ಅಮೆರಿಕದಲ್ಲಿ ಕೇರಳದ ನಾಲ್ವರ ಸಾವು
x
ಆನಂದ್ ಹೆನ್ರಿ (42), ಅವರ ಪತ್ನಿ ಆಲಿಸ್ ಪ್ರಿಯಾಂಕಾ (40) ಮತ್ತು ಅವಳಿ ಮಕ್ಕಳಾದ ನೋಹಾ ಮತ್ತು ನೈಥಾನ್(4) ಅವರ ಶವ ಮಂಗಳವಾರ ಪತ್ತೆಯಾಗಿದೆ.

ಅಮೆರಿಕದಲ್ಲಿ ಕೇರಳದ ನಾಲ್ವರ ಸಾವು


ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೇರಳದ ಕೊಲ್ಲಂನ ಕುಟುಂಬದ ನಾಲ್ಕು ಸದಸ್ಯರ ಸಾವು ಸಂಭವನೀಯ ಕೊಲೆ-ಆತ್ಮಹತ್ಯೆ ಪ್ರಕರಣ ಎಂದು ಸ್ಯಾನ್ ಮಾಟಿಯೊ ಪೊಲೀಸರು ಹೇಳಿದ್ದಾರೆ.

ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಆನಂದ್ ಹೆನ್ರಿ (42) ಮತ್ತು ಅವರ ಪತ್ನಿ ಆಲಿಸ್ ಪ್ರಿಯಾಂಕಾ (40) ಸ್ನಾನದ ಕೋಣೆಯಲ್ಲಿ ಗುಂಡೇಟಿನ ಗಾಯದೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ. ಆನಂದ್ ತನ್ನನ್ನು ಕೊಂದುಕೊಳ್ಳುವ ಮೊದಲು ಆಲಿಸ್‌ಗೆ ಗುಂಡು ಹಾರಿಸಿರಬಹುದು.

ʻಮಕ್ಕಳು ಮಲಗುವ ಕೋಣೆಯಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿನ ಕಾರಣ ಕುರಿತು ತನಿಖೆ ನಡೆಯುತ್ತಿದೆʼ ಎಂದು ಹೇಳಿದೆ. ಮಕ್ಕಳು ಅನಿಲ ಸೋರಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಈಮೊದಲು ಶಂಕಿಸಲಾಗಿತ್ತು. ಆದರೆ, ಅವರು ವಿಷ ಸೇವಿಸಿರಬಹುದು ಎನ್ನಲಾಗುತ್ತಿದೆ. ಮಂಗಳವಾರ (ಫೆಬ್ರವರಿ 13) ಬೆಳಗ್ಗೆ ಪೊಲೀಸರು ತಪಾಸಣೆಗೆ ಹೋದಾಗ ಆನಂದ್, ಆಲಿಸ್, ನೋಹಾ ಮತ್ತು ನೈಥಾನ್ ಅವರ ಶವ 2.1 ದಶಲಕ್ಷ ಡಾಲರ್ ಮೌಲ್ಯದ ಭವನದಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಆತ್ಮಹತ್ಯೆ ಚೀಟಿ ಪತ್ತೆಯಾಗಿಲ್ಲ.

ಆನಂದ್ ಮತ್ತು ಆಲಿಸ್ ಯಾರು?: ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆನಂದ್, ಕೊಲ್ಲಂ ಫಾತಿಮಾ ಮಾತಾ ನ್ಯಾಷನಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಹೆನ್ರಿ ಗಾರ್ಜ್ ಅವರ ಪುತ್ರ. ಮೆಟಾ ಮತ್ತು ಗೂಗಲ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದ ಅವರು, ಕಳೆದ ವರ್ಷ ಲಾಜಿಟ್ಸ್ ಎಂಬ ಕೃತಕ ಬುದ್ಧಿಮತ್ತೆ ಕಂಪನಿಯನ್ನು ಸಹ-ಸ್ಥಾಪಿಸಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಆನಂದ್ ಮತ್ತು ಆಲಿಸ್ ಇಬ್ಬರೂ ಕೊಲ್ಲಂನ ಟಿಕೆಎಂ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಅಧ್ಯಯನ ಮಾಡಿದರು. ಆದರೆ, ಆನಂದ್ ಕಾರ್ನೆಗಿ ಮೆಲ್ಲಾನ್ ವಿಶ್ವವಿದ್ಯಾನಿಲಯ ಮತ್ತು ಸಿಂಗಾಪುರ್ ಮ್ಯಾನೇಜ್‌ಮೆಂಟ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಇದೆ. ಆಲಿಸ್ ಹಿರಿಯ ಐಟಿ ವಿಶ್ಲೇಷಕಿ.

ಏನು ನಡೆದಿರಬಹುದು?: ಆನಂದ್ ಮತ್ತು ಆಲಿಸ್ ಒಂಬತ್ತು ವರ್ಷದಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಎರಡು ವರ್ಷದಿಂದ ಸ್ಯಾನ್ ಮ್ಯಾಟಿಯೊ ಕೌಂಟಿಯಲ್ಲಿರುವ ಮನೆಯಲ್ಲಿ ನೆಲೆಸಿದ್ದಾರೆ. ಈಮೊದಲು ಅವರು ನ್ಯೂಜೆರ್ಸಿಯಲ್ಲಿ ವಾಸಿಸುತ್ತಿದ್ದರು. ಆಲಿಸ್ ಅವರ ತಾಯಿ ಜೂಲಿಯೆಟ್ ಕ್ಯಾಲಿಫೋರ್ನಿಯಾ ದಲ್ಲಿ ಕುಟುಂಬವನ್ನು ಭೇಟಿ ಮಾಡಿದ್ದು, ಘಟನೆ ನಡೆದ ಹಿಂದಿನ ದಿನ ಫೆಬ್ರವರಿ 11 ರಂದು ವಾಪಸಾಗಿದ್ದರು ಎಂದು ಆನ್ ಮನೋರಮಾ ವರದಿ ತಿಳಿಸಿದೆ. ಆನಂದ್ ಡಿಸೆಂಬರ್ 2016 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಲವು ಕಾರಣಗಳಿಂದ ದಂಪತಿ ಪ್ರತ್ಯೇಕಗೊಂಡಿರಲಿಲ್ಲ.

ಮಂಗಳವಾರ ಕೂಡ ಅಧಿಕಾರಿಗಳು ಪರಿಶೀಲನೆಗೆಂದು ಮನೆಗೆ ಹೋಗಿದ್ದರು. ಆದರೆ, ಯಾರು ಮತ್ತ ಏಕೆ ತಪಾಸಣೆಗೆ ಮನವಿ ಮಾಡಿದ್ದರು ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

Read More
Next Story