ಪ್ರಧಾನಿ ಮೋದಿ ಮತ್ತು ಸಿಎಂ ಮಮತಾ ಭೇಟಿ
ಕೋಲ್ಕತ್ತಾ, ಮಾ.1- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಕೋಲ್ಕತ್ತಾದ ರಾಜಭವನದಲ್ಲಿ ಭೇಟಿಯಾದರು. ಇದೊಂದು ಸೌಜನ್ಯದ ಭೇಟಿ. ರಾಜ್ಯದ ಕೊಡಬೇಕಿರುವ ಬಾಕಿಗಳ ಬಗ್ಗೆ ಪ್ರಧಾನಿಯವರೊಂದಿಗೆ ಚರ್ಚಿಸಿದ್ದೇನೆ ಎಂದು ಬ್ಯಾನರ್ಜಿ ಹೇಳಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ʻನಾನು ಪ್ರಧಾನಿ ಅವರೊಂದಿಗೆ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸಿದೆʼ ಎಂದರು.
ರಾಜ್ಯಕ್ಕೆ ಕೇಂದ್ರದ ಬಾಕಿ ಕುರಿತ ಪ್ರಶ್ನೆಗೆ ಬ್ಯಾನರ್ಜಿ ಪ್ರತಿಕ್ರಿಯಿಸಿ, ʻನಾನು ಆ ವಿಷಯ ಸಹ ಪ್ರಸ್ತಾಪಿಸಿದೆʼ ಎಂದು ಹೇಳಿದರು. ಶುಕ್ರವಾರದಿಂದ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಮೋದಿ, ರಾತ್ರಿ ರಾಜಭವನದಲ್ಲಿ ತಂಗಿದ್ದಾರೆ. ಪ್ರಧಾನಿ ರಾಜಭವನಕ್ಕೆ ಬಂದ ಸ್ವಲ್ಪ ಸಮಯದ ನಂತರ ಬ್ಯಾನರ್ಜಿ ಆಗಮಿಸಿದರು.
ಪ್ರಧಾನಿ ಕಾರ್ಯಕ್ರಮಗಳಲ್ಲಿ ರಾಜ್ಯಪಾಲರು
ರಾಜಭವನದಲ್ಲಿ ಪ್ರಧಾನಿ ಅವರನ್ನು ಬರಮಾಡಿಕೊಂಡಿರುವುದಾಗಿ ರಾಜ್ಯಪಾಲ ಸಿ.ವಿ. ಆನಂದ ಬೋಸ್ ತಿಳಿಸಿದ್ದಾರೆ. ಮೋದಿ ಅವರು 7,200 ಕೋಟಿ ರೂ.ಗಳ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಅರಾಂಬಾಗ್ ಕಾರ್ಯಕ್ರಮದಲ್ಲಿ ಬೋಸ್ ಅವರು ಭಾಗವಹಿಸಿದ್ದರು.
ಟಿಎಂಸಿ ಪ್ರಕಾರ, ಕೇಂದ್ರವು ಪಶ್ಚಿಮ ಬಂಗಾಳಕ್ಕೆ 1.18 ಲಕ್ಷ ಕೋಟಿ ರೂ.ಪಾವತಿಸಬೇಕಿದೆ. ಕೇಂದ್ರ ಸರ್ಕಾರ ಗುರುವಾರ ರಾಜ್ಯಗಳಿಗೆ ತೆರಿಗೆ ಹಂಚಿಕೆಯ ಎರಡು ಕಂತುಗಳನ್ನು ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳವು 10,692 ಕೋಟಿ ರೂ. ಪಡೆಯುತ್ತಿದೆ, ಇದು ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದ ನಂತರ ನಾಲ್ಕನೇ ಅತಿ ಹೆಚ್ಚು ಮೊತ್ತವಾಗಿದೆ.
ರಾಜ್ಯ ಸರ್ಕಾರ ಸರಿಸುಮಾರು 30 ಲಕ್ಷ ನರೇಗಾ ಕಾರ್ಮಿಕರಿಗೆ ಸೋಮವಾರದಿಂದ ಬಾಕಿ ಪಾವತಿಸಲು ಪ್ರಾರಂಭಿಸಿದೆ. ಮಾರ್ಚ್ 2022 ರಿಂದ 2,700 ಕೋಟಿ ರೂ. ಬಾಕಿ ಉಳಿದಿದೆ.