ಮಾರಕ ಕೆಎಫ್ ಡಿ ಗೆ ಯುವತಿ ಬಲಿ: ಮಲೆನಾಡಿನಲ್ಲಿ ಮತ್ತೆ ಆತಂಕ
x

ಮಾರಕ ಕೆಎಫ್ ಡಿ ಗೆ ಯುವತಿ ಬಲಿ: ಮಲೆನಾಡಿನಲ್ಲಿ ಮತ್ತೆ ಆತಂಕ

ಮಾರಕ ವೈರಾಣು ಸೋಂಕು ಮಂಗನಕಾಯಿಲೆ, ಪ್ರತಿ ವರ್ಷ ಜೀವ ಬಲಿಯಾಗುತ್ತಿದ್ದರೂ, ಸರ್ಕಾರಗಳು ಸೂಕ್ತ ಲಸಿಕೆ ಕಂಡುಹಿಡಿಯಲು ಉದಾಸೀನ ತೋರುತ್ತಿವೆ !


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆ(ಕೆಎಫ್ ಡಿ) ಮತ್ತೆ ಉಲ್ಬಣಗೊಂಡಿದೆ. ಜಿಲ್ಲೆಯ ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಪ್ಪನಮನೆ ಗ್ರಾಮದ ೧೮ ವರ್ಷದ ಯುವತಿ ಸೋಮವಾರ ಸೋಂಕಿಗೆ ಬಲಿಯಾಗಿದ್ದಾರೆ.

ಬೇಸಿಗೆಯ ಹಂಗಾಮಿನಲ್ಲಿ ಕಾಡಿನ ಉಣುಗುಗಳ ಮೂಲಕ ಹರಡುವ ವೈರಾಣು ರೋಗವಾದ ಕೆಎಫ್ ಡಿ, ಮಲೆನಾಡಿನಾದ್ಯಂತ ಕಳೆದ ಏಳು ದಶಕಗಳಿಂದ ಸಾವು-ನೋವುಗಳಿಗೆ ಕಾರಣವಾಗಿದೆ.

ದಟ್ಟಕಾಡಿನ ನಡುವಿನ ಬಪ್ಪನಮನೆಯ ಕೃಷಿಕ ದಂಪತಿಯ ಮಗಳಾದ ಅನನ್ಯ ಈ ಬಾರಿ ರೋಗಕ್ಕೆ ಬಲಿಯಾದ ದುರ್ದೈವಿ. ಕಳೆದ ಹತ್ತು ದಿನಗಳ ಹಿಂದೆ ತೀವ್ರ ಜ್ವರದಿಂದ ಸಮೀಪದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಆಕೆಯನ್ನು, ನಂತರ ಹೊಸನಗರ ತಾಲೂಕು ಆಸ್ಪತ್ರೆಗೆ ಕಳಿಸಲಾಗಿತ್ತು. ಅಲ್ಲಿ ಪರೀಕ್ಷೆಯ ಬಳಿಕ ಆಕೆಗೆ ಮಂಗನ ಕಾಯಿಲೆ ಸೋಂಕು ತಗಲಿರುವುದು ದೃಢಪಟ್ಟಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಯೂ ಸೋಂಕು ಹತೋಟಿಗೆ ಬರದ ಹಿನ್ನೆಲೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ಕೆಎಫ್ ಡಿಗೆ ಸೂಕ್ತ ಚಿಕಿತ್ಸೆ ಲಭ್ಯವಿರದ ಹಿನ್ನೆಲೆಯಲ್ಲಿ ಜ.೫ರಂದು ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ಕಳಿಸಲಾಗಿತ್ತು.

ಮೂರು ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅನನ್ಯ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಉದಾಸೀನದಿಂದ ದುರಂತ: ಡಿಎಚ್ ಒ

ಕೆಎಫ್ ಡಿ ಸೋಂಕಿನಿಂದ ಯುವತಿಯ ಸಾವು ಸಂಭವಿಸಿರುವ ಬಗ್ಗೆ ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ(ಡಿಎಚ್ ಒ) ಡಾ ರಾಜೇಶ್ ಸುರಗಿಹಳ್ಳಿ, “ಈ ಬಾರಿ ಸೋಂಕಿನ ಪ್ರಕರಣ ತೀರಾ ಕಡಿಮೆ ಇದೆ. ಈವರೆಗೆ ೨೯೧೧ ಶಂಕಿತ ಪ್ರಕರಣಗಳ ಪರೀಕ್ಷೆ ನಡೆಸಿದ್ದು, ಕೇವಲ ಎರಡು ಪ್ರಕರಣದಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ಆ ಪೈಕಿ ನತದೃಷ್ಟ ಯುವತಿ ಕೂಡ ಒಬ್ಬಳು. ಆದರೆ, ಆಕೆಯ ಮನೆಯವರು ಸಕಾಲದಲ್ಲಿ ಆಕೆಯನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಉದಾಸೀನ ಮಾಡಿದರು. ಆಕೆ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ವೇಳೆಗಾಗಲೇ ಸೋಂಕು ಗಂಭೀರವಾಗಿತ್ತು. ಆದಾಗ್ಯೂ ನಾವು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕಳಿಸಿದ್ದೆವು. ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಸಾವು ಕಂಡಿದ್ದಾಳೆ” ಎಂದು ವಿವರಿಸಿದರು.

“ಜ್ವರ ಕಾಣಿಸಿಕೊಳ್ಳುವ ಮುನ್ನ ಅನನ್ಯ ಈಗಾಗಲೇ ಸೋಂಕು ಕಾಣಿಸಿಕೊಂಡಿರುವ ನೆರೆಯ ತೀರ್ಥಹಳ್ಳಿ ತಾಲೂಕಿನ ಭಾಗಕ್ಕೆ ಭೇಟಿ ನೀಡಿದ್ದಳು. ನಿರಂತರ ಜ್ವರ ಬಾಧೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಕಳೆದ ತಿಂಗಳು ತೀರ್ಥಹಳ್ಳಿ ತಾಲೂಕಿನ ಶೇಡ್ಗಾರು ಭಾಗದಲ್ಲಿ ಒಂದು ಪ್ರಕರಣ ದೃಢಪಟ್ಟಿತ್ತು. ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಬಾರಿ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಸೋಂಕಿತ ಪ್ರದೇಶಗಳಲ್ಲಿ ಕ್ಷಿಪ್ರ ಕಾರ್ಯಪಡೆ ರಚಿಸಿ ಸೋಂಕಿನ ಮೇಲೆ ನಿಗಾ ಇಡುವ ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.

ಮೂರು ವರ್ಷಗಳ ಬಳಿಕ ಮೊದಲ ಸಾವು

೨೦೧೮-೧೯ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಅಥವಾ ಕೆಎಫ್ ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್)ಗೆ ೨೬ ಮಂದಿ ಬಲಿಯಾಗಿದ್ದರು. ಆ ಬಾರಿ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ೨೦ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದರು. ತೀರ್ಥಹಳ್ಳಿ ತಾಲೂಕಿನಲ್ಲಿಯೂ ಸರಣಿ ಸಾವು ಸಂಭವಿಸಿದ್ದವು. ಆ ಸಾವುಗಳು ಇಡೀ ಮಲೆನಾಡಿನಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸೋಂಕು ವ್ಯಾಪಿಸಿರುವ ಪ್ರದೇಶದಿಂದ ಜನ ಆಸ್ತಿ-ಮನೆ ಬಿಟ್ಟು ಗುಳೇ ಹೋಗಿದ್ದರು. ಆದರೆ, ಬಳಿಕ ಸೋಂಕು ಹತೋಟಿಗೆ ಬಂದಿತ್ತು. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿರಲಿಲ್ಲ.

ಒಂದು ತಿಂಗಳಿಂದ ಸೋಂಕು

ಇದೀಗ ಕಳೆದ ಒಂದು ತಿಂಗಳಿನಿಂದ ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಈಗ ಹೊಸನಗರ ತಾಲೂಕಿನಲ್ಲಿ ಸೋಂಕಿಗೆ ಯುವತಿ ಬಲಿಯಾಗಿದ್ದಾಳೆ. ಮಲೆನಾಡಿನ ಶಿವಮೊಗ್ಗ, ಕಾರವಾರ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರತಿ ವರ್ಷ ನವೆಂಬರಿನಿಂದ ಮೇವರೆಗಿನ ಬೇಸಿಗೆ ಹಂಗಾಮಿನಲ್ಲಿ ಕೆಎಫ್ ಡಿ ಸೋಂಕು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಈ ಬಾರಿ ಸೋಂಕು ಜೊತೆಗೆ ಸಾವು ಕೂಡ ಸಂಭವಿಸಿದ್ದು ಗಂಭೀರ ಸಂಗತಿ. ಜೊತೆಗೆ ಕಳೆದ ವರ್ಷದಿಂದ ಸೋಂಕು ನಿಯಂತ್ರಣದ ಲಸಿಕೆ ನೀಡುವುದನ್ನು ನಿಲ್ಲಿಸಿರುವ ಹಿನ್ನೆಲೆಯಲ್ಲಿ, ಇದೀಗ ಪರಿಸ್ಥಿತಿ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.


ಅಪಾಯಕಾರಿ ವೈರಸ್ ವಿರುದ್ಧ ಬರಿಗೈ ಸಮರ

೧೯೫೭ರಲ್ಲೇ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯದಂಚಿನ ಜನರಲ್ಲಿ ಸೋಂಕು ಪತ್ತೆಯಾಗಿದ್ದರೂ, ಅದಕ್ಕೆ ಲಸಿಕೆ ನೀಡಲು ಆರಂಭಿಸಿದ್ದು ೧೯೯೦ರ ನಂತರವಷ್ಟೇ. ಕಳೆದ ಮೂವತ್ತು ವರ್ಷಗಳಿಂದ ಮಲೆನಾಡಿನ ಸೋಂಕು ಬಾಧಿತ ಪ್ರದೇಶದಲ್ಲಿ ಪ್ರತಿ ವರ್ಷ ಎರಡು ಲಸಿಕೆ ಮತ್ತು ಹೆಚ್ಚುವರಿಯಾಗಿ ಬೂಸ್ಟರ್ ಲಸಿಕೆ ನೀಡಲಾಗುತ್ತಿತ್ತು.

ಆದರೆ, ೨೦೦೪-೦೫ರ ಹೊತ್ತಿಗೆ ಆ ಲಸಿಕೆ ಕಾರ್ಯಕ್ಷಮತೆ ಪರೀಕ್ಷೆಯಲ್ಲಿ(ಪೊಟೆನ್ಸಿ ಪರೀಕ್ಷೆ) ವಿಫಲವಾಗಿದ್ದು, ಇಪ್ಪತ್ತು ವರ್ಷಗಳಿಂದ ನಾಮಕಾವಸ್ಥೆಗೆ ಲಸಿಕೆ ನೀಡಲಾಗುತ್ತಿತ್ತು. ಹಾಗಾಗಿ ಸಂಪೂರ್ಣ ಲಸಿಕೆ ಪಡೆದುಕೊಂಡವರು ಕೂಡ ಸೋಂಕಿಗೆ ಬಲಿಯಾದ ಪ್ರಕರಣಗಳು ಹೆಚ್ಚಿದ್ದವು. ಲಸಿಕೆ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಚೆನ್ನೈ ಮೂಲದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಎಪಿಡೆಮಿಯೋಲಜಿ ಮತ್ತಿತರ ಸಂಸ್ಥೆಗಳು ನಡೆಸಿದ ಅಧ್ಯಯನಗಳು ಖಚಿತಪಡಿಸಿದ್ದವು. ಆ ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದನೆ ಸ್ಥಗಿತಗೊಳಿಸುವಂತೆ ಸಿಡಿಎಸ್‍ಸಿಒ(ಸೆಂಟ್ರಲ್‌ ಡಗ್ಸ್‌ ಸ್ಟ್ಯಾಂಡರ್ಡ್‌ ಕಂಟ್ರೋಲರ್‌ ಆರ್ಗನೈಸೇಷನ್ ) ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಲಸಿಕೆ ಉತ್ಪಾದನೆ ಮತ್ತು ನೀಡುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಸದ್ಯ ರಾಜ್ಯ ಆರೋಗ್ಯ ಇಲಾಖೆ, ಅಪಾಯಕಾರಿ ವೈರಸ್ ವಿರುದ್ಧ ಕೇವಲ ಮುಂಜಾಗ್ರತಾ ಕ್ರಮ, ಕಾಡಿನಿಂದ ದೂರ ಇರುವುದು, ಉಣ್ಣೆ ನಾಶಕ ತೈಲ(ಡಿಇಪಿಎ ಆಯಿಲ್) ಬಳಕೆಯಂತಹ ಕ್ರಮಗಳ ಮೊರೆಹೋಗಿದೆ. ಇದು ಒಂದು ರೀತಿಯಲ್ಲಿ ದೈತ್ಯ ಸೇನೆಯ ಎದುರು ಬರಿಗೈ ಸಮರದಂತಾಗಿದೆ.

ಎರಡೂವರೆ ಲಕ್ಷ ಜನರ ಜೀವ ಅಪಾಯದಲ್ಲಿ!

ವಾಸ್ತವವಾಗಿ, ವೈರಸ್ ಸೋಂಕು ಆಗಿರುವ ಕೆಎಫ್ ಡಿಗೆ ಯಾವುದೇ ನಿರ್ದಿಷ್ಟ ಔಷಧಿ ಎಂಬುದಿಲ್ಲ. ಹಾಗಾಗಿ ಪ್ರತಿ ವರ್ಷ ಮಲೆನಾಡು ಮತ್ತು ಕರಾವಳಿ ಭಾಗದ ಎರಡೂವರೆ ಲಕ್ಷ ಮಂದಿಗೆ ಕೆಎಫ್ ಡಿ ಲಸಿಕೆ ನೀಡಲಾಗುತ್ತಿತ್ತು. ಜೊತೆಗೆ ಕಳೆದ ಒಂದು ದಶಕದಿಂದ ನೆರೆಯ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗೋವಾದಲ್ಲಿ ಕೂಡ ಸೋಂಕಿನ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಆ ರಾಜ್ಯಗಳೂ ವಾರ್ಷಿಕ ಲಸಿಕೆ ನೀಡುವ ಕ್ರಮ ಅನುಸರಿಸುತ್ತಿದ್ದವು. ಡೆಂಗೆಯಂತಹ ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ದುಪ್ಪಟ್ಟು ಅಪಾಯಕಾರಿಯಾಗಿರುವ ಕೆಎಫ್‌ ಡಿ(ಸೋಂಕಿತರ ಪೈಕಿ ಸಾವಿನ ಪ್ರಮಾಣ ಡೆಂಗೆಯಲ್ಲಿ ಶೇ.೨.೬ ಇದ್ದರೆ, ಕೆಎಫ್‌ ಡಿಯಲ್ಲಿ ಶೇ.೫ಕ್ಕಿಂತ ಅಧಿಕ!) ವಿರುದ್ಧ ಸೋಂಕು ನಿರೋಧಕ ಶಕ್ತಿ ವೃದ್ಧಿಸುವ ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವಲ್ಲಿ ಸರ್ಕಾರಗಳು ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ನಿರ್ಲಕ್ಷ್ಯ ವಹಿಸಿವೆ.

ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

ಕೆಎಫ್‌ ಡಿ ರೋಗದ ಕುರಿತು ಜನಜಾಗೃತಿ ಮತ್ತು ಆಡಳಿತದ ನಿರ್ಲಕ್ಷ್ಯದ ವಿರುದ್ಧ ಹೋರಾಟ ನಡೆಸುತ್ತಿರುವ ಶಿವಮೊಗ್ಗದ ʼಕೆಎಫ್‌ ಡಿ ಜನಜಾಗೃತಿ ವೇದಿಕೆʼ ಸಂಯೋಜಕರಾದ ವಕೀಲ ಕೆ ಪಿ ಶ್ರೀಪಾಲ್‌ ಅವರು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, "ಮಲೆನಾಡಿನ ಜನರ ವಿಷಯದಲ್ಲಿ ಸರ್ಕಾರಗಳ ಉದಾಸೀನ ಧೋರಣೆಗೆ ಇದು ಮತ್ತೊಂದು ನಿದರ್ಶನ. ಮಲೆನಾಡಿನಲ್ಲಿ ಕಾಡಂಚಿನ ಜನ ಕಾಡಿನೊಳಗೆ ಹೋಗದೇ ಇದ್ದರೂ , ಕಾಡ ನಡುವಿನ ದಾರಿಗಳಲ್ಲಿ ಓಡಾಡಿದರೂ ಅವರಿಗೆ ಉಣ್ಣೆಗಳು ಕಚ್ಚುವುದು ಸಾಮಾನ್ಯ. ಹಾಗಿರುವಾಗ ಉಣ್ಣೆಗಳ ಮೂಲಕ ಬರುವ ಈ ರೋಗಕ್ಕೆ ಸೂಕ್ತ ಲಸಿಕೆ ಕಂಡುಹಿಡಿದು, ಜನರ ಜೀವ ಉಳಿಸುವ ಪ್ರಯತ್ನ ಮಾಡುವ ಬದಲು ಕೇವಲ ಡಿಎಂಪಿ ತೈಲ ಕೊಟ್ಟು ಹಚ್ಚಿಕೊಂಡು ಮನೆಯಲ್ಲಿರಿ ಎನ್ನುವುದು ಹಾಸ್ಯಾಸ್ಪದ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸರ್ಕಾರ ಹೇಳುತ್ತದೆ ಎಂದು ಪ್ರತಿ ವರ್ಷ ಆರು ತಿಂಗಳುಗಟ್ಟಲೆ ಮನೆಯಲ್ಲೇ ಕೂತರೆ ಜನರ ಜೀವನ ನಡೆಯುವುದು ಹೇಗೆ? ಈ ಸರ್ಕಾರಕ್ಕೆ ಕನಿಷ್ಟ ವಿವೇಚನೆ ಇದ್ದರೆ, ಕೂಡಲೇ ಲಾಭನಷ್ಟದ ಲೆಕ್ಕ ನೋಡದೆ ರೋಗಕ್ಕೆ ಪರಿಣಾಮಕಾರಿ ಔಷಧ ಮತ್ತು ಲಸಿಕೆ ಕಂಡುಹಿಡಿಯಲು ವಿಶೇಷ ಅನುದಾನ ಘೋಷಿಸಬೇಕು ಮತ್ತು ಸೋಂಕು ಪೀಡಿತ ಪ್ರದೇಶಗಳ ತಾಲೂಕು ಆಸ್ಪತ್ರೆಗಳಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕು. ಮಲೆನಾಡಿನ ಜನರ ಜೀವದ ಜೊತೆ ಸರಸವಾಡುವ ಸರ್ಕಾರದ ಧೋರಣೆ ಅಮಾನುಷ” ಎಂದು ಹೇಳಿದರು.

ಕರೋನಾ ಅಬ್ಬರದ ನಡುವೆ ಕಳೆದ ಮೂರು ವರ್ಷಗಳಿಂದ ಮಲೆನಾಡು ಭಾಗದಲ್ಲಿ ತೆರೆಮರೆಗೆ ಸರಿದಿದ್ದ ಕೆಎಫ್ ಡಿ ಕುರಿತ ಆತಂಕ ಮತ್ತು ಸಾರ್ವಜನಿಕ ಚರ್ಚೆ ಇದೀಗ, ಯುವತಿಯ ಸಾವಿನ ಬಳಿಕ ಮತ್ತೆ ಭುಗಿಲೆದ್ದಿದೆ. ಇಡೀ ಮಲೆನಾಡು ಜನರ ಜೀವದ ವಿಷಯದಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಮತ್ತೆ ಚರ್ಚೆಗೆ ಈಡಾಗಿದೆ.

Read More
Next Story