ಒಡಿಶಾ: ಬಿಜೆಪಿ, ಬಿಜೆಡಿ ಮೈತ್ರಿ ಸಾಧ್ಯತೆ
ರಾಜ್ಯದಲ್ಲಿ ಲೋಕಸಭೆ, ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ
ಒಡಿಶಾ: ಆಡಳಿತಾರೂಢ ಬಿಜೆಡಿ ಮತ್ತು ಪ್ರತಿಪಕ್ಷ ಬಿಜೆಪಿ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಪರಸ್ಪರ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿವೆ.
ಚುನಾವಣೆ ಪೂರ್ವ ಮೈತ್ರಿ ಕುರಿತು ಯಾವುದೇ ಔಪಚಾರಿಕ ಘೋಷಣೆಯಾಗಿಲ್ಲ. ಆದರೆ, ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯಲಿದ್ದು, ಎರಡೂ ಪಕ್ಷಗಳ ನಾಯಕರು ಚುನಾವಣೆಗೆ ಮುನ್ನ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ.
ಮಾ.6 ರಂದು ಭುವನೇಶ್ವರದಲ್ಲಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ನಿವಾಸದಲ್ಲಿ ಬಿಜೆಡಿ ನಾಯಕರು ಮ್ಯಾರಥಾನ್ ಸಭೆ ನಡೆಸಿದ್ದು, ಬಿಜೆಪಿ ನಾಯಕರು ಹೊಸದಿಲ್ಲಿಯಲ್ಲಿ ಸಭೆ ನಡೆಸಿದ್ದಾರೆ.
ಮೂರು ಗಂಟೆಗಳ ಚರ್ಚೆ ನಂತರ ಬಿಜೆಡಿ ಉಪಾಧ್ಯಕ್ಷ ಮತ್ತು ಶಾಸಕ ದೇಬಿಪ್ರಸಾದ್ ಮಿಶ್ರಾ ಅವರು ಬಿಜೆಪಿಯೊಂದಿಗೆ ಸಂಭವನೀಯ ಮೈತ್ರಿ ಬಗ್ಗೆ ಚರ್ಚೆ ನಡೆದಿರುವುದನ್ನು ಒಪ್ಪಿಕೊಂ ಡರು. ಆದರೆ, ಅದರ ಸಂರಚನೆ ಹೇಗಿರಲಿದೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ.
ʻಬಿಜು ಜನತಾ ದಳ ಒಡಿಶಾದ ಜನರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ. ಮೈತ್ರಿ ಕುರಿತು ಚರ್ಚೆಗಳು ನಡೆದಿವೆ. ನವೀನ್ ಪಟ್ನಾಯಕ್ ಅವರ ನಾಯಕತ್ವದಲ್ಲಿ ಒಡಿಶಾ ಗಣನೀಯ ಪ್ರಗತಿ ಸಾಧಿಸಿದೆ. ರಾಜ್ಯದ ಅಭಿವೃದ್ಧಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಅಗತ್ಯವಿದೆʼ ಎಂದು ಹೇಳಿದರು.
ಮಿಶ್ರಾ ಮತ್ತು ಬಿಜೆಡಿಯ ಹಿರಿಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಸಾಹೂ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ʻಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ಕಾರ್ಯತಂತ್ರ ಕುರಿತು ವ್ಯಾಪಕ ಚರ್ಚೆ ನಡೆಯಿತುʼ ಎನ್ನಲಾಗಿದೆ.
ಬಿಜೆಪಿ ಕೇಂದ್ರ ನಾಯಕತ್ವದಿಂದ ಅಂತಿಮ ನಿರ್ಧಾರ:
ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಂತರ ಬಿಜೆಪಿಯ ಹಿರಿಯ ನಾಯಕ ಮತ್ತು ಸಂಸದ ಜುಯಲ್ ಒರಾಮ್, ಬಿಜೆಡಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಕುರಿತು ಚರ್ಚೆ ನಡೆದಿರುವುದನ್ನು ಒಪ್ಪಿಕೊಂಡರು. ಆದರೆ, ಈ ಬಗ್ಗೆ ಪಕ್ಷದ ಕೇಂದ್ರ ನಾಯಕತ್ವ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು. ಅಮಿತ್ ಶಾ, ಒಡಿಶಾ ಬಿಜೆಪಿ ಅಧ್ಯಕ್ಷ ಮನಮೋಹನ್ ಸಮಾಲ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದರು.
ಒಂದು ವೇಳೆ ಮೈತ್ರಿ ಮಾಡಿಕೊಂಡಲ್ಲಿ ಬಿಜೆಪಿ ಅಧಿಕ ಲೋಕಸಭೆ ಸ್ಥಾನಗಳಲ್ಲಿ ಹಾಗೂ ಬಿಜೆಡಿ ಅಧಿಕ ವಿಧಾನಸಭೆ ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಮೂಲಗಳು ತಿಳಿಸಿವೆ.
2019ರಲ್ಲಿ ಪಕ್ಷಗಳ ಸಾಧನೆ: ಒಡಿಶಾ 21 ಲೋಕಸಭೆ ಮತ್ತು 147 ವಿಧಾನಸಭೆ ಸ್ಥಾನಗಳನ್ನು ಹೊಂದಿದೆ. 2019 ರಲ್ಲಿ ಬಿಜೆಡಿ 12 ಮತ್ತು ಬಿಜೆಪಿ 8 ಲೋಕಸಭೆ ಕ್ಷೇತ್ರದಲ್ಲಿ ಮತ್ತು ವಿಧಾನಸಭೆಯಲ್ಲಿ 112 ಮತ್ತು 23 ಸ್ಥಾನ ಗಳಿಸಿದವು. ಪ್ರಧಾನಿ ಮತ್ತು ನವೀನ್ ಪಟ್ನಾಯಕ್ ಮಂಗಳವಾರ (ಮಾರ್ಚ್ 5) ನಡೆದ ರ್ಯಾಲಿಯಲ್ಲಿ ಪರಸ್ಪರ ಹೊಗಳಿಕೊಂಡಿದ್ದಾರೆ. ಬಿಜೆಡಿ ಸಂಸತ್ತಿನಲ್ಲಿ ಮೋದಿ ಸರ್ಕಾರದ ಕಾರ್ಯಸೂಚಿಯನ್ನು ಬೆಂಬಲಿಸಿದೆ.