ಮೂರನೇ ಅವಧಿ ಕೋರಿಕೆ ದೇಶದ ಲಾಭಕ್ಕಾಗಿ: ಮೋದಿ
x
ಹೊಸದಿಲ್ಲಿಯ ಭಾರತ ಮಂಟಪದಲ್ಲಿ ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಮೂರನೇ ಅವಧಿ ಕೋರಿಕೆ ದೇಶದ ಲಾಭಕ್ಕಾಗಿ: ಮೋದಿ


ನವದೆಹಲಿ, ಫೆ 18- ಹೊಸ ಮತದಾರರನ್ನು ತಲುಪಲು ಮತ್ತು ಪಕ್ಷ ಅಧಿಕಾರಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಮುಂದಿನ 100 ದಿನಗಳ ಕಾಲ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿ, ʻ2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು, ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ʻಮುಂದಿನ ಐದು ವರ್ಷ ನಿರ್ಣಾಯಕವಾಗಲಿದೆ. ನಾವು 'ವೀಕ್ಷಿತ್ ಭಾರತ್ʼ ಕಡೆಗೆ ಒಂದು ದೊಡ್ಡ ಜಿಗಿತ ತೆಗೆದುಕೊಳ್ಳಬೇಕಿದೆ. ಬಿಜೆಪಿ ಹೆಚ್ಚುಸಂಖ್ಯಾಬಲದಿಂದ ಅಧಿಕಾರಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕೋಟಿಗಟ್ಟಲೆ ಮಹಿಳೆಯರು, ಬಡವರು, ಯುವಕರ ಕನಸು ನನ್ನ ಕನಸುʼ ಎಂದರು.

ʻನಾವು ದೇಶವನ್ನು ಮೆಗಾ ಹಗರಣಗಳು ಮತ್ತು ಭಯೋತ್ಪಾದಕ ದಾಳಿಗಳಿಂದ ಮುಕ್ತಗೊಳಿಸಿದ್ದೇವೆ. ಬಡ ಮತ್ತು ಮಧ್ಯಮ ವರ್ಗದವರ ಜೀವನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ. ಮೂರನೇ ಅವಧಿಯನ್ನು ಅಧಿಕಾರ ಅನುಭವಿಸಲು ಬಯಸುತ್ತಿಲ್ಲ; ಬದಲಾಗಿ, ರಾಷ್ಟ್ರಕ್ಕಾಗಿ ಕೆಲಸ ಮಾಡಲು ಬಯಸುತ್ತಿದ್ದೇನೆ. ನನ್ನ ಮನೆ ಬಗ್ಗೆ ಯೋಚಿಸಿದ್ದರೆ ಕೋಟಿ ಕೋಟಿ ಜನರಿಗೆ ಮನೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲʼ ಎಂದರು.

ʻ10 ವರ್ಷಗಳ ನಿಷ್ಕಳಂಕ ಆಡಳಿತ ಮತ್ತು 25 ಕೋಟಿ ಜನರನ್ನು ಬಡತನದಿಂದ ಹೊರತಂದಿರುವುದು ಸಾಮಾನ್ಯ ಸಾಧನೆಯಲ್ಲ. ಒಮ್ಮೆ ಹಿರಿಯ ನಾಯಕರೊಬ್ಬರು ಪ್ರಧಾನಿ ಮತ್ತು ಸಿಎಂ ಆಗಿ ಸಾಕಷ್ಟು ಕೆಲಸ ಮಾಡಿದ್ದೀರಿ. ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದರು. ಆದರೆ, ನಾನು 'ರಾಷ್ಟ್ರನೀತಿ'ಗಾಗಿ ಕೆಲಸ ಮಾಡುತ್ತಿದ್ದೇನೆ; 'ರಾಜನೀತಿ'ಗಾಗಿ ಅಲ್ಲʼ ಎಂದು ಹೇಳಿದರು.

ʻಕೆಂಪುಕೋಟೆಯಿಂದ ಮಹಿಳೆಯರ ಘನತೆಯ ಬಗ್ಗೆ ಮಾತನಾಡಿದ ಮೊದಲ ಪ್ರಧಾನಿ ನಾನು. ಯುವಕರು, ಮಹಿಳೆಯರು, ರೈತರು ಮತ್ತು ಯುವಕರ ಶಕ್ತಿಯನ್ನು ಒಟ್ಟುಗೂಡಿಸಿ “ವೀಕ್ಷಿತ್ ಭಾರತ್” ನಿರ್ಮಿಸುತ್ತಿದೆ. ಮುಂಬರುವ ದಿನಗಳಲ್ಲಿ,ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸಾಕಷ್ಟು ಅವಕಾಶಗಳಿರುತ್ತವೆ. ಮಿಷನ್‌ ಶಕ್ತಿಯು ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ರಚಿಸುತ್ತದೆ. 15,000 ಮಹಿಳಾ ಸ್ವಸಹಾಯ ಗುಂಪುಗಳು ಡ್ರೋನ್‌ಗಳನ್ನು ಪಡೆಯುತ್ತವೆ. ಮೂರು ಕೋಟಿ ಮಹಿಳೆಯರನ್ನು 'ಲಖಪತಿ ದೀದಿ'ಗಳನ್ನಾಗಿ ಮಾಡಲಾಗುವುದು,ʼ ಎಂದು ಪ್ರಧಾನಿ ಹೇಳಿದರು.

ಬಿಜೆಪಿ ಐದು ಶತಮಾನಗಳ ಜನರ ಕಾಯುವಿಕೆಯನ್ನು ಕೊನೆಗೊಳಿಸಿ, ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದೆ. 500 ವರ್ಷಗಳ ನಂತರ ಗುಜರಾತ್‌ನ ಪಾವಗಡದಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಲಾಗಿದೆ. ಏಳು ದಶಕಗಳ ನಂತರ ಕರ್ತಾರ್‌ಪುರ ಸಾಹಿಬ್ ಹೆದ್ದಾರಿಯನ್ನು ತೆರೆದಿದ್ದೇವೆ. ದೇಶಕ್ಕೆ 370 ನೇ ವಿಧಿಯಿಂದ ಸ್ವಾತಂತ್ರ್ಯ ಸಿಕ್ಕಿದೆʼ ಎಂದು ಪ್ರಧಾನಿ ಹೇಳಿದರು.

Read More
Next Story