ಬಟ್ಟೆ ಸ್ವಚ್ಛವಾಗಿಲ್ಲವೆಂದು ವ್ಯಕ್ತಿಗೆ ಮೆಟ್ರೋ ಪ್ರವೇಶ ನಿರಾಕರಣೆ: ಮೆಟ್ರೋ ಸಿಬ್ಬಂದಿ ವಜಾ
x
ನಮ್ಮ ಮೆಟ್ರೋ

ಬಟ್ಟೆ ಸ್ವಚ್ಛವಾಗಿಲ್ಲವೆಂದು ವ್ಯಕ್ತಿಗೆ ಮೆಟ್ರೋ ಪ್ರವೇಶ ನಿರಾಕರಣೆ: ಮೆಟ್ರೋ ಸಿಬ್ಬಂದಿ ವಜಾ

ಮೆಟ್ರೋ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ


ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬಟ್ಟೆ ಸ್ವಚ್ಛವಾಗಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊ ರೊಬ್ಬರನ್ನು ಮೆಟ್ರೋ ಸಿಬ್ಬಂದಿ ಮೆಟ್ರೋ ಪ್ರವೇಶ ದ್ವಾರದಲ್ಲೇ ತಡೆದಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಬಟ್ಟೆ ಸ್ವಚ್ಛವಾಗಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಮೆಟ್ರೋ ಸಿಬ್ಬಂದಿ ನಿಲ್ದಾಣದ ಒಳಗೆ ಪ್ರವೇಶಿಸದಂತೆ ಸೋಮವಾರ ಬೆಳಿಗ್ಗೆ ತಡೆದಿದ್ದಾರೆ.

ಮೆಟ್ರೋ ಸಿಬ್ಬಂದಿ ಈ ವರ್ತನೆಗೆ ಪ್ರಯಾಣಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಸಹಪ್ರಯಾಣಿಕರೊಬ್ಬರು ಆ ವ್ಯಕ್ತಿಯನ್ನು ಮೆಟ್ರೋದಲ್ಲಿ ಕರೆದೊಯ್ದಿದ್ದಾರೆ.

ಘಟನೆಯ ಹಿನ್ನೆಲೆ ಏನು ?

ಸೋಮವಾರ ವ್ಯಕ್ತಿಯೊಬ್ಬರು ತಲೆಯ ಮೇಲೆ ಬಟ್ಟೆಯ ಚೀಲವೊಂದನ್ನು ತೆಗೆದುಕೊಂಡು ಬೆಂಗಳೂರಿನ ರಾಜಾಜಿ ನಗರದ ಮೆಟ್ರೋ ನಿಲ್ದಾಣ ಪ್ರವೇಶಿಸಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಮೆಟ್ರೋ ಸುರಕ್ಷತಾ ತಪಾಸಣೆ ಸಿಬ್ಬಂದಿ ವ್ಯಕ್ತಿಯನ್ನು ತಡೆದಿದ್ದಾರೆ. ಇದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಯಾಕೆ ಅವರನ್ನು ಒಳಗಡೆ ಬಿಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಮೆಟ್ರೋ ಸಿಬ್ಬಂದಿ ಅವರ ಬಟ್ಟೆ ಕೊಳಕಾಗಿದೆ. ಸಹ ಪ್ರಯಾಣಿಕರಿಗೆ ಅಸಹ್ಯವಾಗುತ್ತದೆ ಎನ್ನುವ ಉತ್ತರವನ್ನು ನೀಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನು ಮೆಟ್ರೋದ ಪ್ರಯಾಣಿಕರು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದು, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ

ಈ ಬೆಳವಣಿಗೆಗೆ ಸಾಮಾಜಿಕ ಜಾಲತಾಣದಲ್ಲಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋದಲ್ಲಿ ಯಾವ ರೀತಿಯ ಬಟ್ಟೆ ಹಾಕಿಕೊಂಡು ಬರಬೇಕು ಎನ್ನುವ ನಿಯಮವೇನಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಮೆಟ್ರೋ ಸಿಬ್ಬಂದಿ ವಜಾ

ಈ ಬಗ್ಗೆ ಮಾತನಾಡಿರುವ ಮೆಟ್ರೋ ಎಂ.ಡಿ ಮಹೇಶ್ವರನ್‌ ಅವರು, ಈ ಘಟನೆಗೆ ಕಾರಣರಾದ ಮೆಟ್ರೋ ಸಿಬ್ಬಂದಿಯನ್ನು ವಜಾಗೊಳಿಸಿರುವುದಾಗಿ ತಿಳಿಸಿದ್ದಾರೆ.

ವಿಷಾದ ವ್ಯಕ್ತಪಡಿಸಿದ ಮೆಟ್ರೋ ನಿಗಮ

ಈ ಘಟನೆಗೆ ನಮ್ಮ ಮೆಟ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಷಾದ ವ್ಯಕ್ತಪಡಿಸಿದೆ. ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ, ಭದ್ರತಾ ಮೇಲ್ವಿಚಾರಕನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತದೆ ಎಂದು ಹೇಳಿದೆ.

Read More
Next Story