ನಾಮಫಲಕದಲ್ಲಿ ಕನ್ನಡ | ಶೇ.90ರಷ್ಟು ಉದ್ದಿಮೆಗಳಿಂದ ಕನ್ನಡಕ್ಕೆ ಆದ್ಯತೆ
x
ಕನ್ನಡ ನಾಮಫಲಕ

ನಾಮಫಲಕದಲ್ಲಿ ಕನ್ನಡ | ಶೇ.90ರಷ್ಟು ಉದ್ದಿಮೆಗಳಿಂದ ಕನ್ನಡಕ್ಕೆ ಆದ್ಯತೆ

ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆಗೆ ಇನ್ನೂ ಎರಡು ವಾರ ಗಡುವು


ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎನ್ನುವ ಆಗ್ರಹಕ್ಕೆ ಶೇ.90ರಷ್ಟು ವಾಣಿಜ್ಯ ಉದ್ದಿಮೆಗಳು ಮನ್ನಣೆ ನೀಡಿವೆ.

ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳು ಅಳವಡಿಸುವ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದು ಕನ್ನಡಿಗರು ಹಾಗೂ ಕನ್ನಡ ಪರ ಸಂಘಟನೆಗಳಿಂದ ಆಗ್ರಹ ವ್ಯಕ್ತವಾಗಿತ್ತು.

ಹಲವು ವರ್ಷಗಳಿಂದ ಈ ಹೋರಾಟ ನಡೆಯುತ್ತಿದ್ದು, ಇತ್ತೀಚೆಗೆ ವಾಣಿಜ್ಯ ಉದ್ದಿಮೆಗಳಲ್ಲಿ ಶೇ.60ರಷ್ಟು ಕನ್ನಡ ಬಳಸಬೇಕು ಎನ್ನುವ ಒತ್ತಾಯಕ್ಕೆ ರಾಜ್ಯ ಸರ್ಕಾರದಿಂದ ಕಾನೂನಿನ ಬೆಂಬಲವೂ ಸಿಕ್ಕಿತ್ತು.

ಇದರ ನಡುವೆಯೇ ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಭಾಷೆ ಬಳಕೆ ಮಾಡುವುದಕ್ಕೆ ಸರ್ಕಾರ ಮತ್ತೆ ಎರಡು ವಾರಗಳ ಗಡುವನ್ನು (ಮಾರ್ಚ್‌ 13ರ ವರೆಗೆ) ನೀಡಿದೆ.

ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಭಾಷೆ ಬಳಕೆ ಮಾಡದೆ ಇರುವವರ ಮೇಲೆ ಫೆಬ್ರವರಿ 29ರಿಂದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಫೆಬ್ರವರಿ 28ರಂದು ಎಚ್ಚರಿಕೆ ನೀಡಿತ್ತು. ಆದರೆ, ಬಿಬಿಎಂಪಿಯ ನಿರ್ಧಾರಕ್ಕೆ ರಾಜ್ಯ ಸರ್ಕಾರ ಫೆಬ್ರುವರಿ 29ರಂದೇ ಬ್ರೇಕ್‌ ಹಾಕಿತ್ತು. ಮತ್ತೆ ಎರಡು ವಾರಗಳ ಗಡುವು ನೀಡಲಾಗಿದ್ದು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಇದನ್ನು ಸ್ವಾಗತಿಸಿದೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹೇಳುವುದೇನು ?

ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಹಾಗೂ ಅನುಷ್ಠಾನ ಬಗ್ಗೆ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿ)ಯ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಅವರು, ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳುವುದಕ್ಕೆ ವಾಣಿಜ್ಯ ಉದ್ದಿಮೆಗಳು ಉತ್ತಮ ಸಹಕಾರ ನೀಡುತ್ತಿವೆ. ಈಗಾಗಲೇ ಶೇ.90ರಷ್ಟು ಉದ್ದಿಮೆಗಳು ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಂಡಿವೆ. ಇನ್ನುಳಿದ ಶೇ.10ರಷ್ಟು ವಾಣಿಜ್ಯ ಉದ್ದಿಮೆಗಳು ಸಹ ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಎಲ್ಲ ಉದ್ದಿಮೆಗಳು ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಅಳವಡಿಸಿಕೊಳ್ಳಲಿವೆ. ಎರಡು ವಾರದಲ್ಲಿ ಎಲ್ಲರೂ ಕನ್ನಡ ನಾಮಫಲಕ ಅಳವಡಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಎರಡು ವಾರಗಳ ಗಡುವು: ಡಿಸಿಎಂ ಡಿಕೆಶಿ

ಈ ವಿಚಾರದ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಬೆಂಗಳೂರಿನ ಎಲ್ಲ ಅಂಗಡಿ ಹಾಗೂ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡುವುದಕ್ಕೆ ಹೆಚ್ಚಿನ ಸಮಯದ ಅವಶ್ಯಕತೆ ಇರುವುದನ್ನು ಪರಿಗಣಿಸಿ, ಇನ್ನೂ ಎರಡು ವಾರ ಗಡುವು ವಿಸ್ತರಿಸಲಾಗಿದೆ ಎಂದಿದ್ದಾರೆ.

ಇನ್ನು ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ. ನಮ್ಮ ಹೃದಯದ ಭಾಷೆಯನ್ನು ಕಾಪಾಡುವುದು ಮುಖ್ಯ. ಹೀಗಾಗಿ 2 ವಾರಗಳ ನಂತರ ಎಲ್ಲರೂ ಕಾನೂನು ಪಾಲನೆ ಮಾಡಲಿದ್ದಾರೆ ಎಂದು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.

ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದ ಬಿಬಿಎಂಪಿ

ಬೆಂಗಳೂರಿನಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಅಳವಡಿಸದವರ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿತ್ತು.

ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳು ಸೇರಿದಂತೆ ಪ್ರಮುಖ ಉದ್ದಿಮೆಗಳು ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಲಾಗಿದೆಯೇ ಅಥವಾ ಕನ್ನಡ ಭಾಷೆಯನ್ನು ನಾಮಫಲಕದ ಮೇಲ್ಭಾಗದಲ್ಲಿ ಪ್ರದರ್ಶಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ವಿಶೇಷ ರಾಜ್ಯ ಪತ್ರಿಕೆ ಅಧಿಸೂಚನಾ ಪತ್ರದಲ್ಲಿ ಸೂಚಿಸಲಾಗಿದೆ. ಇದರ ಅನ್ವಯ ಕ್ರಮ ವಹಿಸಿರುವುದಾಗಿ ಬಿಬಿಎಂಪಿ ಹೇಳಿತ್ತು.

ವಾಣಿಜ್ಯ ಉದ್ದಿಮೆಗಳಿಗೆ ಸೂಚನೆ

ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. 02-02-2024 ಮತ್ತು 12-02-2024 ರಂದು ನಡೆದ ವಿಶೇಷ ಸಭೆಯಲ್ಲಿ ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಾಣಿಜ್ಯ ಉದ್ದಿಮೆಗಳಲ್ಲಿ ಫೆಬ್ರವರಿ 28ರ ಒಳಗಾಗಿ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡ ಭಾಷೆ ಬಳಸುವಂತೆ ವಾಣಿಜ್ಯ ಉದ್ದಿಮೆಗಳಿಗೆ ನಿರ್ದೇಶನ ನೀಡಲಾಗಿತ್ತು.

55,187 ಉದ್ದಿಮೆಗಳಿಗೆ ನೋಟಿಸ್‌ ಜಾರಿ

ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ 60ರಷ್ಟು ಕಡ್ಡಾಯ ಕನ್ನಡ ಬಳಕೆ ಮಾಡಬೇಕು ಎಂದು ಆದೇಶ ಮಾಡಿದ್ದರೂ, ಹಲವು ಉದ್ದಿಮೆಗಳು ಈ ನಿಯಮವನ್ನು ಪಾಲಿಸಿರಲಿಲ್ಲ. ಹೀಗಾಗಿ, ಬೆಂಗಳೂರಿನ 55,187 ವಾಣಿಜ್ಯ ಮಳಿಗೆ ಹಾಗೂ ಉದ್ದಿಮೆಗಳಿಗೆ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಇಲ್ಲಿಯ ವರೆಗೆ 52,134 ವಾಣಿಜ್ಯ ಉದ್ದಿಮೆಗಳು ಅವರ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿಕೊಂಡಿವೆ. ಇನ್ನುಳಿದ 3044 ವಾಣಿಜ್ಯ ಉದ್ದಿಮೆಗಳ ಮೇಲೆ ಕ್ರಮಕ್ಕೆ ಬಿಬಿಎಂಪಿ ಮುಂದಾಗಿತ್ತು.

ಲೈಸೆನ್ಸ್‌ ರದ್ದು, ಬೀಗ ಮುದ್ರೆಯ ಎಚ್ಚರಿಕೆ

ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದೆ ಇರುವ ಉದ್ದಿಮೆಗಳಿಗೆ ಫೆಬ್ರವರಿ 29ರಿಂದ ಲೈಸೆನ್ಸ್‌ ರದ್ದು ಹಾಗೂ ಅಂತಹ ವಾಣಿಜ್ಯ ಬೀಗಮುದ್ರೆ(Sealdown) ಮಾಡುವುದಾಗಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಹೇಳಿದ್ದರು. ಆದರೆ, ಸರ್ಕಾರದ ಆದೇಶದ ನಂತರ ಈ ಸುತ್ತೋಲೆಯನ್ನು ಹಿಂಪಡೆಯಲಾಯಿತು.

ಬಿಜೆಪಿಯಿಂದ ಹೋರಾಟದ ಎಚ್ಚರಿಕೆ

ಕನ್ನಡ ಕಡ್ಡಾಯ ಅನುಷ್ಠಾನ ನಿಯಮ ಕೇವಲ ಕಡತಕ್ಕೆ ಸೀಮಿತವಾಗಿದ್ದು, ಪ್ರಚಾರದ ವಸ್ತುವಾಗಿದೆ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ ಮೇಲಿದ್ದು ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಆಗ್ರಹಿಸಿದ್ದಾರೆ.

ಕನ್ನಡಕ್ಕೆ ದ್ರೋಹ ಬಗೆದರೆ, ಕನ್ನಡದ ಬಗ್ಗೆ ಅಸಡ್ಡೆ ತೋರಿದರೆ, ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಆರ್‌. ಅಶೋಕ್‌ ಎಚ್ಚರಿಸಿದ್ದಾರೆ.

Read More
Next Story