ಗೃಹ ಸಚಿವ ಅನಿಲ್‌ ವಿಜ್‌ ಪ್ರಕರಣವನ್ನು ಸಿಬಿಐ ಗೆ ವಹಿಸುವುದಾಗಿ ಹೇಳಿದ್ದಾರೆ

ನಫೆ ಸಿಂಗ್ ರಾಥಿ ಹತ್ಯೆ: ಯುಕೆ ಮೂಲದ ಗ್ಯಾಂಗ್‌ ಕೈವಾಡದ ಶಂಕೆ


ಐಎನ್‌ಎಲ್‌ಡಿ ನಾಯಕ ನಫೆ ಸಿಂಗ್ ರಾಥಿ ಅವರ ಹತ್ಯೆಯ ತನಿಖೆ ನಡೆಸುತ್ತಿರುವ ಹರಿಯಾಣ ಪೊಲೀಸರು, ಪ್ರಕರಣದಲ್ಲಿ ಯುಕೆ ಮೂಲದ ಗ್ಯಾಂಗ್‌ಗಳು ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಮಾಜಿ ಶಾಸಕ ನರೇಶ್ ಕೌಶಿಕ್, ಗೌರವ್ ರಾಥಿ, ಸತೀಶ್ ರಾಥಿ, ಕರಂಬಿರ್ ರಾಥಿ, ರಮೇಶ್ ರಾಥಿ, ಕಮಲ್, ರಾಹುಲ್, ರಾಜ್‌ಪಾಲ್ ಶರ್ಮಾ, ಸಂದೀಪ್ ರಾಥಿ ಮತ್ತು ವೀರೇಂದ್ರ ರಾಥಿ ಸೇರಿದಂತೆ 15 ಶಂಕಿತರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಎಫ್‌ಐಆರ್‌ನಲ್ಲಿರುವ ಐವರ ಹೆಸರು ಉಲ್ಲೇಖಿಸಿಲ್ಲ

ಇತರ ರಾಜಕೀಯ ಕೊಲೆ: ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದ ಬಿಜೆಪಿ ನಾಯಕರೊಬ್ಬರ ಕೊಲೆ ಸೇರಿದಂತೆ ಹಲವು ರಾಜಕೀಯ ಕೊಲೆಗಳ ಹಿಂದೆ ಯುಕೆ ಮೂಲದ ಗ್ಯಾಂಗ್‌ ಗಳು ಇವೆ ಎಂದು ಶಂಕಿಸಲಾಗಿದೆ. ದೆಹಲಿಯ ತಿಹಾರ್ ಜೈಲಿನಲ್ಲಿರುವ ವ್ಯಕ್ತಿಯೊಬ್ಬನ ನಿಕಟ ಸಹಚರನನ್ನು ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಪ್ರಮುಖ ಖಳರಲ್ಲಿ ಒಬ್ಬನಾದ ಸಂದೀಪ್ ಅಲಿಯಾಸ್ ಕಾಲಾ ಜಥೇದಿಯನ್ನು ಇದೇ ಜೈಲಿನಲ್ಲಿ ಇರಿಸಿದ್ದಾರೆ. ರಾಥಿ ಕೊಲೆಗೆ ಬಳಸಿದ್ದ ಐ20 ಕಾರಿಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ರೈಲ್ವೆ ಕ್ರಾಸಿಂಗ್‌ನಲ್ಲಿ ಹೊಂಚುದಾಳಿ: ಭಾನುವಾರ (ಫೆಬ್ರವರಿ 25) ಹರ್ಯಾಣದ ಜಜ್ಜರ್‌ ಜಿಲ್ಲೆಯ ರೈಲ್ವೆ ಕ್ರಾಸಿಂಗ್‌ನಲ್ಲಿ ನಫೆ ಸಿಂಗ್ ರಾಥಿ ಅವರಿದ್ದ ವಾಹನದ ಮೇಲೆ ಮನಬಂದಂತೆ ಗುಂಡು ಹಾರಿಸಿ, ಅವರು ಮತ್ತು ಒಬ್ಬ ಸಹಾಯಕನನ್ನು ಕೊಂದರು. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡರು. ದೆಹಲಿ ಪೊಲೀಸರ ಅಪರಾಧ ವಿಭಾಗ ಮತ್ತು ವಿಶೇಷ ಕೋಶ ಅಪರಾಧ ಸ್ಥಳಕ್ಕೆ ಭೇಟಿ ನೀಡಿತು. ಜೈಲಿನಲ್ಲಿರುವ ಕಾಲಾ ಜಥೇಡಿ, ಲಾರೆನ್ಸ್ ಬಿಷ್ಣೋಯ್ ಮತ್ತು ಪೋರ್ಚುಗಲ್‌ನಲ್ಲಿದ್ದಾನೆ ಎನ್ನಲಾದ ವಿದೇಶಿ ಮೂಲದ ಹಿಮಾಂಶು ಭಾವು ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಗ್ಯಾಂಗ್‌ಗಳು ಹರ್ಯಾಣ, ಪಂಜಾಬ್, ರಾಜಸ್ಥಾನ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಸುಲಿಗೆ ದಂಧೆ ಮತ್ತು ಗುತ್ತಿಗೆ ಹತ್ಯೆಗಳಲ್ಲಿ ತೊಡಗಿಸಿಕೊಂಡಿವೆ.

ʻಜೈಲಿನಲ್ಲಿರುವ ಗ್ಯಾಂಗ್ ಸದಸ್ಯರು ಹಣಕ್ಕಾಗಿ ರಾಥಿಯ ಹತ್ಯೆಗೆ ಒಪ್ಪಂದ ಮಾಡಿಕೊಂಡಿರಬಹುದುʼ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹದಗೆಟ್ಟ ಕಾನೂನು ಸುವ್ಯವಸ್ಥೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷಗಳು ದೂರಿವೆ. ಇದು ರಾಜಕೀಯ ಕೊಲೆಯಾಗಿದ್ದು, ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಿವೆ.

ಆದರೆ, ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ್ದು, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದರು. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿಧಾನಸಭೆಯಲ್ಲಿ ರಾಥಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲಾಗುವುದು ಎಂದು ಭರವಸೆ ನೀಡಿದರು.

Read More
Next Story