಿ ಒಂದು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ಕ್ರೀಡೆಗಳ ಅತ್ಯಂತ ಜನಪ್ರಿಯ ತಾಣ.
ಪ್ರತಿಸ್ಪರ್ಧಿಗಳೇ ಇಲ್ಲ: ರಾಯಿಟರ್ಸ್ ಪ್ರಕಾರ, ವಿಲೀನಗೊಂಡ ಘಟಕದ ವ್ಯವಹಾರವು ಸೋನಿ, ನೆಟ್‌ಫ್ಲಿಕ್ಸ್ ಮತ್ತು ಝೀ ಎಂಟರ್‌ಟೈನ್‌ಮೆಂಟ್ ಗಿಂತ ಹೆಚ್ಚು ಇರಲಿದೆ. ಪ್ರತಿ ತಿಂಗಳು ಒಂಬತ್ತು ಭಾಷೆಗಳಲ್ಲಿ 700 ದಶಲಕ್ಷ ವೀಕ್ಷಕರನ್ನು ತಲುಪುವ ನೆಟ್‌ವರ್ಕ್ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ (ಡಿಸ್ನಿ+ ಹಾಟ್‌ಸ್ಟಾರ್) ಮೂಲಕ ಮನರಂಜನೆಯನ್ನು ಬಳಸಿಕೊಳ್ಳುವ ವಿಧಾನವನ್ನು ಮಾರ್ಪಡಿಸಿದೆ, ಡಿಸ್ನಿ ಸ್ಟಾರ್ ದೇಶದ ಪ್ರಮುಖ ಮಾಧ್ಯಮ ಮತ್ತು ಮನರಂಜನಾ ಕಂಪನಿ. ಸಂಸ್ಥೆ ಪ್ರತಿ ವರ್ಷ 20,000 ಗಂಟೆಗಳಿಗೂ ಹೆಚ್ಚು ಮೂಲ ವಿಷಯವನ್ನು ಉತ್ಪಾದಿಸುತ್ತದೆ.
750 ದಶಲಕ್ಷ ವೀಕ್ಷಕರು: ಜಂಟಿ ಕಂಪನಿ 750 ಮಿಲಿಯನ್ ವೀಕ್ಷಕರನ್ನು ಹೊಂದಿರುತ್ತದೆ ಮತ್ತು ಪ್ರಪಂಚದಾದ್ಯಂತದ ದೇಶಿಗರ ಅಗತ್ಯಗಳನ್ನು ಪೂರೈಸುತ್ತದೆ. ರಿಲಯನ್ಸ್ 11,500 ಕೋಟಿ ರೂ.($ 1.4 ಶತಕೋಟಿ) ಹೂಡಿಕೆಗೆ ಒಪ್ಪಿಕೊಂಡಿದೆ. ಜಂಟಿ ಕಂಪನಿಯ ಮೌಲ್ಯ 70,352 ಕೋಟಿ ರೂ. ಕಂಪನಿಯನ್ನು ರಿಲಯನ್ಸ್ ನಿಯಂತ್ರಿಸುತ್ತದೆ. ಪಾಲು ರಿಲಯನ್ಸ್ ಶೇ.16.34, ವಯಾಕಾಂ18 ಶೇ.46.82 ಮತ್ತು ಡಿಸ್ನಿ ಶೇ.36.84 ಇರಲಿದೆ.