ಕಿರು ಜಲವಿದ್ಯುತ್ ಭ್ರಷ್ಟಾಚಾರ ಪ್ರಕರಣ: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿವಾಸದಲ್ಲಿ ಸಿಬಿಐ ಶೋಧ
ನಾನು ರೈತನ ಮಗ. ಇದಕ್ಕೆಲ್ಲ ಹೆದರುವುದಿಲ್ಲ- ಸತ್ಯಪಾಲ್
ಹೊಸದಿಲ್ಲಿ, ಫೆ.22 - 2,200 ಕೋಟಿ ರೂ. ವೆಚ್ಚದ ಕಿರು ಜಲವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಮನೆ ಆವರಣ ಮತ್ತು ಇತರ 29 ಸ್ಥಳಗಳಲ್ಲಿ ಸಿಬಿಐ ಗುರುವಾರ ಶೋಧ ನಡೆಸಿದೆ.
ದೆಹಲಿ, ಮುಂಬೈ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ 30 ಸ್ಥಳಗಳಲ್ಲಿ ಸುಮಾರು 100 ಅಧಿಕಾರಿಗಳು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರ್.ಕೆ. ಪುರಂ, ದ್ವಾರಕಾ ಮತ್ತು ದೆಹಲಿಯ ಏಷ್ಯನ್ ಗೇಮ್ಸ್ ವಿಲೇಜ್, ಗುರುಗ್ರಾಮ ಮತ್ತು ಬಾಗ್‌ಪತ್‌ನಲ್ಲಿರುವ ಮಲಿಕ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಹಾಗೂ ಚೀನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿ. ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿ ಮತ್ತು ಪಟೇಲ್ ಇಂಜಿನಿಯರಿಂಗ್ ಲಿಮಿಟೆಡ್‌ನ ಅಧಿಕಾರಿಗಳ ನಿವಾಸಗಳಲ್ಲಿ ಕೂಡ ಶೋಧ ಕಾರ್ಯ ನಡೆದಿದೆ.
'ಕಳೆದ 3-4 ದಿನಗಳಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದೇನೆ. ಹೀಗಿದ್ದರೂ ಸರಕಾರಿ ಏಜೆನ್ಸಿಗಳ ಮೂಲಕ ನನ್ನ ಮನೆ ಮೇಲೆ ಸರ್ವಾಧಿಕಾರಿ ದಾಳಿ ನಡೆಸುತ್ತಿದ್ದಾರೆ. ನನ್ನ ಚಾಲಕ ಮತ್ತು ಸಹಾಯಕನ ಮೇಲೆಯೂ ಹಲ್ಲೆ ನಡೆಸಿ, ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ನಾನು ರೈತನ ಮಗ. ಇಂಥ ದಾಳಿಗಳಿಗೆ ಹೆದರುವುದಿಲ್ಲʼ ಎಂದು ಮಲಿಕ್ ʻಎಕ್ಸ್ʼನಲ್ಲಿ ಬರೆದಿದ್ದಾರೆ.
2,200 ಕೋಟಿ ರೂ.ಗಳ ಮೊತ್ತದ ಕಿರು ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಸಿವಿಲ್ ಕಾಮಗಾರಿ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ನಡೆದಿದೆ. ಆಗಸ್ಟ್ 23, 2018 ರಿಂದ ಅಕ್ಟೋಬರ್ 30, 2019 ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಮಲಿಕ್, ಯೋಜನೆಗೆ ಸಂಬಂಧಿಸಿದ ಎರಡು ಕಡತಗಳಿಗೆ ಸಹಿ ಹಾಕಲು 300 ಕೋಟಿ ರೂ. ಕೇಳಿದ್ದರು ಎಂದು ಆರೋಪಿಸಲಾಗಿದೆ.
ಚೌಧರಿ ಮತ್ತು ಚೀನಾಬ್ ಕಣಿವೆ ಯೋಜನೆಯ ಅಧಿಕಾರಿಗಳಾದ ಎಂ.ಎಸ್.ಬಾಬು, ಎಂ.ಕೆ. ಮಿತ್ತಲ್ ಮತ್ತು ಅರುಣ್ ಕುಮಾರ್ ಮಿಶ್ರಾ ಮತ್ತು ಪಟೇಲ್ ಇಂಜಿನಿಯರಿಂಗ್ ಲಿಮಿಟೆಡ್‌ನ ವಿರುದ್ಧ ಪ್ರಕರಣ ದಾಖಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಐವರ ನಿವಾಸದಲ್ಲಿ ಸಿಬಿಐ ಶೋಧ ನಡೆಸಿತ್ತು.