ವಯನಾಡ್‌ಗೆ ರಾಹುಲ್ ಗಾಂಧಿ ಭೇಟಿ: ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ
x
ರಾಹುಲ್‌ ಗಾಂಧಿ

ವಯನಾಡ್‌ಗೆ ರಾಹುಲ್ ಗಾಂಧಿ ಭೇಟಿ: ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ

ವಯನಾಡ್‌ನಲ್ಲಿ ಹೆಚ್ಚುತ್ತಿರುವ ಕಾಡು ಪ್ರಾಣಿಗಳ ದಾಳಿ


ಕಾಂಗ್ರೆಸ್ ನಾಯಕ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ವಾಯನಾಡ್‌ನ ಮಾನಂತವಾಡಿ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದವರ ಮನೆಗಳಿಗೆ ಭಾನುವಾರ ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಭಾಗದಲ್ಲಿ ಮಾನವ-ಪ್ರಾಣಿ ಸಂಘರ್ಷಗಳಿಗೆ ಪರಿಹಾರ ಕೋರಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ಶನಿವಾರ ರಾತ್ರಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ವಾರಣಾಸಿಯಲ್ಲಿ

ಸ್ಥಗಿತಗೊಳಿಸಿ ಕೇರಳದ ಕಣ್ಣೂರು ಜಿಲ್ಲೆಗೆ ತಲುಪಿದ್ದರು. ಅಲ್ಲಿಂದ ರಸ್ತೆ ಮಾರ್ಗವಾಗಿ ವಯನಾಡಿಗೆ ತೆರಳಿದರು. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು.

ಈಚೆಗೆ ವಯನಾಡ್ ಜಿಲ್ಲೆಯ ಮಾನಂತವಾಡಿ ಪ್ರದೇಶದಲ್ಲಿ ರೇಡಿಯೊ ಕಾಲರ್‌ ಅಳವಡಿಸಿದ್ದ ಆನೆಯ ದಾಳಿಯಿಂದ ಸಾವನ್ನಪ್ಪಿದ ಅಜಿ (42) ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರೊಂದಿಗೆ ಮಾತನಾಡಿದರು.

ಬಳಿಕ ಶುಕ್ರವಾರ ಕುರುವ ದ್ವೀಪದ ಬಳಿ ಕಾಡಾನೆ ದಾಳಿಗೆ ಬಲಿಯಾದ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ಮಾರ್ಗದರ್ಶಕ ಪಾಲ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹುಲಿ ದಾಳಿಗೆ

ಬಲಿಯಾದ ಪ್ರಜೀಶ್ ಅವರ ಮನೆಗೂ ರಾಹುಲ್‌ ಭೇಟಿ ನೀಡುವ ಸಾಧ್ಯತೆ ಇದೆ. ಭಾನುವಾರ ಮಧ್ಯಾಹ್ನ ಅಲಹಾಬಾದ್‌ಗೆ ತೆರಳುವ ಮೊದಲು ಕಲ್ಪೆಟ್ಟಾದಲ್ಲಿರುವ ಪಿಡಬ್ಲ್ಯುಡಿ ವಿಶ್ರಾಂತಿ ಗೃಹದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಾಯನಾಡಿನಲ್ಲಿ ಜಾನುವಾರು ಹಾಗೂ ಮನುಷ್ಯರ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡು ಪ್ರಾಣಿಗಳ ದಾಳಿಯನ್ನು ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿದ್ದ ಹರತಾಳ ಶನಿವಾರ ಹಿಂಸಾಚಾರಕ್ಕೆ ತಿರುಗಿತ್ತು.

Read More
Next Story