ಗವರ್ನರ್​ vs ರಾಜ್ಯ ಸರ್ಕಾರ ; ರಾಷ್ಟ್ರಪತಿಯಿಂದ ಸುಪ್ರೀಂ ಕೋರ್ಟ್​​ಗೆ 14 ಪ್ರಶ್ನೆಗಳು
x

ಗವರ್ನರ್​ vs ರಾಜ್ಯ ಸರ್ಕಾರ ; ರಾಷ್ಟ್ರಪತಿಯಿಂದ ಸುಪ್ರೀಂ ಕೋರ್ಟ್​​ಗೆ 14 ಪ್ರಶ್ನೆಗಳು

ಕಳೆದ ತಿಂಗಳು, ಸುಪ್ರೀಂ ಕೋರ್ಟ್ ತನ್ನ 142ನೇ ವಿಧಿಯ ವಿಶೇಷ ಅಧಿಕಾರ ಬಳಸಿ, ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಿತ್ತು.


ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಕುರಿತು ನಿರ್ಧರಿಸಲು ಗವರ್ನರ್‌ಗಳು ಮತ್ತು ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಐತಿಹಾಸಿಕ ತೀರ್ಪಿನ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರ್ವೋಚ್ಛ ನ್ಯಾಯಾಲಯದ ಮುಂದೆ 14 ಪ್ರಶ್ನೆಗಳನ್ನು ಇಟ್ಟಿದ್ದಾರೆ. ಸಂವಿಧಾನದ 143ನೇ ವಿಧಿಯಯಲ್ಲಿರುವ, ಕಾನೂನಾತ್ಮಕ ವಿಚಾರಗಳು ಅಥವಾ ಸಾರ್ವಜನಿಕ ಮಹತ್ವದ ವಿಚಾರಗಳು ಎದ್ದಾಗ ನ್ಯಾಯಾಲಯವನ್ನು ಸಂಪರ್ಕಿಸುವ ಅಧಿಕಾರದ ಅನ್ವಯ ರಾಷ್ಟ್ರಪತಿ ಈ ಪ್ರಶ್ನೆಗಳನ್ನು ಕೇಳಿದ್ದಾರೆ.

ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಅಧಿಕಾರ ಸ್ವೀಕರಿಸುವ ಒಂದು ದಿನದ ಮೊದಲು, ಮೇ 13ರಂದು ರಾಷ್ಟ್ರಪತಿಗಳು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​​ನ ದ್ವಿಸದಸ್ಯ ಪೀಠ ನೀಡಿದ ತೀರ್ಪಿಗೆ ಪ್ರತಿಕ್ರಿಯೆಯಾಗಿ ಅವರು ಪ್ರಶ್ನೆಗಳನ್ನು ಮುಂದಿಟ್ಟಿದ್ದು. ಸಂವಿಧಾನದಲ್ಲಿ ಯಾವುದೇ ಕಾಲಮಿತಿ ಇಲ್ಲದಿದ್ದರೂ, ಸುಪ್ರೀಂ ಕೋರ್ಟ್ ಹೇಗೆ ಕಾಲಮಿತಿ ವಿಧಿಸಬಹುದು ಎಂಬುದಾಗಿ ಪ್ರಶ್ನಿದ್ದಾರೆ

ಕಳೆದ ತಿಂಗಳು, ಸುಪ್ರೀಂ ಕೋರ್ಟ್ ತನ್ನ 142ನೇ ವಿಧಿಯ ವಿಶೇಷ ಅಧಿಕಾರ ಬಳಸಿ, ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಿತ್ತು. ಈ ವೇಳೆ ತಮಿಳುನಾಡು ರಾಜ್ಯಪಾಲರು ತಡೆ ಹಿಡಿದಿದ್ದ 10 ಮಸೂದೆಗಳನ್ನು ಅಂಗೀಕರಿಸಿತ್ತು.

ಇದೀಗ ರಾಷ್ಟ್ರಪತಿ ಮುರ್ಮು ಅವರು, ಗವರ್ನರ್‌ಗಳು ಅಥವಾ ರಾಷ್ಟ್ರಪತಿಗಳ ಬಳಿ ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ಕಾಲ ಮಸೂದೆಗಳು ಬಾಕಿ ಉಳಿದರೆ " ಅಂಗೀಕರಿಸಲಾಗಿದೆ ಎಂದು ಪರಿಗಣಿಸುವುದು" ಎಂದು ಕೋರ್ಟ್​ ಅಭಿಪ್ರಾಯಪಟ್ಟಿರುವುದನ್ನು ಪ್ರಶ್ನಿಸಿದ್ದಾರೆ. ಸಂವಿಧಾನದ 200ನೇ ವಿಧಿ (ಗವರ್ನರ್‌ಗಳ ಅಧಿಕಾರ) ಅಥವಾ 201ನೇ ವಿಧಿ (ರಾಷ್ಟ್ರಪತಿಗಳ ಅಧಿಕಾರ) ಯಾವುದೇ ಕಾಲಮಿತಿ ಅಥವಾ ಪ್ರಕ್ರಿಯಾತ್ಮಕ ಕಾರ್ಯವಿಧಾನ ನಿಗದಿಪಡಿಸುವುದಿಲ್ಲ ಎಂದು ಅವರು ವಾದಿಸಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಈ ತೀರ್ಪನ್ನು "ನ್ಯಾಯಾಂಗದ ವ್ಯಾಪ್ತಿ ಮೀರಿದ ಹಸ್ತಕ್ಷೇಪ" ಎಂದು ಟೀಕಿಸಿದ್ದರು.

ರಾಷ್ಟ್ರಪತಿಗಳು ಕೇಳಿರುವ 14 ಪ್ರಶ್ನೆಗಳು ಈ ಕೆಳಗಿನಂತಿವೆ

  1. 200ನೇ ವಿಧಿಯಡಿ ಮಸೂದೆಯನ್ನು ಸ್ವೀಕರಿಸಿದಾಗ ರಾಜ್ಯಪಾಲರಿಗೆ ಲಭ್ಯವಿರುವ ಸಾಂವಿಧಾನಿಕ ಆಯ್ಕೆಗಳೇನು?
  2. ರಾಜ್ಯಪಾಲರು ಮಸೂದೆಗಳ ವಿಚಾರದಲ್ಲಿ ಕೇವಲ ಸಚಿವ ಸಂಪುಟದ ಸಲಹೆ ಮತ್ತು ಸಹಾಯದ ಮೇಲೆ ಮಾತ್ರ ಕಾರ್ಯನಿರ್ವಹಿಸಬೇಕೇ?
  3. 200ನೇ ವಿಧಿಯಡಿ ರಾಜ್ಯಪಾಲರ ವಿವೇಚನೆಯು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರಬಹುದೇ?
  4. 361ನೇ ವಿಧಿಯು 200ನೇ ವಿಧಿಯಡಿ ರಾಜ್ಯಪಾಲರ ನಿರ್ಧಾರಗಳನ್ನು ಸಂಪೂರ್ಣವಾಗಿ ಕೋರ್ಟ್ ಪರಿಶೀಲನೆಯಿಂದ ರಕ್ಷಿಸುತ್ತದೆಯೇ?
  5. ಸಂವಿಧಾನದಲ್ಲಿ ಸ್ಪಷ್ಟ ಕಾಲಮಿತಿಗಳಿಲ್ಲದಿದ್ದರೆ, ನ್ಯಾಯಾಂಗವು ರಾಜ್ಯಪಾಲರಿಗೆ ಮಸೂದೆಗಳ ಮೇಲೆ ಕಾರ್ಯನಿರ್ವಹಿಸಲು ಕಾಲಮಿತಿ ಹೇರಬಹುದೇ?
  6. 201ನೇ ವಿಧಿಯಡಿ ರಾಷ್ಟ್ರಪತಿಗಳ ವಿವೇಚನೆಯು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರಬಹುದೇ?
  7. ಸಾಂವಿಧಾನಿಕ ಆದೇಶಗಳಿಲ್ಲದಿದ್ದರೆ ರಾಷ್ಟ್ರಪತಿಗಳು ನ್ಯಾಯಾಂಗದಿಂದ ನಿಗದಿಪಡಿಸಿದ ಕಾಲಮಿತಿಗೆ ಬದ್ಧರಾಗಿರಬೇಕೇ?
  8. ರಾಜ್ಯಪಾಲರು ಮಸೂದೆಯನ್ನು ಮೀಸಲಿಟ್ಟಾಗ ರಾಷ್ಟ್ರಪತಿಗಳು 143ನೇ ವಿಧಿಯಡಿ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಕಡ್ಡಾಯವಾಗಿ ಕೇಳಬೇಕೇ?
  9. ಮಸೂದೆಯು ಕಾನೂನಾಗುವ ಮೊದಲು ಗವರ್ನರ್ ಅಥವಾ ರಾಷ್ಟ್ರಪತಿಗಳ ನಿರ್ಧಾರಗಳಲ್ಲಿ ಕೋರ್ಟ್‌ಗಳು ಹಸ್ತಕ್ಷೇಪ ಮಾಡಬಹುದೇ?
  10. 142ನೇ ವಿಧಿಯಡಿ ರಾಷ್ಟ್ರಪತಿ ಅಥವಾ ರಾಜ್ಯಪಾಲರ ನಿರ್ಧಾರಗಳನ್ನು ರದ್ದುಗೊಳಿಸಲು ಅಥವಾ ಬದಲಾಯಿಸಲು ಅನುಮತಿಸಬಹುದೇ?
  11. ರಾಜ್ಯ ವಿಧಾನಸಭೆಯಿಂದ ಅಂಗೀಕರಿಸಲಾದ ಮಸೂದೆಯು ರಾಜ್ಯಪಾಲರ ಸಮ್ಮತಿ ಇಲ್ಲದೆ ಕಾನೂನಾಗಬಹುದೇ?
  12. ಸಾಂವಿಧಾನಿಕ ವ್ಯಾಖ್ಯಾನದ ಪ್ರಶ್ನೆಗಳನ್ನು ಮೊದಲು 145(3)ನೇ ವಿಧಿಯಡಿ ಸಂವಿಧಾನ ಪೀಠಕ್ಕೆ ಕಳುಹಿಸಬೇಕೇ?
  13. 142ನೇ ವಿಧಿಯು ಪ್ರಕ್ರಿಯಾತ್ಮಕ ವಿಷಯಗಳನ್ನು ಮೀರಿ, ಅಸ್ತಿತ್ವದಲ್ಲಿರುವ ಕಾನೂನುಗಳು ಅಥವಾ ಸಾಂವಿಧಾನಿಕ ನಿಬಂಧನೆಗಳಿಗೆ ವಿರುದ್ಧವಾದ ತೀರ್ಪುಗಳನ್ನು ಅನುಮತಿಸುತ್ತದೆಯೇ?
  14. ಕೇಂದ್ರ-ರಾಜ್ಯ ವಿವಾದಗಳನ್ನು 131ನೇ ವಿಧಿಯ ಹೊರಗೆ ಪರಿಹರಿಸಬಹುದೇ, ಇದು ಸುಪ್ರೀಂ ಕೋರ್ಟ್‌ಗೆ ವಿಶೇಷ ಅಧಿಕಾರವನ್ನು ಒದಗಿಸುತ್ತದೆ?

ಸಂವಿಧಾನ ಪೀಠದ ರಚನೆ

ಭಾರತದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಈಗ ರಾಷ್ಟ್ರಪತಿ ಮುರ್ಮು ಅವರು ಎತ್ತಿರುವ 14 ಪ್ರಶ್ನೆಗಳನ್ನು ಪರಿಗಣಿಸಲು ಮತ್ತು ಅಭಿಪ್ರಾಯ ನೀಡಲು ಐದು ಅಥವಾ ಹೆಚ್ಚು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವನ್ನು ರಚಿಸಬೇಕಾಗುತ್ತದೆ. ಈ ಕ್ರಮವು ಗವರ್ನರ್‌ಗಳು ಮತ್ತು ರಾಷ್ಟ್ರಪತಿಗಳ ಅಧಿಕಾರದ ಸೀಮೆಗಳು ಹಾಗೂ ನ್ಯಾಯಾಂಗದ ಹಸ್ತಕ್ಷೇಪದ ಮಿತಿಗಳ ಬಗ್ಗೆ ಒಂದು ಪ್ರಮುಖ ಚರ್ಚೆಗೆ ದಾರಿ ಮಾಡಿಕೊಡಲಿದೆ.

Read More
Next Story