ಬೆಳಗಾವಿ: ಅಪಘಾತದಲ್ಲಿ ಆರು ಮಂದಿ ಸಾವು
x

ಬೆಳಗಾವಿ: ಅಪಘಾತದಲ್ಲಿ ಆರು ಮಂದಿ ಸಾವು


ಬೆಳಗಾವಿ,ಫೆ. 23- ಇಲ್ಲಿಂದ ಸುಮಾರು 90 ಕಿಮೀ ದೂರದಲ್ಲಿರುವ ದತ್ತ್ ಜಾಂಬೋಟಿ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ಸಂಭವಿಸಿದ ಈ ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಮತ್ತೊಬ್ಬರು ಆಸ್ಪತ್ರೆಯಲ್ಲಿ ‌ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ದ್ವಿಚಕ್ರ ವಾಹನ ಕ್ಕೆ ಡಿಕ್ಕಿ ಹೊಡೆದ ಕಾರಿಗೆ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಿಂತಿದ್ದ ವಾಹನದ ಬಳಿ ಇದ್ದ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಅವರಲ್ಲಿ ಒಬ್ಬರು ಹಣಮಂತ ಮಾಳಪ್ಪ ಮಾಳಗೋಳ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಏಕನಾಥ ಭೀಮಪ್ಪ ಪಡತಾರಿ (22), ಮಲ್ಲಿಕಾರ್ಜುನ ರಾಮಪ್ಪ ಮರಾಠೆ (16), ಆಕಾಶ ರಾಮಪ್ಪ ಮರಾಠೆ (14), ಲಕ್ಷ್ಮೀ ರಾಮಪ್ಪ ಮರಾಠೆ (19) ಮತ್ತು ನಾಗಪ್ಪ ಲಕ್ಷ್ಮಣ ಯಾದವಣ್ಣನವರ್ (48) ಮೃತರು. ಮುರಗೋಡ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 25 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಸಂಚಾರ ನಿಯಮ ಪಾಲನೆ ಮಾಡಿ, ಅತಿವೇಗದ ಚಾಲನೆ ತಪ್ಪಿಸಿ ಜೀವ ಉಳಿಸಿ ಎಂದು ಮನವಿ ಮಾಡಿದರು.

Read More
Next Story