ʻಮೋದಿ ಕುಟುಂಬʼ ಪೋಸ್ಟರ್:‌ ದೆಹಲಿಯಲ್ಲಿ ಎಫ್‌ಐಆರ್ ದಾಖಲು
x

ʻಮೋದಿ ಕುಟುಂಬʼ ಪೋಸ್ಟರ್:‌ ದೆಹಲಿಯಲ್ಲಿ ಎಫ್‌ಐಆರ್ ದಾಖಲು

ನಾಪತ್ತೆಯಾಗಿರುವ ಉದ್ಯಮಿಗಳ ಜೊತೆ ಪ್ರಧಾನಿ ಚಿತ್ರ


ಹೊಸದೆಹಲಿ, ಮಾ. 6- ಪ್ರಧಾನಿ ನರೇಂದ್ರ ಮೋದಿ ಅವರು ಪರಾರಿಯಾಗಿರುವ ಉದ್ಯಮಿಗಳಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರೊಂದಿಗೆ ಇರುವ ಪೋಸ್ಟರ್‌ ಗಳು ಮಧ್ಯ ದೆಹಲಿಯಲ್ಲಿ ಕಾಣಿಸಿಕೊಂಡಿವೆ. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮಧ್ಯ ದೆಹಲಿಯ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್‌ಗಳು ʻಮೋದಿ ಕಾ ಅಸಲಿ ಪರಿವಾರ್ʼ (ಮೋದಿಯವರ ನಿಜವಾದ ಕುಟುಂಬ) ಎಂಬ ಶೀರ್ಷಿಕೆಯನ್ನು ಹೊಂದಿವೆ. ಕೆಳಭಾಗದಲ್ಲಿ 'ಭಾರತೀಯ ಯುವ ಕಾಂಗ್ರೆಸ್' ಎಂದು ಬರೆಯಲಾಗಿದೆ.

ಆಸ್ತಿ ವಿರೂಪಗೊಳಿಸುವಿಕೆ ತಡೆ ಕಾಯ್ದೆಯಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ನವದೆಹಲಿ ಮುನ್ಸಿಪಲ್ ಕೌನ್ಸಿಲ್‌ನ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಪೋಸ್ಟರ್‌ಗಳಲ್ಲಿ ಪ್ರಕಾಶಕರ ಅಥವಾ ಅಳವಡಿಸಿದ ವ್ಯಕ್ತಿಯ ಹೆಸರಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್‌ಜೆಡಿಯ ಲಾಲು ಪ್ರಸಾದ್ ಅವರ ʻಕುಟುಂಬವಿಲ್ಲʼ ಎಂಬ ಟೀಕೆಗೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು ಸೋಮವಾರ ʻ140 ಕೋಟಿ ಭಾರತೀಯರು ತಮ್ಮಕುಟುಂಬʼ ಎಂದು ಹೇಳಿದ್ದರು. ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ʻಮೋದಿ ಕಾ ಪರಿವಾರ್ʼ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ತನ್ನ ನಾಯಕನ ಬೆನ್ನಿಗೆ ನಿಂತಿತು. ಪರಾರಿಯಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಕೂಡ ಈ ಕುಟುಂಬದಲ್ಲಿದ್ದಾರೆಯೇ ಎಂದು ಕಾಂಗ್ರೆಸ್‌ ಮಂಗಳವಾರ ಬಿಜೆಪಿಯನ್ನು ಕೇಳಿದೆ.


Read More
Next Story