2300 ವರ್ಷ ಹಳೆಯ ಬೋಧಿ ವೃಕ್ಷವಿರುವ ಬೌದ್ಧ ದೇವಾಲಯಕ್ಕೆ ಪ್ರಧಾನಿ ಮೋದಿ- ಶ್ರೀಲಂಕಾ ಅಧ್ಯಕ್ಷ ಭೇಟಿ
x

2300 ವರ್ಷ ಹಳೆಯ ಬೋಧಿ ವೃಕ್ಷವಿರುವ ಬೌದ್ಧ ದೇವಾಲಯಕ್ಕೆ ಪ್ರಧಾನಿ ಮೋದಿ- ಶ್ರೀಲಂಕಾ ಅಧ್ಯಕ್ಷ ಭೇಟಿ

ತಮ್ಮ ಭೇಟಿಯ ಮೊದಲ ದಿನದಂದು ಮೋದಿ ಅವರು ಅಧ್ಯಕ್ಷ ದಿಸಾನಾಯಕೆ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ರಕ್ಷಣೆ ಸೇರಿದಂತೆ ಒಟ್ಟು ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದರು.


ಮೂರು ದಿನಗಳ ಶ್ರೀಲಂಕಾ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು(PM Modi Srilanka Visit) ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರೊಂದಿಗೆ ಅನುರಾಧಪುರದ ಜಯ ಶ್ರೀ ಮಹಾ ಬೋಧಿ ದೇವಾಲಯಕ್ಕೆ ಭೇಟಿ ನೀಡಿದರು. ಈ ದೇವಾಲಯವು 2300 ವರ್ಷಗಳಿಗೂ ಹೆಚ್ಚು ಹಳೆಯ ಬೋಧಿ ವೃಕ್ಷವನ್ನು ಹೊಂದಿದ್ದು, ಇದು ಬೌದ್ಧರಿಗೆ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.

ತಮ್ಮ ಭೇಟಿಯ ಮೊದಲ ದಿನದಂದು ಮೋದಿ ಅವರು ಅಧ್ಯಕ್ಷ ದಿಸಾನಾಯಕೆ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ರಕ್ಷಣೆ ಸೇರಿದಂತೆ ಒಟ್ಟು ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಭಾನುವಾರ ಮುಂಜಾನೆ ಉಭಯ ನಾಯಕರು ಅನುರಾಧಪುರಕ್ಕೆ ತೆರಳಿ, ಮಹಾ ಬೋಧಿ ದೇಗುಲಕ್ಕೆ ಭೇಟಿ ನೀಡಿದರು. ಈ ಪುರಾತನ ನಗರವು ಶ್ರೀಲಂಕಾದ ಮೊದಲ ರಾಜಧಾನಿಯಾಗಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೋಧಿ ದೇವಾಲಯದ ವಿಶೇಷತೆ ಏನು?

ಜಯ ಶ್ರೀ ಮಹಾ ಬೋಧಿ ದೇವಾಲಯದಲ್ಲಿ, ಮೋದಿ ಮತ್ತು ದಿಸಾನಾಯಕೆ ಅವರು ಪವಿತ್ರ ಬೋಧಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು. ಈ ವೃಕ್ಷವು ಭಾರತದ ಬೋಧಗಯಾದಲ್ಲಿ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷದಿಂದ ತರಲಾದ ಒಂದು ಕೊಂಬೆಯಿಂದ ಬೆಳೆದಿದೆ ಎಂದು ನಂಬಲಾಗಿದೆ. ಈ ಕೊಂಬೆಯನ್ನು ಕ್ರಿ.ಪೂ. 236 ರಲ್ಲಿ ಅಶೋಕ ಚಕ್ರವರ್ತಿಯ ಪುತ್ರಿ ಸಂಗಮಿತ್ತ ತೇರಿ ಶ್ರೀಲಂಕಾಕ್ಕೆ ತಂದು ನೆಟ್ಟಿದ್ದಳು ಎಂಬ ಐತಿಹ್ಯವಿದೆ. ಈ ಭೇಟಿಯ ಸಂದರ್ಭದಲ್ಲಿ, ದೇವಾಲಯದ ಮುಖ್ಯ ಸನ್ಯಾಸಿಗಳು ಮೋದಿ ಅವರಿಗೆ ಆಶೀರ್ವಾದ ನೀಡಿದರು ಮತ್ತು ರಕ್ಷಾ ಸೂತ್ರವನ್ನು ಕೈಗೆ ಕಟ್ಟಿದರು.

ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದು, "ಅನುರಾಧಪುರದ ಜಯ ಶ್ರೀ ಮಹಾ ಬೋಧಿಯಲ್ಲಿ ಅಧ್ಯಕ್ಷ ದಿಸಾನಾಯಕೆ ಅವರೊಂದಿಗೆ ಪ್ರಾರ್ಥನೆ ಸಲ್ಲಿಸಿದೆ. ಬೌದ್ಧರ ಅತ್ಯಂತ ಗೌರವಾನ್ವಿತ ಸ್ಥಳಕ್ಕೆ ಭೇಟಿ ನೀಡಿರುವುದು ಒಂದು ಆಳವಾದ ಮತ್ತು ವಿನಮ್ರ ಕ್ಷಣವಾಗಿದೆ. ಇದು ಶಾಂತಿ, ಜ್ಞಾನೋದಯ ಮತ್ತು ಆಧ್ಯಾತ್ಮಿಕ ಸಂಗತಿಯ ಜೀವಂತ ಸಂಕೇತವಾಗಿದೆ. ಬುದ್ಧನ ಉಪದೇಶಗಳು ಯಾವಾಗಲೂ ನಮಗೆ ಮಾರ್ಗದರ್ಶನ ಮತ್ತು ದಾರಿದೀಪವಿದ್ದಂತೆ ಎಂದು ಬರೆದುಕೊಂಡಿದ್ದಾರೆ.

ರೈಲ್ವೆ ಯೋಜನೆಗಳ ಉದ್ಘಾಟನೆ

ದೇವಾಲಯ ಭೇಟಿಯ ನಂತರ, ಮೋದಿ ಮತ್ತು ದಿಸಾನಾಯಕೆ ಅವರು ಭಾರತದ ಸಹಾಯದಿಂದ ಅಭಿವೃದ್ಧಿಪಡಿಸಲಾದ ಎರಡು ರೈಲ್ವೆ ಯೋಜನೆಗಳನ್ನು ಉದ್ಘಾಟಿಸಿದರು. ಮೊದಲನೆಯದು ಮಾಹೋ-ಅನುರಾಧಪುರ ರೈಲ್ವೆ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಯಾಗಿದ್ದು, ಎರಡನೆಯದು ಮಾಹೋ-ಒಮಂತಾಯ್ ರೈಲ್ವೆ ಮಾರ್ಗದ ಟ್ರ್ಯಾಕ್‌ನ ಉನ್ನತೀಕರಣವಾಗಿದೆ. ಈ ಯೋಜನೆಗಳು ಶ್ರೀಲಂಕಾದ ಉತ್ತರ ಪ್ರದೇಶವನ್ನು ರಾಜಧಾನಿ ಕೊಲಂಬೊದೊಂದಿಗೆ ಸಂಪರ್ಕಿಸಲಿವೆ. ಅನುರಾಧಪುರ ರೈಲ್ವೆ ನಿಲ್ದಾಣದಲ್ಲಿ ಉಭಯ ನಾಯಕರು ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ಮಾಡಿದರು.

ಈ ಯೋಜನೆಗಳು ಭಾರತದ "ನೆರೆಹೊರೆ ಮೊದಲು" ನೀತಿಯ ಭಾಗವಾಗಿದ್ದು, ಶ್ರೀಲಂಕಾದ ಆರ್ಥಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ತೋರಿಸುತ್ತವೆ.

ಭಾರತ-ಶ್ರೀಲಂಕಾ ಸಂಬಂಧಗಳ ಮೇಲೆ ಪರಿಣಾಮ

ಪ್ರಧಾನಿ ಮೋದಿಯವರ ಶ್ರೀಲಂಕಾ ಭೇಟಿಯು ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೇರಿಸುವಲ್ಲಿ ನೆರವಾಗಿದೆ. ಶನಿವಾರ ನಡೆದ ಮಾತುಕತೆಯಲ್ಲಿ, ರಕ್ಷಣಾ ಒಪ್ಪಂದ, ಇಂಧನ ಕ್ಷೇತ್ರದಲ್ಲಿ ಸಹಕಾರ ಮತ್ತು ಡಿಜಿಟಲೀಕರಣದಂತಹ ವಿಷಯಗಳಲ್ಲಿ ಒಡಂಬಡಿಕೆಗಳು ಆಗಿವೆ. ಈ ಭೇಟಿಯು ಶ್ರೀಲಂಕಾದ ಹೊಸ ಅಧ್ಯಕ್ಷ ದಿಸಾನಾಯಕೆ ಸೆಪ್ಟೆಂಬರ್ 2024 ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೊದಲ ವಿದೇಶಿ ನಾಯಕರ ಭೇಟಿಯಾಗಿದೆ. ಇದು ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

Read More
Next Story