ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಟೋಟಕ್ಕೂ, ರಾಮೇಶ್ವರಂ ಕೆಫೆ ಸ್ಫೋಟಕ್ಕೂ ನಂಟು
x
ರಾಮೇಶ್ವರ ಕೆಫೆ ಸ್ಟೋಟದ ಆರೋಪಿಗಳು

ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಟೋಟಕ್ಕೂ, ರಾಮೇಶ್ವರಂ ಕೆಫೆ ಸ್ಫೋಟಕ್ಕೂ ನಂಟು

ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ನಿರೀಕ್ಷಿತ ಮಟ್ಟದಲ್ಲಿ ಸಫಲವಾಗದ ಕಾರಣ ಶಂಕಿತರು ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಳಿಸಿದರು.


ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರಿಂದ ಸ್ಟೋಟಕ ಮಾಹಿತಿ ಹೊರಬಿದ್ದಿದ್ದು, ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ನಿರೀಕ್ಷಿತ ಮಟ್ಟದಲ್ಲಿ ಸಫಲವಾಗದ ಕಾರಣ ಶಂಕಿತರು ರಾಮೇಶ್ವರಂ ಕೆಫೆ ಸ್ಫೋಟ ನಡೆಸಿದರು ಎಂಬುದಾಗಿ ಆರೋಪಿಗಳಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್‌ ಶಜೀಬ್‌ ಅವರು ಎನ್‌ಐಎ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

“ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟವು ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಿರಲಿಲ್ಲ. ಆಟೋದಲ್ಲಿ ತೆರಳುವಾಗ ಆಕಸ್ಮಿಕವಾಗಿ ಸ್ಫೋಟಗೊಂಡು ಮೊಹಮ್ಮದ್‌ ಶಾರೀಕ್‌ ಸಿಕ್ಕಿಬಿದ್ದಿದ್ದ. ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದ ಕಾರಣ ತಾವೇ ಫೀಲ್ಡಿಗೆ ಇಳಿದು, ರಾಮೇಶ್ವರಂ ಕೆಫೆ ಸ್ಫೋಟಗೊಳಿಸಿದ್ದೇವೆ” ಎಂಬುದಾಗಿ ಬಾಂಬರ್‌ಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಕುಕ್ಕರ್‌ ಬಾಂಬ್‌ ಪ್ರಕರಣ

ನವೆಂಬರ್ 19, 2022ರಂದು ಮಂಗಳೂರಿನಲ್ಲಿ ಉಗ್ರ ಶಾರೀಕ್ ಎಂಬಾತ ಆಟೋದಲ್ಲಿ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗುತಿದ್ದಾಗ ದಾರಿ ಮಧ್ಯೆಯೇ ಸ್ಫೋಟಗೊಂಡಿತ್ತು. ಈ ವೇಳೆ ಆಟೋ ಚಾಲಕ ಹಾಗೂ ಶಂಕಿತ ಉಗ್ರ ಇಬ್ಬರೂ ಗಾಯಗೊಂಡಿದ್ದರು. ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದ್ದವು. ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿದ್ದು ಇದು ಐಸಿಸ್ ಉಗ್ರ ಸಂಘಟನೆ ಪ್ರೇರಿತ ದಾಳಿಯಾಗಿದ್ದು, ಹಲವು ಪ್ರಮುಖ ಹಿಂದೂ ದೇಗುಲಗಳು ಉಗ್ರರ ಟಾರ್ಗೆಟ್ ಆಗಿದ್ದವು ಎನ್ನುವ ಆಘಾತಕಾರಿ ವಿಚಾರಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು.

ದಕ್ಷಿಣ ಕನ್ನಡದ ಪ್ರಸಿದ್ಧ ಕ್ಷೇತ್ರವಾದ ಕದ್ರಿ ಮಂಜುನಾಥೇಶ್ವರ ದೇವಸ್ಥಾನವನ್ನು ಸ್ಫೋಟಿಸಿ, ಹಿಂದೂಗಳ ಹತ್ಯೆಗೆ ಶಾರಿಕ್ ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಆದರೆ ಕಡಿಮೆ ಒತ್ತಡದಿಂದ ಆಟೋ ರಿಕ್ಷಾದಲ್ಲೇ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ರಾಮೇಶ್ವರಂ ಕೆಫೆ ಸ್ಫೋಟದ ಕುರಿತು ಮೊಹಮ್ಮದ್ ಶಾರೀಕ್‌ನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಅವರ ಹೆಸರು ಬಾಯಿಬಿಟ್ಟಿದ್ದ. ಇದರಿಂದಾಗಿ ಎನ್‌ಐಎ ಅಧಿಕಾರಿಗಳು ತನಿಖೆ ಕ್ಷಿಪ್ರಗೊಳಿಸಲು ಸಾಧ್ಯವಾಯಿತು ಎನ್ನಲಾಗಿದೆ.

ಸದ್ಯ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್‌ ಶಜೀಬ್‌ನನ್ನು ನ್ಯಾಯಾಲಯವು 10 ದಿನಗಳವರೆಗೆ ಎನ್‌ಐಎ ಕಸ್ಟಡಿಗೆ ನೀಡಿದೆ.

ʼದಿ ರಾಮೇಶ್ವರಂ ಕೆಫೆʼ ಬಾಂಬ್‌ ಸ್ಟೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರನ್ನು ರಾಷ್ಟೀಯ ತನಿಖಾ ದಳದ ಸಿಬ್ಬಂದಿಗಳು ಪಶ್ವಿಮ ಬಂಗಾಳದಲ್ಲಿ ಬಂಧಿಸಿದ್ದು, ಬಾಂಬ್ ಇರಿಸಿ ಪರಾರಿಯಾಗಿದ್ದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ, ಪಶ್ಚಿಮ ಬಂಗಾಳದ ಹೋಟೆಲ್‌ವೊಂದರಲ್ಲಿ ಕೊಠಡಿ ಪಡೆಯಲು ನಕಲಿ ವಿಳಾಸ ನೀಡಿ ತಂಗಿದ್ದರು.

ಬಾಂಬರ್​​ನನ್ನು ಪತ್ತೆಹಚ್ಚಿದ್ದು ಹೇಗೆ?

ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್‌ ಪತ್ತೆಗೆ ಆತ ಧರಿಸಿದ್ದ ಕ್ಯಾಪ್‌ನ ಸಹಾಯದಿಂದ ಕಾರ್ಯಾಚಣೆ ನಡೆಸಲಾಗಿತ್ತು. ಮತೀನ್ ತಾಹಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುಸ್ಸಾವಿರ್ ಹುಸೇನ್ ಶಾಜಿಬ್​ನದ್ದೇ ಕೃತ್ಯ ಎಂಬುದು ದೃಢಪಟ್ಟಿತ್ತು. ನಂತರ ಆತನ ಪತ್ತೆಗೆ ಬಲೆ ಬೀಸಲಾಗಿತ್ತು. ಶಂಕಿತ ಭಯೋತ್ಪಾದಕ ಕರ್ನಾಟಕ ಮೂಲದವನಾಗಿದ್ದು, ಮಲೆನಾಡು ಪ್ರದೇಶದಲ್ಲಿ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಇದೆ.

ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಟೋಟ ನಡೆದಿದ್ದು, ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟಿದ್ದ ವ್ಯಕ್ತಿಯ ಪತ್ತೆಗೆ ನಂತರ ಶೋಧ ಕಾರ್ಯ ತೀವ್ರಗೊಳಿಸಲಾಗಿತ್ತು. ಬಳಿಕ ತನಿಖೆಯ ಹೊಣೆಯನ್ನು ಎನ್​ಐಎಗೆ ವಹಿಸಲಾಗಿತ್ತು.

Read More
Next Story