
MGNREGA v/s VB-G RAM G Part-3| ರಾಜ್ಯದ ಪಾಲು ಹೆಚ್ಚಳದಿಂದ ಆರ್ಥಿಕ ಹೊರೆ, ಕರ್ನಾಟಕಕ್ಕೆ ಬರೆ
ಮನರೇಗಾ ಯೋಜನೆಯಲ್ಲಿ ಶೇ 10 ರಷ್ಟು ಮಾತ್ರವೇ ಇದ್ದ ರಾಜ್ಯದ ಪಾಲನ್ನು ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಶೇ 40ಕ್ಕೆ ಏರಿಸಿರುವ ಪರಿಣಾಮ ರಾಜ್ಯಕ್ಕೆ ಪ್ರತಿ ವರ್ಷ ಸುಮಾರು 2100 ಕೋಟಿ ರೂ.ಹೊರೆ ಬೀಳಲಿದೆ ಎಂದು ಅಂದಾಜು ಮಾಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಬದಲು ವಿಕಸಿತ ಭಾರತ ಗ್ಯಾರೆಂಟಿ ಫಾರ್ ರೋಜಗಾರ್ ಆಜೀವಿಕ ಮಿಷನ್-ಗ್ರಾಮೀಣ (ವಿಬಿ ಜಿ ರಾಮ್ ಜಿ) ಯೋಜನೆ ತಂದಿರುವ ಕೇಂದ್ರ ಸರ್ಕಾರದ ಕ್ರಮವು ರಾಜ್ಯದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುವ ಆತಂಕ ಎದುರಾಗಿದೆ.
ಮನರೇಗಾ ಯೋಜನೆಯಲ್ಲಿ ಶೇ 10 ರಷ್ಟು ಮಾತ್ರವೇ ಇದ್ದ ರಾಜ್ಯದ ಪಾಲನ್ನು ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಶೇ 40ಕ್ಕೆ ಏರಿಸಿರುವ ಪರಿಣಾಮ ರಾಜ್ಯಕ್ಕೆ ಪ್ರತಿ ವರ್ಷ ಸುಮಾರು 2100 ಕೋಟಿ ರೂ.ಹೊರೆ ಬೀಳಲಿದೆ ಎಂದು ಅಂದಾಜು ಮಾಡಲಾಗಿದೆ.
ಈಗಾಗಲೇ ಗ್ಯಾರೆಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ವಾರ್ಷಿಕ 50 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಕೇಂದ್ರದಿಂದ ಕಡಿಮೆ ಅನುದಾನ, ಸಂಪನ್ಮೂಲ ಕ್ರೋಢೀಕರಣ ಸಾಧ್ಯವಾಗದ ಹಿನ್ನೆಲೆ ಬೇರೆ ಬೇರೆ ಯೋಜನೆಗಳಿಗೆ ಮೀಸಲಿರಿಸಿರುವ ಹಣವನ್ನು ಗ್ಯಾರೆಂಟಿಗೆ ವಿನಿಯೋಗಿಸುತ್ತಿದೆ. ಇದರಿಂದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಲಿದೆ.
ಪ್ರಸ್ತುತ, ರಾಜ್ಯದಲ್ಲಿ ನೋಂದಣಿ ಆಗಿರುವ ಎಲ್ಲಾ ಕುಟುಂಬಗಳಿಗೆ ಹೊಸ ಕಾಯ್ದೆ ಅನುಸಾರ( ವಾರ್ಷಿಕ 125 ದಿನ) ಉದ್ಯೋಗ ಒದಗಿಸಿದರೆ ವಾರ್ಷಿಕ 4-5 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಈ ಮೊತ್ತವು ಐದು ವರ್ಷಗಳ ಅವಧಿಯಲ್ಲಿ ಅಂದಾಜು 20-25 ಸಾವಿರ ಕೋಟಿ ಆಗಬಹುದು. ಇದರಿಂದ ರಾಜ್ಯದ ಆರ್ಥಿಕತೆ ಮೇಲೆ ಒತ್ತಡ ಬೀಳಲಿದ್ದು, ಇತರ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಎದುರಾಗುವ ಸಾಧ್ಯತೆಗಳಿವೆ.
ವಾರ್ಷಿಕ 2100 ಕೋಟಿ ರೂ. ಖರ್ಚು
ರಾಜ್ಯದಲ್ಲಿ ಒಟ್ಟು 80.9 ಲಕ್ಷ ಕುಟುಂಬಗಳು ಜಾಬ್ ಕಾರ್ಡ್ ಹೊಂದಿವೆ. ಮನರೇಗಾ ಯೋಜನೆಯಡಿ ಈ ಕುಟುಂಬಗಳಲ್ಲಿ ಶೇ 36 ರಷ್ಟು ಜನರಿಗೆ ಮಾತ್ರ ಕೆಲಸ ನೀಡಲಾಗುತ್ತಿದೆ. ಪ್ರತಿ ಮನೆಗೆ ಸರಾಸರಿ 45 ದಿನಗಳ ಉದ್ಯೋಗ ದೊರೆಯುತ್ತಿತ್ತು. ಯೋಜನೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮವಾಗಿ ಶೇ 90:10 ಅನುಪಾತದಂತೆ ಹಣ ವ್ಯಯಿಸುತ್ತಿದ್ದವು. ಅದರಂತೆ 2024-25ರಲ್ಲಿ ಕೇಂದ್ರ ಸರ್ಕಾರ 6,251 ಕೋಟಿ ರೂ. ನೀಡಿದರೆ, ಕರ್ನಾಟಕವು 573 ಕೋಟಿ ರೂ. ಒದಗಿಸಿತ್ತು.
ಈಗ ಹೊಸ ಯೋಜನೆಯಲ್ಲಿ ಶೇ 60:40 ಅನುಪಾತದಡಿ ಅನುದಾನ ನೀಡುವುದಾದರೆ ಕೇಂದ್ರ ಸರ್ಕಾರ 4,095 ಕೋಟಿ ರೂ. ಭರಿಸಬೇಕು, ರಾಜ್ಯ ಸರ್ಕಾರ 2,100 ಕೋಟಿ ರೂ. ಭರಿಸಬೇಕಾಗುತ್ತದೆ. ಒಂದು ವೇಳೆ ಎಲ್ಲಾ ಜಾಬ್ ಕಾರ್ಡ್‌ದಾರರಿಗೆ ಪೂರ್ಣ ಪ್ರಮಾಣದ ಅಂದರೆ 125 ದಿನಗಳ ಕೆಲಸ ಒದಗಿಸಿದರೆ, ವಾರ್ಷಿಕವಾಗಿ 4-5 ಸಾವಿರ ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಹಾಗಾಗಿಯೇ, ವಿಬಿ ಜಿ ರಾಮ್ ಜಿ ಯೋಜನೆಗೆ ರಾಜ್ಯ ಸರ್ಕಾರ ತೀವ್ರ ತಕರಾರು ತೆಗೆದಿದೆ.
ಜಿಎಸ್ ಟಿ ಪಾಲಿನಲ್ಲೂ ಅನ್ಯಾಯ
ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. 2025ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ 1.60 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹಿಸಿದೆ.
ಮಹಾರಾಷ್ಟ್ರ 2.09 ಲಕ್ಷ ಕೋಟಿ, ಗುಜರಾತ್ 1.40 ಲಕ್ಷ ಕೋಟಿ, ತಮಿಳುನಾಡು 1.30 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹಿಸಿವೆ. ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ 1.05 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹದೊಂದಿಗೆ ಐದನೇ ಸ್ಥಾನದಲ್ಲಿದೆ. ವಿಪರ್ಯಾಸವೆಂದರೆ ಕಡಿಮೆ ಜಿಎಸ್ ಟಿ ಸಂಗ್ರಹಿಸುವ ರಾಜ್ಯಗಳಿಗೆ ಹೆಚ್ಚು ತೆರಿಗೆ ಪಾಲು ಸಿಗುತ್ತಿದ್ದು, ಕರ್ನಾಟಕಕ್ಕೆ ಕಡಿಮೆ ತೆರಿಗೆ ಹಣ ಸಿಗುತ್ತಿದೆ. ಇದನ್ನು ಜಿಎಸ್ಟಿ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಿ, ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರೂ ತೆರಿಗೆ ಸಂಗ್ರಹಕ್ಕೆ ಅನುಗುಣವಾದ ಪಾಲು ಬಿಡುಗಡೆ ಮಾಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಕೇಂದ್ರದಿಂದ ಸಮರ್ಪಕವಾದ ತೆರಿಗೆ ಪಾಲು ಸಿಗದ ಕಾರಣ ವಾರ್ಷಿಕ 18 ಸಾವಿರ ಕೋಟಿ ಆದಾಯ ನಷ್ಟವಾಗುತ್ತಿದೆ. ಇದರಿಂದ ಕಲ್ಯಾಣ ಕಾರ್ಯಕ್ರಮಗಳಿಗೂ ಹಣಕಾಸಿನ ಸಮಸ್ಯೆ ಎದುರಾಗಿದೆ. ಇದೀಗ ವಿಬಿಜಿ ರಾಮ್ ಜಿ ಯೋಜನೆಯಡಿ ರಾಜ್ಯದ ಪಾಲು ಹೆಚ್ಚಳದಿಂದ ಇನ್ನಷ್ಟು ಆರ್ಥಿಕ ಹೊರೆ ಕರ್ನಾಟಕದ ಮೇಲೆ ಬೀಳಲಿದೆ.
"ಕರ್ನಾಟಕದಲ್ಲಿ ಎರಡೂವರೆ ವರ್ಷಗಳಲ್ಲಿ 21,144 ಕೋಟಿ ವೆಚ್ಚದ 17 ಲಕ್ಷ ಗ್ರಾಮೀಣ ಆಸ್ತಿಗಳನ್ನು ಮನರೇಗಾ ಯೋಜನೆಯಡಿ ಸೃಷ್ಟಿಸಲಾಗಿದೆ. 80 ಲಕ್ಷ ಕುಟುಂಬಗಳಿಗೆ ಜೀವನೋಪಾಯ ಒದಗಿಸಿದ್ದೇವೆ. ಈಗ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ರಾಜ್ಯದ ಪಾಲು ಹೆಚ್ಚಿಸುವ ಮೂಲಕ ಕಲ್ಯಾಣ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಹೊಡೆತ ನೀಡುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಮೇಲೆ ಅಧಿಕ ಹೊರೆ ಹೊರಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗಕ್ಕೆ ಕಾರಣವಾಗಲಿದೆ. ಕಾಯ್ದೆಯಲ್ಲಿರುವ ಲೋಪಗಳಿಂದ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಕಡಿಮೆಯಾಗಲಿದೆ" ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕೇಂದ್ರ ಸರ್ಕಾರ ಸೂಚಿಸಿದ ಪ್ರದೇಶಗಳಲ್ಲಿ ಮಾತ್ರ ಉದ್ಯೋಗ ಕೈಗೆತ್ತಿಬೇಕಾದ ಪರಿಸ್ಥಿತಿ ಎದುರಾಗಲಿದೆ. ಮನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವವರು ಎಲ್ಲಿ ಬೇಕಾದರೂ ಕೆಲಸ ಮಾಡಬಹುದಾಗಿತ್ತು. ಹೊಸ ಮಸೂದೆಯಲ್ಲಿ ಅದಕ್ಕೆ ಅವಕಾಶವಿಲ್ಲ. ರಾಜ್ಯಗಳ ಅನುದಾನದ ಪಾಲು ಹೆಚ್ಚಳದಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯವು ಯೋಜನೆಗಾಗಿ ಸುಮಾರು 20 ಸಾವಿರ ಕೋಟಿ ರೂ. ವ್ಯಯಿಸಬೇಕಾಗಬಹುದು ಎಂದು ಹೇಳಿದ್ದಾರೆ.
ವೆಲ್‌ಲ್ಯಾಬ್‌ನ ಮ್ಯಾನೇಜಿಂಗ್ ಪಾರ್ಟನರ್ ವಿವೇಕ್ ಗ್ರೇವಾಲ್ 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ, ಕೇಂದ್ರದ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 60:40 ಅನುಪಾತ ಮಾಡಿರುವುದರಿಂದ ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಮನರೇಗಾ ಯೋಜನೆಯಲ್ಲಿ ಬಹುಪಾಲ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಕೇಂದ್ರದ ನಿಗದಿ ಮಾಡಿರುವ ಅನುಪಾತದಿಂದಾಗಿ ರಾಜ್ಯ ಸರ್ಕಾರಗಳು ಮೀಸಲಿಟ್ಟ ಅನುದಾನ ಸಾಕಾಗುವುದಿಲ್ಲ. ಇದಕ್ಕಾಗಿ ಹೆಚ್ಚುವರಿ ಅನುದಾನ ಮೀಸಲಿಡಬೇಕಾಗಿದೆ. ಇದು ಬೇರೆ ಯೋಜನೆಗಳ ಕುಂಠಿತಕ್ಕೆ ಕಾರಣವಾಗಲಿದೆ ಎಂದು ಹೇಳಿದರು.
ರಾಜ್ಯಕ್ಕೆ ಬರಬೇಕಾದ ಅನುದಾನವನ್ನೇ ನೀಡಿಲ್ಲ
15ನೇ ಹಣಕಾಸು ಆಯೋಗ ನೀಡಿದ್ದ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. 5,490 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ 3ಸಾವಿರ ಕೋಟಿ, ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ 3 ಸಾವಿರ ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ 5ಸಾವಿರ ಕೋಟಿ ನೀಡಿಲ್ಲ. ಇದೇ ರೀತಿ ವಿವಿಧ ಯೋಜನೆಗಳಲ್ಲಿ ಸುಮಾರು 17 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
ಪಂಚಾಯಿತಿಗಳಿಗೆ ಮೂರು ಹಾಗೂ ನಾಲ್ಕು ಕಂತುಗಳು ಬಿಡುಗಡೆ ಆಗಿಲ್ಲ. 15ನೇ ಹಣಕಾಸಿನ ಶಾಸನಬದ್ಧ ಅನುದಾನವನ್ನೂ ನೀಡಿಲ್ಲ. 2024-25 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ಬರಬೇಕಾಗಿದ್ದ 22,758 ಕೋಟಿ ಅನುದಾನದಲ್ಲಿ ಸುಮಾರು 4,195 ಕೋಟಿ ಬಾಕಿ ಉಳಿಸಿಕೊಂಡಿದೆ.
2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಂದಾಜು 51,876 ಕೋಟಿ ತೆರಿಗೆ ಪಾಲು ನಿಗದಿಪಡಿಸಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು ಶೇ10 ರಷ್ಟು ಹೆಚ್ಚಳವಾದರೂ 15ನೇ ಹಣಕಾಸು ಆಯೋಗವು ರಾಜ್ಯದ ಪಾಲನ್ನು ಶೇ 4.71 ರಿಂದ 3.64 ಕ್ಕೆ ಇಳಿಸಿರುವುದರಿಂದ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂಬುದು ಕರ್ನಾಟಕ ಸರ್ಕಾರದ ವಾದವಾಗಿದೆ.
ಸಾಮಾಜಿಕ ಭದ್ರತಾ ಯೋಜನೆಯಡಿ ವಿಧವಾ ಪಿಂಚಣಿ, ವೃದ್ಧಾಪ್ಯ ಹಾಗೂ ಅಂಗವಿಕಲರ ಪಿಂಚಣಿ ಯೋಜನೆಗಳಿಗೆ ಕೇಂದ್ರದ ಅನುದಾನ ಕೇವಲ 559.61ಕೋಟಿ ರೂ. ನಿಗದಿಯಾಗಿತ್ತು. ಆದರೆ, ಕೇಂದ್ರದಿಂದ ಇಲ್ಲಿಯವರೆಗೆ ಬಿಡುಗಡೆ ಆಗಿರುವುದು 113.92ಕೋಟಿ ಮಾತ್ರ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಾಗಿ ಕೇಂದ್ರ ಸರ್ಕಾರ ಎರಡು ವರ್ಷದಲ್ಲಿ 10000 ಕೋಟಿ ಬಾಕಿ ಉಳಿಸಿಕೊಂಡಿದೆ.
ಜಲ ಜೀವನ್ ಮಿಷನ್ ಯೋಜನೆಗಾಗಿ 23-24 ನೇ ಸಾಲಿನಲ್ಲಿ 7656 ಕೋಟಿ, 24-25 ರ ಸಾಲಿನಲ್ಲಿ 3803 ಕೋಟಿ ಪೈಕಿ 570 ಕೋಟಿ ರೂ. ಮಾತ್ರವೇ ನೀಡಿದೆ. ಒಟ್ಟು 3233 ಕೋಟಿ ಹಣವನ್ನು ಕೇಂದ್ರ ಜಲಜೀವನ್ ಮಿಷನ್ ಯೋಜನೆಯಲ್ಲಿ ಬಾಕಿ ಉಳಿಸಿಕೊಂಡಿದೆ. ವಿಪರ್ಯಾಸವೆಂದರೆ ಕೇಂದ್ರದ ಅನುದಾನಕ್ಕಿಂತ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರವೇ ಭರಿಸಿದೆ. ಸುಮಾರು 4977 ಕೋಟಿ ಖರ್ಚು ಮಾಡಿ 80 ರಷ್ಟು ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದೆ.

