ರಣಜಿ ಟ್ರೋಫಿ: ಕರ್ನಾಟಕಕ್ಕೆ 128 ರನ್‌ಗಳಿಂದ ಸೋಲು, ವಿದರ್ಭ ಸೆಮಿಫೈನಲ್‌ ಗೆ
x

ರಣಜಿ ಟ್ರೋಫಿ: ಕರ್ನಾಟಕಕ್ಕೆ 128 ರನ್‌ಗಳಿಂದ ಸೋಲು, ವಿದರ್ಭ ಸೆಮಿಫೈನಲ್‌ ಗೆ


ನಾಗ್ಪುರ, ಫೆ 27- ಕರ್ನಾಟಕವನ್ನು 128 ರನ್‌ಗಳಿಂದ ಪರಾಜಯಗೊಳಿಸಿದ ವಿದರ್ಭ, ರಣಜಿ ಟ್ರೋಫಿ ಸೆಮಿಫೈನಲ್‌ ತಲುಪಿದೆ.

ಸಿವಿಲ್ ಲೈನ್ಸ್‌ನಲ್ಲಿರುವ ವಿಸಿಎ ಕ್ರೀಡಾಂಗಣದಲ್ಲಿ ಹರ್ಷ್ ದುಬೆ ಮತ್ತು ಆದಿತ್ಯ ಸರ್ವಾಟೆ ಅವರ ನಾಲ್ಕು ವಿಕೆಟ್‌ ಪಡೆದು ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದರು.

ಗೆಲುವಿಗೆ 371 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ನಾಲ್ಕನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 103 ರನ್ ಗಳಿಸಿ, ಭದ್ರ ಬುನಾದಿ ಹಾಕಿತ್ತು. ಕರ್ನಾಟಕದ ಗೆಲುವಿಗೆ 268 ರನ್‌ ಬೇಕಿದ್ದು, ಒಂಬತ್ತು ವಿಕೆಟ್‌ಗಳು ಕೈಯಲ್ಲಿದ್ದವು. ಆದರೆ, ಅಂತಿಮ ದಿನವಾದ ಮಂಗಳವಾರ ಬೆಳಗ್ಗೆ ದುಬೆ ಮತ್ತು ಸರ್ವಾಟೆ ಜೋಡಿಯ ಬೌಲಿಂಗ್‌ನಿಂದ ಬ್ಯಾಟಿಂಗ್ ಕುಸಿಯಿತು.

ಮೊದಲ ಗಂಟೆಯ ಆಟದಲ್ಲಿ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ (70), ನಿಕಿನ್ ಜೋಸ್ (0) ಮತ್ತು ಮನೀಶ್ ಪಾಂಡೆ (1) ಅವರನ್ನು ಕಳೆದುಕೊಂಡಿತು. ಸರ್ವಾಟೆ ಸಾಧನೆ 22-0-78-4. ಅನೀಶ್ ಕೆ.ವಿ. ಒಂದು ತುದಿಯಿಂದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರಾದರೂ, 40 ರನ್ ಗಳಿಸಿ ರನೌಟ್ ಆದರು. ಅನೀಶ್ ಆರನೇ ವಿಕೆಟ್‌ಗೆ ಹಾರ್ದಿಕ್ ರಾಜ್ (13) ಜೊತೆ 40 ರನ್ ಸೇರಿಸಿದ್ದರು. ಆದರೆ, ದುಬೆ (13.4-1-65-4) ಚಮತ್ಕಾರ ರಾಜ್‌ ವಿಕೆಟ್‌ನಿಂದ ಆರಂಭಗೊಂಡಿತು. ವಿಕೆಟ್‌ಕೀಪರ್-ಬ್ಯಾಟರ್ ಎಸ್. ಶರತ್ 6 ರನ್‌ಗೆ ಔಟಾದರು.

ವಿಜಯ್ ಕುಮಾರ್ ವೈಶಾಕ್ (34) ಮತ್ತು ವಿದ್ವತ್ ಕಾವೇರಪ್ಪ (25) ಜೋಡಿ 33 ರನ್‌ ಜೊತೆಯಾಟದೊಂದಿಗೆ ಸೋಲು ವಿಳಂಬಗೊಳಿಸಲು ಯತ್ನಿಸಿತು. ಕರ್ನಾಟಕ 243 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಸೆಮಿಫೈನಲ್‌ ರೇಸ್‌ನಿಂದ ಹೊರಬಿತ್ತು.

ವಿದರ್ಭ ಸೆಮಿಫೈನಲ್ ಸುತ್ತಿನಲ್ಲಿ ಮಧ್ಯಪ್ರದೇಶ ಮತ್ತು ತಮಿಳುನಾಡು ಜೊತೆಗೆ ಸೇರಿಕೊಂಡಿದೆ. ಸರ್ವಾಟೆ ಅವರ ಏಳು ವಿಕೆಟ್‌ಗಳ ಸಾಧನೆಗಾಗಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ 460 ಮತ್ತು 196. ಕರ್ನಾಟಕ 62.4 ಓವರ್‌ಗಳಲ್ಲಿ 286 ಮತ್ತು 243 (ಆರ್ ಸಮರ್ಥ್ 40, ಮಯಾಂಕ್ ಅಗರ್ವಾಲ್ 70, ಅನೀಶ್ ಕೆವಿ 40; ಹರ್ಷ್ ದುಬೆ 4/65, ಆದಿತ್ಯ ಸರ್ವಾಟೆ 4/78).ಕರ್ನಾಟಕಕ್ಕೆ 128 ರನ್‌ ಸೋಲು.

Read More
Next Story