ಚುನಾವಣೆ- 2024 | ಬಿಜೆಪಿ ಎರಡನೇ ಪಟ್ಟಿ ಬುಧವಾರ?
ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಅಂತಿಮಗೊಳಿಸಲಾಗುವುದು ಎಂದು ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಹೇಳಿದ್ದಾರೆ.
ಮಾರ್ಚ್ 2 ರಂದು 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಯಡಿಯೂರಪ್ಪ ಅವರು ಬುಧವಾರ (ಮಾರ್ಚ್ 6) ದೆಹಲಿಗೆ ತೆರಳಲಿದ್ದಾರೆ.ʻನಾಳೆ ದೆಹಲಿ ಯಲ್ಲಿ ಸಭೆ ಇದೆ. ನಾನು ಹೋಗುತ್ತಿದ್ದೇನೆ. ಬಹುಶಃ ಕರ್ನಾಟಕವನ್ನು ಒಳಗೊಂಡಿರುವ ಎರಡನೇ ಪಟ್ಟಿಯನ್ನು ಅಂತಿಮಗೊಳಿಸಬಹುದು. ರಾಷ್ಟ್ರೀಯ ನಾಯಕರು ಪಟ್ಟಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ,' ಎಂದರು.
ಎರಡನೇ ಪಟ್ಟಿಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳಿರುತ್ತವೆಯೇ ಎಂದು ಕೇಳಿದಾಗ, ʻಬಹುಶಃ ಯಾವುದೇ ವಿಳಂಬವಾಗುವುದಿಲ್ಲ. ಎಲ್ಲ ಸ್ಥಾನಗಳನ್ನು ಘೋಷಿಸಬಹುದು. ರಾಜ್ಯದಲ್ಲಿ ಕೆಲವು ಹೊಸ ಮುಖಗಳನ್ನು ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ರಾಷ್ಟ್ರೀಯ ನಾಯಕರ ಮನಸ್ಸಿನಲ್ಲಿ ಏನಿದೆ ಎಂಬ ಯಾವುದೇ ಸುಳಿವು ಇಲ್ಲ. ಅಂತಿಮ ನಿರ್ಧಾರವನ್ನು ದೆಹಲಿಯಲ್ಲಿರುವ ನಾಯಕರು ತೆಗೆದುಕೊಳ್ಳುತ್ತಾರೆ ʼ ಎಂದು ಹೇಳಿದರು.
ಕರ್ನಾಟಕದಲ್ಲಿ ಎನ್‌ಡಿಎ ಪಾಲುದಾರ ಜೆಡಿಎಸ್‌ಗೆ ಎಷ್ಟು ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಅವರು ಹೇಳಲಿಲ್ಲ. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಪಕ್ಷದೊಂದಿಗೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಿಎಸ್ ವೈ ಹೇಳಿದರು.