
ಆರೋಪಿ ಗುರುಮೂರ್ತಿ ಬೈಕ್‌ನಲ್ಲಿ ಕರೆದೊಯ್ಯುತ್ತಿರುವುದು
ನಿಶ್ಚಿತ್ ಅಪಹರಣ, ಕೊಲೆ |ಸ್ಮೃತಿ ಪಟಲದಲ್ಲಿ ನೆನಪಾಗಿ ಉಳಿದ ಮಗನ ತುಂಟಾಟ ; ಪುತ್ರ ಶೋಕಂ.. ನಿರಂತರಂ
ಟ್ಯೂಷನ್ ಮುಗಿಸಿಕೊಂಡು ಸೈಕಲ್‌ನಲ್ಲಿ ಮನೆಗೆ ಬರುವಾಗ ಇಬ್ಬರು ದುಷ್ಕರ್ಮಿಗಳು ನಿಶ್ಚಿತ್‌ನನ್ನು ಅಪಹರಿಸಿ, ಪೋಷಕರಿಗೆ ಕರೆ ಮಾಡಿ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಜೆ.ಸಿ. ಅಚ್ಯುತ್ ಅವರಿಗೆ ಮಗನೇ ಸರ್ವಸ್ವ. ಮಗನಿಗೆ ಉತ್ತಮ ಶಿಕ್ಷಣ ಕೊಡಿಸುವ ಸಲುವಾಗಿ ಪ್ರತಿಷ್ಠಿತ ಶಾಲೆಗೆ ದಾಖಲಿಸಿ, ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದ ತಂದೆಗೆ ಈಗ ಮಗನನ್ನು ಕಳೆದುಕೊಂಡಿರುವುದು ಶೂನ್ಯ ಭಾವ ಸೃಷ್ಟಿಸಿದೆ. ಮಗನ ಆಟೋಟ, ತುಂಟಾಟದ ದೃಶ್ಯಗಳು ಸ್ಮೃತಿ ಪಟಲದಲ್ಲಿ ಒಮ್ಮೆಲೆ ಹಾದು ಹೋಗುವಾದ ಕಣ್ಣಾಲಿಗಳು ತೇವಗೊಳ್ಳುತ್ತಿವೆ. ಮಗನಿಗಾಗಿ ಪ್ರೀತಿಯಿಂದ ಕೊಡಿಸಿದ ಸೈಕಲ್, ಪುತ್ರ ಶೋಕಂ ನಿರಂತರಂ ಎಂದು ಸಾರಿ ಹೇಳುವಂತೆ ಮನೆಯಂಗಳದಲ್ಲಿ ನಿಂತಿದೆ.
ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಬುಧವಾರ ರಾತ್ರಿ 13 ವರ್ಷದ ಶಾಲಾ ಬಾಲಕನ ಅಪಹರಣ ಹಾಗೂ ಕೊಲೆ ಪ್ರಕರಣದಿಂದ ಇಡೀ ರಾಜ್ಯವೇ ತಲ್ಲಣಗೊಂಡಿದೆ.
ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್‌ನನ್ನು ಇಬ್ಬರು ದುಷ್ಕರ್ಮಿಗಳು ಅಪಹರಿಸಿ, 5 ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಮಗನನ್ನು ಸುರಕ್ಷಿತವಾಗಿ ತಮ್ಮ ಸುಪರ್ದಿಗೆ ಪಡೆಯಲು ಪೋಷಕರು ಹಣದೊಂದಿಗೆ ಸಿದ್ಧವಿದ್ದಾಗಲೇ ಮಗನ ಕೊಲೆ ಸುದ್ದಿ ಪೋಷಕರ ಹೃದಯವನ್ನೇ ಒಡೆದಿತ್ತು.
ಅಪಹರಣದ ವಿಷಯವನ್ನು ಪೊಲೀಸರಿಗೆ ತಿಳಿಸಿ ತಮ್ಮನ್ನು ಸಿಕ್ಕಿಹಾಕಿಸಬಹುದೆಂದು ಭಾವಿಸಿದ ದುರುಳರು, ನಿಶ್ಚಿತ್‌ನನ್ನು ಕೊಂದು ಆತನ ಶವವನ್ನು ಅರಣ್ಯದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಆರೋಪಿಗಳ ಈ ಹೀನ ಕೃತ್ಯಕ್ಕೆ ರಾಜ್ಯವೇ ಬೆಚ್ಚಿ ಬಿದ್ದಿದೆ.
ಗುಂಡೇಟಿನಿಂದ ಚಿಕಿತ್ಸೆ ಪಡೆಯುತ್ತಿರುವ ಆರೋಪಿಗಳು
ಘಟನೆ ನಡೆದಿದ್ದು ಯಾವಾಗ?
ಬೆಂಗಳೂರಿನ ಕ್ರೈಸ್ಟ್ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎ.ನಿಶ್ಚಿತ್ ಎಂದಿನಂತೆ ಅರಕೆರೆಯ ಶಾಂತಿನಿಕೇತನ ಬಡಾವಣೆಯಲ್ಲಿ ಟ್ಯೂಷನ್‌ಗೆ ಹೋಗಿದ್ದ. ನಿಶ್ಚಿತ್ ತಂದೆ ಜೆ.ಸಿ.ಅಚ್ಯುತ್ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಾಯಿ ಸವಿತಾ ಗೃಹಿಣಿಯಾಗಿದ್ದರು.
ಟ್ಯೂಷನ್‌ಗೆ ಹೋಗಿದ್ದ ಬಾಲಕ ನಿಶ್ಚಿತ್, ಸಂಜೆ 7.30 ಗಂಟೆಯಾದರೂ ಬಾರದಿದ್ದಾಗ ಆತಂಕಗೊಂಡ ಪೋಷಕರು ಟ್ಯೂಷನ್ ಮಾಡುವ ಶಿಕ್ಷಕರನ್ನು ಸಂಪರ್ಕಿಸಿದರು. ನಿಗದಿತ ಸಮಯಕ್ಕೆ ಮನೆಯತ್ತ ಹೋದ ಎಂದು ತಿಳಿಸಿದ್ದಾರೆ. ಪೋಷಕರು ಗಾಬರಿಯಿಂದ ಅರೆಕೆರೆ ಉದ್ಯಾನವನದಲ್ಲಿ ಪರಿಶೀಲಿಸಿದಾಗ ನಿಶ್ಚಿತ್ ಕಾಣಲಿಲ್ಲ. ಸೈಕಲ್ ಮಾತ್ರ ಅಲ್ಲಿತ್ತು. ಅಷ್ಟರಲ್ಲಿ ಅನಾಮಧೇಯ ಸಂಖ್ಯೆಯಿಂದ ವಾಟ್ಸ್ ಆಪ್ ಮೆಸೇಜ್‌ನಲ್ಲಿ ದುಷ್ಕರ್ಮಿಗಳು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಾಗ ಮಗನ ಅಪಹರಣವಾಗಿರುವ ವಿಷಯ ತಿಳಿದು ಪೋಷಕರು ಕುಸಿದು ಬಿದ್ದರು.
ಹಣ ಪಡೆಯಲು ಸತಾಯಿಸಿದ್ದ ದುಷ್ಕರ್ಮಿಗಳು
ಅಪಹರಣಕಾರರು ಹಣಕ್ಕೆ ಬೇಡಿಕೆ ಇಡುತ್ತಿದ್ದಂತೆ ಪೋಷಕರು 5 ಲಕ್ಷ ರೂ. ನಗದು ಇಟ್ಟುಕೊಂಡು ಮಗನನ್ನು ಸುರಕ್ಷಿತವಾಗಿ ಕರೆತರಲು ಸಿದ್ಧವಾಗಿದ್ದರು. ಆದರೆ, ಪೊಲೀಸರಿಗೆ ಮಾಹಿತಿ ಹೋಗಿರುವ ಬಗ್ಗೆ ತಿಳಿದ ದುಷ್ಕರ್ಮಿಗಳು ಎರಡು ಕಡೆ ಜಾಗ ಹೇಳಿದರೂ ಹಣ ಪಡೆಯಲು ಮಾತ್ರ ಬಂದಿರಲಿಲ್ಲ. ಪೊಲೀಸರು ಹುಡುಕಾಟ ತೀವ್ರಗೊಳಿಸಿರುವ ಸಂಗತಿ ತಿಳಿದ ಕೂಡಲೇ ಬಾಲಕನನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಕೊಲೆ ಮಾಡಿ ಶವ ಸುಟ್ಟು ಹಾಕಿದ್ದರು.
ಕಗ್ಗಲಿಪುರ ರಸ್ತೆಯ ಬಿಲ್ವಾರದಹಳ್ಳಿ ನಿರ್ಜನ ಪ್ರದೇಶದಲ್ಲಿ ಗುರುವಾರ ಜಾನುವಾರು ಮೇಯಿಸಲು ಹೋದ ಸ್ಥಳೀಯ ವ್ಯಕ್ತಿಯೊಬ್ಬರು ಬಂಡೆಯ ಮೇಲೆ ಬಾಲಕ ಶವ ಸುಟ್ಟ ಸ್ಥಿತಿಯಲ್ಲಿರುವುದು ನೋಡಿ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಹೋಗಿ ನೋಡಿದ ಬಳಿಕ ಅಪಹರಣವಾದ ನಿಶ್ಚಿತ್ ಕೊಲೆಯಾಗಿರುವುದು ದೃಢಪಟ್ಟಿತು.
ಘಟನಾ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
ಆರೋಪಿಗಳಿಗಾಗಿ ತಡರಾತ್ರಿ ಕಾರ್ಯಾಚರಣೆ
ನಿಶ್ಚಿತ್ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದಂತೆ ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಆದರೆ, ಆರೋಪಿಗಳ ಕಗ್ಗಲಿಪುರದ ಅರಣ್ಯಪ್ರದೇಶದಲ್ಲೇ ತಲೆ ಮರೆಸಿಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಗುರುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಹುಳಿಮಾವು ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಪಿಎಸ್‌ಐ ಅರವಿಂದ ಸ್ವಾಮಿ ಅವರು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಿದರು. ಆಗ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದಾಗ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು. ಬಂಧಿತರನ್ನು ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಎಂದು ಗುರುತಿಸಲಾಗಿದೆ. ಗಾಯಾಳು ಆರೋಪಿಗಳನ್ನು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವಿಕ್ಟೋರಿಯಾಗೆ ದಾಖಲಿಸಲಾಗಿದೆ.
ಪರಿಚಿತ ಕಾರು ಚಾಲಕನಿಂದಲೇ ದುಷ್ಕೃತ್ಯ?
ನಿಶ್ಚಿತ್ ಅಪಹರಣ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸುತ್ತಲೇ ಬಂಧಿತರಲ್ಲಿ ಒಬ್ಬನಾದ ಗುರುಮೂರ್ತಿ ಪರಿಚಿತ ಕಾರು ಚಾಲಕನಾಗಿದ್ದ. ಈತನೇ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ.
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪಿ ಗುರುಮೂರ್ತಿಯು ನಿಶ್ಚಿತ್ ಪೋಷಕರ ಸ್ಪೇರ್ ಡ್ರೈವರ್ ಆಗಿ ಕಾರ್ಯನಿರ್ವಹಿಸಿದ್ದ. ಈ ಸಂಬಂಧ ಆಗಾಗ್ಗೆ ಮನೆಗೆ ಬರುತ್ತಿದ್ದ ಎಂದು ತಿಳಿದು ಬಂದಿದೆ.
8 ತಿಂಗಳ ಹಿಂದಷ್ಟೇ ಬಾಲಕನ ತಾಯಿ DriveU ಆ್ಯಪ್ ಮೂಲಕ ಕಾರು ಬುಕ್ ಮಾಡಿದ್ದರು. ಅಂದು ಕ್ಯಾಬ್ ಚಾಲಕನಾಗಿ ಬಂದಿದ್ದ ಗುರುಮೂರ್ತಿ, ತನ್ನನ್ನು ವಿವರ್ಸ್ ಕಾಲೋನಿ ನಿವಾಸಿ ಎಂದು ಪರಿಚಯಿಸಿಕೊಂಡಿದ್ದ. ಅಂದಿನಿಂದ ಡ್ರೈವಿಂಗ್‌ಗೆ ಗುರುಮೂರ್ತಿಯನ್ನೇ ಸವಿತಾ ಅವರು ಕರೆಸುತ್ತಿದ್ದರು. ಬಾಲಕ ನಿಶ್ಚಿತ್ ಜತೆಯೂ ಉತ್ತಮ ಒಡನಾಟ ಹೊಂದಿದ್ದ ಎಂದು ಹೇಳಲಾಗಿದೆ.
ಪಾನಿಪುರಿ ಕೊಡಿಸುವುದಾಗಿ ಹೇಳಿ ಕರೆದೊಯ್ದಿದ್ದ..!
ಬುಧವಾರ ಆರೋಪಿ ಗುರುಮೂರ್ತಿ ಟ್ಯೂಷನ್ ಮುಗಿಸಿ ಬರುತ್ತಿದ್ದ ನಿಶ್ಚಿತ್‌ನನ್ನು ಪಾನಿಪುರಿ ಕೊಡಿಸುವುದಾಗಿ ಹೇಳಿ ಪಲ್ಸರ್ ಬೈಕ್ ಹತ್ತಿಸಿಕೊಂಡು ಬನ್ನೇರುಘಟ್ಟ ಸರ್ಕಲ್‌ಗೆ ಕರೆದುಕೊಂಡು ಹೋಗಿದ್ದ. ನಂತರ ಬಾಲಕನನ್ನು ಬೆಟ್ಟದ ಕಡೆ ಕರೆದೋಯ್ದು ಸುತ್ತಾಡಿಸಿದ್ದ ದೃಶ್ಯ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿತ್ತು.
ಒಟ್ಟಾರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಹರಣ ಹಾಗೂ ಕೊಲೆಗೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಕೇವಲ ಹಣಕ್ಕಾಗಿ ಬಾಲಕನನ್ನು ಅಪಹರಿಸಿದ್ದರೆ, ಬೇರೆ ಕಾರಣ ಇದೆಯೇ ಎಂಬ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.