
ಗೋಡ್ಸೆ ಹೇಳಿಕೆಯಿಂದ ಪ್ರಧಾನಿಗೆ ನೋವುಂಟು ಮಾಡುವ ಉದ್ದೇಶ ಇರಲಿಲ್ಲ: ಪ್ರಜ್ಞಾ ಠಾಕೂರ್
ನಾಥೂರಾಮ್ ಗೋಡ್ಸೆ ಕುರಿತ ಹೇಳಿಕೆಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಇದಕ್ಕಾಗಿ ಅವರ ಬಳಿ ಈಗಾಗಲೇ ಕ್ಷಮೆಯಾಚಿಸಿದ್ದೇನೆ ಎಂದು ಸಂಸದೆ ಪ್ರಜ್ಞಾ ಠಾಕೂರ್ ಸೋಮವಾರ ಹೇಳಿದ್ದಾರೆ.
ಭೋಪಾಲ್ ಲೋಕಸಭೆ ಕ್ಷೇತ್ರದಿಂದ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದೆ. ಟಿಕೆಟ್ ಪಡೆದ ಅಲೋಕ್ ಶರ್ಮಾ ಅವರಿಗೆ ಶುಭ ಹಾರೈಸಿದ ಅವರು, ತಾವು ಟಿಕೆಟ್ ಕೇಳಿರಲಿಲ್ಲ ಮತ್ತು ಹೈಕಮಾಂಡ್ ಸೂಚನೆಯನ್ನು ಪಾಲಿಸುತ್ತೇನೆ ಎಂದು ಹೇಳಿದರು. ಮಾರ್ಚ್ 2ರಂದು ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಭೋಪಾಲ್ ಕ್ಷೇತ್ರಕ್ಕೆ ಮಾಜಿ ಮೇಯರ್ ಅಲೋಕ್ ಶರ್ಮಾ ಅವರಿಗೆ ಟಿಕೆಟ್ ನೀಡಲಾಗಿದೆ.
ಹಲವು ಬಾರಿ ಪಕ್ಷಕ್ಕೆ ಮುಜುಗರ ಉಂಟು ಮಾಡುವಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರಿಂದ ಠಾಕೂರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಊಹಿಸಲಾಗಿದೆ. 2019 ರಲ್ಲಿ ಕಾಂಗ್ರೆಸ್ ಮೇಲೆ ದಾಳಿ ಮಾಡುವ ಪ್ರಯತ್ನದಲ್ಲಿ ನಾಥೂರಾಮ್ ಗೋಡ್ಸೆಯನ್ನು ʻದೇಶಭಕ್ತʼ ಎಂದು ಕರೆದಿದ್ದರು. ಕ್ಷಮೆಯಾಚಿಸುವಂತೆ ಬಿಜೆಪಿ ಒತ್ತಾಯಿಸಿತ್ತು ಮತ್ತು ಹೇಳಿಕೆ ಪ್ರಧಾನಿ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.
ʻಗಾಂಧೀಜಿ ಅಥವಾ ನಾಥೂರಾಂ ಗೋಡ್ಸೆ ಬಗ್ಗೆ ಟೀಕೆ ಕೆಟ್ಟದು ಮತ್ತು ತಪ್ಪು.ಅವರು ಕ್ಷಮೆ ಯಾಚಿಸಿದ್ದಾರೆ. ಆದರೆ, ನಾನು ಅವರನ್ನು ಎಂದಿಗೂ ಪೂರ್ಣವಾಗಿ ಕ್ಷಮಿಸಲು ಸಾಧ್ಯವಿಲ್ಲʼ ಎಂದು ಮೋದಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದರು.
ʻನಾನು ಯಾವತ್ತೂ ವಿವಾದಾತ್ಮಕ ಹೇಳಿಕೆ ನೀಡಿಲ್ಲ; ಸತ್ಯವನ್ನೇ ಹೇಳಿದ್ದೇನೆ. ರಾಜಕೀಯದಲ್ಲಿ ಸತ್ಯ ಹೇಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಾನು ಸನ್ಯಾಸಿನಿ. ಮಾಧ್ಯಮಗಳು ನನ್ನ ಹೇಳಿಕೆಗಳನ್ನು ವಿವಾದಾತ್ಮಕ ಎನ್ನುತ್ತವೆ. ಆದರೆ, ಜನರು ನಾನು ಸತ್ಯವನ್ನು ಹೇಳುತ್ತೇನೆ ಎಂದು ಒಪ್ಪಿಕೊಳ್ಳುತ್ತಾರೆ. ಪ್ರತಿಪಕ್ಷಗಳು ನನ್ನ ಟೀಕೆಗಳನ್ನು ಬಿಜೆಪಿ ಮೇಲೆ ದಾಳಿ ಮಾಡಲು ಬಳಸಿಕೊಂಡಿವೆʼ ಎಂದು ಹೇಳಿದ್ದಾರೆ.
ʻನಾನು ಈ ಹಿಂದೆ ಟಿಕೆಟ್ ಕೇಳಿರಲಿಲ್ಲ ಮತ್ತು ಈಗಲೂ ಕೇಳಿಲ್ಲ.ನನ್ನ ಹೇಳಿಕೆಗಳಲ್ಲಿನ ಕೆಲವು ಪದಗಳು ಪ್ರಧಾನಿ ಅವರಿಗೆ ಸಂತೋಷವಾಗದಿರಬಹುದು. ನನ್ನನ್ನು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ, ನಾನು ಅವರಲ್ಲಿ ಕ್ಷಮೆಯಾಚಿಸಿದ್ದೇನೆʼ ಎಂದು ಹೇಳಿದರು. ʻ ಭೋಪಾಲ್‌ನಿಂದ ಸ್ಪರ್ಧಿಸುತ್ತಿರುವ ಅಲೋಕ್ ಶರ್ಮಾ ಅವರಿಗೆ ನನ್ನ ಶುಭಾಶಯ. ಈ ಬಾರಿ ನಾವು 400 ಸೀಟು ದಾಟುತ್ತೇವೆʼ ಎಂದು ಹೇಳಿದರು.
ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಠಾಕೂರ್ ಅವರು 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ವಿರುದ್ಧ 3.65 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ದ್ದರು.