ಆಪರೇಷನ್ ಸಿಂದೂರ್ ಕುರಿತು ಮಾಹಿತಿ ಸಂಗ್ರಹಿಸಲು ಪಾಕ್ ಐಎಸ್​ಐನಿಂದ ಭಾರತೀಯ ವಾಟ್ಸ್‌ಆ್ಯಪ್ ನಂಬರ್ ದುರ್ಬಳಕೆ!
x

ಆಪರೇಷನ್ ಸಿಂದೂರ್ ಕುರಿತು ಮಾಹಿತಿ ಸಂಗ್ರಹಿಸಲು ಪಾಕ್ ಐಎಸ್​ಐನಿಂದ ಭಾರತೀಯ ವಾಟ್ಸ್‌ಆ್ಯಪ್ ನಂಬರ್ ದುರ್ಬಳಕೆ!

7340921702 ಎಂಬ ಮೊಬೈಲ್ ಸಂಖ್ಯೆ ಮೂಲಕ ಪಾಕಿಸ್ತಾನದ ಏಜೆಂಟ್‌ಗಳು ಭಾರತೀಯ ಪತ್ರಕರ್ತರು ಮತ್ತು ನಾಗರಿಕರನ್ನು ಸಂಪರ್ಕಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಏಜೆಂಟ್‌ಗಳು (ISI) ಭಾರತೀಯ ವಾಟ್ಸ್‌ಆ್ಯಪ್ ಸಂಖ್ಯೆಯೊಂದನ್ನು ಬಳಸಿಕೊಂಡು ಭಾರತೀಯ ರಕ್ಷಣಾ ಅಧಿಕಾರಿಗಳಂತೆ ನಟಿಸುತ್ತಾ, 'ಆಪರೇಷನ್ ಸಿಂದೂರ್' ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಿದ್ದಾರೆ ಎಂದು ಆಲ್ ಇಂಡಿಯಾ ರೇಡಿಯೊ ಟ್ವೀಟ್ ಎಚ್ಚರಿಕೆ ಕೊಟ್ಟಿದೆ. 7340921702 ಎಂಬ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ದುರುದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಮೊಬೈಲ್ ಸಂಖ್ಯೆ ಮೂಲಕ ಪಾಕಿಸ್ತಾನದ ಏಜೆಂಟ್‌ಗಳು ಭಾರತೀಯ ಪತ್ರಕರ್ತರು ಮತ್ತು ನಾಗರಿಕರನ್ನು ಸಂಪರ್ಕಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರು 'ಆಪರೇಷನ್ ಸಿಂದೂರ್' ನಡೆಯುತ್ತಿರುವ ಸಂದರ್ಭದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

'ಆಪರೇಷನ್ ಸಿಂದೂರ್' ಮೇ 7ರಂದು ಭಾರತೀಯ ಸೇನೆ ಪಾಕಿಸ್ತಾನ ವಿರುದ್ಧ ನಡೆಸಿ ಒಂದು ಸೈನಿಕ ಕಾರ್ಯಾಚರಣೆಯಾಗಿದ್ದು, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂಬತ್ತು ಉಗ್ರಗಾಮಿ ಕೇಂದ್ರಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿ ನಡೆಸುವ ಮೂಲಕ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗಿತ್ತು. ಈ ಕಾರ್ಯಾಚರಣೆಯು ಕೇವಲ 25 ನಿಮಿಷಗಳಲ್ಲಿ ಪೂರ್ಣಗೊಂಡಿತ್ತು. ಬಳಿಕ ಪಾಕಿಸ್ತಾನ ನಡೆಸಿದ ಪ್ರತಿದಾಳಿಯನ್ನು ಭಾರತ ಹಿಮ್ಮೆಟ್ಟಿಸಿತ್ತು.

ಐಸಿಐ ಕಳ್ಳಾಟ

ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಇಂತಹ ಗುಪ್ತ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದೆ ಎಂದು ವಿಕಿಪೀಡಿಯಾದಲ್ಲಿ ಉಲ್ಲೇಖಿಸಲಾಗಿದೆ. ವಾಟ್ಸ್‌ಆ್ಯಪ್ ಮೂಲಕ ಗೂಢಚರ್ಯೆಗೆ ಸಂಬಂಧಿಸಿದ ಚಟುವಟಿಕೆಗಳು ಭಾರತದಲ್ಲಿ ಹೆಚ್ಚುತ್ತಿರುವ ಕಾಳಜಿಯ ವಿಷಯವಾಗಿದ್ದು, ಭಾರತ ಸರ್ಕಾರವು ಮೆಟಾ ಕಂಪನಿಯೊಂದಿಗೆ ಈ ವಂಚನೆಗಳನ್ನು ತಡೆಗಟ್ಟಲು ಒತ್ತಾಯಿಸುತ್ತಿದೆ ಎಂದು ಹಿಂದಿನ ವರದಿಗಳು ತಿಳಿಸಿವೆ.

ಆದ್ದರಿಂದ, ಸಾರ್ವಜನಿಕರು ಈ ಸಂಖ್ಯೆಯಿಂದ ಬರುವ ಕರೆಗಳು ಅಥವಾ ಸಂದೇಶಗಳ ಬಗ್ಗೆ ಅತ್ಯಂತ ಎಚ್ಚರಿಕೆಯಿಂದಿರಬೇಕು. ಯಾವುದೇ ಕಾರಣಕ್ಕೂ ಈ ಸಂಖ್ಯೆಯೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೂಚನೆ ನೀಡಲಾಗಿದೆ. ಯಾವುದೇ ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳು ಬಂದಲ್ಲಿ ಅವುಗಳ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ದಾಖಲಿಸುವಂತೆ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಬರುವ ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಲಾಗಿದೆ.

Read More
Next Story