
ಬಿಬಿಎಂಪಿ ತಿದ್ದುಪಡಿ ಮಸೂದೆ: ಆಸ್ತಿ ತೆರಿಗೆ ಮೇಲಿನ ದಂಡ ಶೇ 50 ರಷ್ಟು ಇಳಿಕೆ
ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಮೇಲಿನ ದಂಡವನ್ನು ಶೇ 50 ರಷ್ಟು ಕಡಿತಗೊಳಿಸುವ ಬಿಬಿಎಂಪಿ ತಿದ್ದುಪಡಿ ಮಸೂದೆ 2024 ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿದೆ.
ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಮೇಲಿನ ದಂಡವನ್ನು ಶೇ 50 ರಷ್ಟು ಕಡಿತಗೊಳಿಸುವ ಬಿಬಿಎಂಪಿ ತಿದ್ದುಪಡಿ ಮಸೂದೆ - 2024 ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್ ದಂಡದ ಮೊತ್ತವನ್ನು ಅರ್ಧದಷ್ಟು ಕಡಿಮೆಗೊಳಿಸಲಾಗಿದೆ. ಬೆಂಗಳೂರಿಗರಿಗೆ 2,700 ಕೋಟಿ ರೂ. ಉಳಿತಾಯವಾಗಿದೆ. ಈ ಮಹತ್ವದ ತಿದ್ದುಪಡಿಯಿಂದ ಬೆಂಗಳೂರು ನಗರದಲ್ಲಿ 5.51 ಲಕ್ಷ ತೆರಿಗೆದಾರರು, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಐದರಿಂದ ಏಳು ಲಕ್ಷ ಜನರು ಮತ್ತು ಮೂರು ಲಕ್ಷ ಭಾಗಶಃ ಆಸ್ತಿ ತೆರಿಗೆದಾರರು ಸೇರಿದಂತೆ ಸುಮಾರು 13 ರಿಂದ 15 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದರು.
ತಿದ್ದುಪಡಿ ಮಸೂದೆಯು ಬಡವರಿಗೆ ವಿಶೇಷ ರಿಯಾಯಿತಿ ನೀಡಿದೆ. ಸರ್ಕಾರಿ ವಸತಿ ಕಟ್ಟಡಗಳು ಮತ್ತು ಕೊಳೆಗೇರಿಗಳಲ್ಲಿನ ಕಟ್ಟಡಗಳಿಗೆ ಆಸ್ತಿ ತೆರಿಗೆ ದಂಡದಿಂದ ವಿನಾಯಿತಿ ನೀಡಲಾಗಿದೆ. ಸ್ವಂತ ಬಳಕೆಗಾಗಿ ಇರುವ 1,000 ಚದರ ಅಡಿವರೆಗಿನ ಕಟ್ಟಡಗಳಿಗೆ ಆಸ್ತಿ ತೆರಿಗೆ ದಂಡದಿಂದ ವಿನಾಯಿತಿ ನೀಡಲಾಗಿದೆ.
ತಿದ್ದುಪಡಿ ಮಸೂದೆಯ ಅಡಿಯಲ್ಲಿ, ವಸತಿ ಮತ್ತು ಮಿಶ್ರ-ಬಳಕೆಯ ಆಸ್ತಿ ಮಾಲೀಕರು ಡೀಫಾಲ್ಟ್ ಅವಧಿಯನ್ನು ಲೆಕ್ಕಿಸದೆ ಗರಿಷ್ಠ ಐದು ವರ್ಷಗಳ ಅವಧಿಗೆ ಮಾತ್ರ ಆಸ್ತಿ ತೆರಿಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಐದು ವರ್ಷ ಮೀರಿದ ಬಾಕಿಗಳಿಗೆ ಬಡ್ಡಿ ಮನ್ನಾ ಮಾಡಲಾಗಿದೆ.
ಇದು ತೆರಿಗೆದಾರರ ಸ್ನೇಹಿ ತಿದ್ದುಪಡಿಯಾಗಿದ್ದು, ಸರ್ಕಾರಕ್ಕೆ ಹೊರೆಯಾಗಿದ್ದರೂ ಸಾಮಾನ್ಯ ಜನರಿಗೆ ಸಹಾಯ ಮಾಡಲು ನಾವು ಈ ಮಸೂದೆಯನ್ನು ತಂದಿದ್ದೇವೆ ಎಂದು ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರವು ದಂಡವನ್ನು ದ್ವಿಗುಣಗೊಳಿಸಿದ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದರಿಂದ ಬೆಂಗಳೂರಿನ ಆಸ್ತಿ ಮಾಲೀಕರು ಭಾರಿ ದಂಡವನ್ನು ಪಾವತಿಸಬೇಕಾಯಿತು ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಹೊಸ ತಿದ್ದುಪಡಿಯು ಆಸ್ತಿ ಮಾಲೀಕರ ಮೇಲಿನ ದಂಡದ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಅವರು ಹೇಳಿದರು.