Waqf Board Asset Issue | ಹೊನವಾಡದ ವಕ್ಫ್ ಆಸ್ತಿ ಬರೀ 11 ಎಕರೆ; ಸಚಿವ ಎಂ.ಬಿ.ಪಾಟೀಲ ಸ್ಪಷ್ಟನೆ
ವಕ್ಫ್ ಆಸ್ತಿಯಲ್ಲಿ 10 ಎಕರೆ 14 ಗುಂಟೆಯಲ್ಲಿ ಖಬರಸ್ತಾನವಿದೆ. ಉಳಿದ 24 ಗುಂಟೆಯಲ್ಲಿ ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ. ಇದನ್ನು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ
ವಕ್ಫ್ ಆಸ್ತಿ ಕುರಿತು ಗೆಜೆಟ್ ತಪ್ಪಿನಿಂದ ಸೃಷ್ಟಿಯಾದ ಗೊಂದಲಕ್ಕೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು ಸ್ಪಷ್ಟನೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ 1,200 ಎಕರೆ ವಕ್ಫ್ ಮಂಡಳಿಗೆ ಸೇರಿದೆ ಎಂಬ ಗೊಂದಲ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿತ್ತು.
ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಸಚಿವರು, ಹೊನವಾಡ ಗ್ರಾಮದಲ್ಲಿ 11 ಎಕರೆ ಮಾತ್ರ ವಕ್ಫ್ ಗೆ ಸೇರಿದೆ. ಉಳಿದ ಜಾಗ ಗ್ರಾಮದ ರೈತರಿಗೆ ಸೇರಿದೆ ಎಂದು ಹೇಳಿದ್ದಾರೆ. ವಕ್ಫ್ ಆಸ್ತಿಯಲ್ಲಿ 10 ಎಕರೆ 14 ಗುಂಟೆಯಲ್ಲಿ ಖಬರಸ್ತಾನವಿದೆ. ಉಳಿದ 24 ಗುಂಟೆಯಲ್ಲಿ ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ. ಇದನ್ನು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲೆಯ ಉಸ್ತುವಾರಿಯೂ ಆಗಿರುವ ಸಚಿವ ಎಂ.ಬಿ. ಪಾಟೀಲ ಅಭಯ ನೀಡಿದರು.
`ವಿಜಯಪುರ ಜಿಲ್ಲೆಯಲ್ಲಿ 1974, 1978 ಮತ್ತು 2016ರಲ್ಲಿ ವಕ್ಫ್ ಆಸ್ತಿಗಳ ಅಧಿಸೂಚನೆ ಹೊರಬಿದ್ದಿದೆ. ವಕ್ಫ್ ಆಸ್ತಿ ಇರುವುದು ವಿಜಯಪುರ ನಗರದ ವ್ಯಾಪ್ತಿಯ ಮಹಾಲಬಾಗಾಯತದಲ್ಲಿ. ಆದರೆ 1974ರ ಗೆಜೆಟ್ ನಲ್ಲಿ ಮಹಾಲಬಾಗಾಯತದ ಪಕ್ಕ ಬ್ರ್ಯಾಕೆಟ್ ನಲ್ಲಿ ಹೊನವಾಡ ಎಂದು ಬರೆದು ಬಿಟ್ಟಿದ್ದಾರೆ. ಈ ವಿಷಯವನ್ನು ರೈತರು ನನ್ನ ಗಮನಕ್ಕೆ ತಂದ ಕೂಡಲೇ ಅ.19ರಂದು ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರನ್ನು ಕರೆದು, ಸಭೆ ನಡೆಸಿ, ಸೂಕ್ತ ನಿರ್ದೇಶನ ಕೊಟ್ಟಿದ್ದೇನೆ. ಈ ವಿಚಾರದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಾಗಲಿ, ಯತ್ನಾಳ್ ಅವರಾಗಲಿ ರಾಜಕೀಯ ಮಾಡುವುದು ಬೇಕಾಗಿಲ್ಲ. ರೈತರ ಒಂದಿಂಚು ಕೂಡ ವಕ್ಫ್ ಆಸ್ತಿ ಆಗಲು ನಾವು ಬಿಡುವುದಿಲ್ಲʼ ಎಂದರು.
ಹೊನವಾಡ ಗ್ರಾಮವು ನಾನು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲೇ ಇದೆ. ಇಲ್ಲಿನ ಹತ್ತು ಸರ್ವೇ ನಂಬರುಗಳಲ್ಲಿರುವ 11 ಎಕರೆ ಮಾತ್ರ ವಕ್ಫ್ ಆಸ್ತಿಯಷ್ಟೆ. 1974ರ ಗೆಜೆಟ್ ನಲ್ಲಿನ ತಪ್ಪುಗಳನ್ನು ವಕ್ಫ್ ಮಂಡಳಿಯೇ 1977ರಲ್ಲಿ ತಿದ್ದುಪಡಿ ಮಾಡಿ, ಬ್ರ್ಯಾಟ್ ನಲ್ಲಿದ್ದ ಹೊನವಾಡ ಹೆಸರನ್ನು ತೆಗೆದಿದೆ ಎಂದು ಸ್ಪಷ್ಟಪಡಿಸಿದರು.
ಯಾವುದು ನಿಯಮಾನುಸಾರ ವಕ್ಫ್ ಆಸ್ತಿಯೋ ಅದಷ್ಟೇ ಅವರಿಗೆ ಸೇರುತ್ತದೆ. ರೈತರಾಗಲಿ, ಖಾಸಗಿ ಮಾಲೀಕರಾಗಲಿ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಈ ಸಂಬಂಧ ನಾನು ಅಧಿಕಾರಿಗಳೊಂದಿಗೆ ಸದ್ಯದಲ್ಲೇ ಮತ್ತೊಂದು ಸಭೆ ನಡೆಸುತ್ತೇನೆ ಎಂದು ಹೇಳಿದರು.
ಡಿಸಿ ಭೂಬಾಲನ್ ವಿಡಿಯೊ ಸ್ಪಷ್ಟನೆ
ಜಿಲ್ಲೆಯ ವಕ್ಫ್ ಆಸ್ತಿಗಳ ಪರಿಷ್ಕರಣೆಗೆ ಸಂಬಂಧಿಸಿ ತಪ್ಪು ಮಾಹಿತಿ ರವಾನೆಯಾಗುತ್ತಿದ್ದು, ಯಾವುದೇ ವದಂತಿಗಳಿಗೆ ರೈತರು ಹಾಗೂ ಆಸ್ತಿ ಮಾಲೀಕರು ಕಿವಿಗೊಡಬಾರದು ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದಾರೆ.
ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇರುವುದಿಲ್ಲ. ಯಾವುದೇ ಖಾಸಗಿ ವ್ಯಕ್ತಿ, ಖಾಸಗಿ ಸಂಸ್ಥೆ, ಸರ್ಕಾರಿ ಸಂಸ್ಥೆಯವರು ಸೂಕ್ತ ದಾಖಲಾತಿಗಳನ್ನು ಕಂದಾಯ ಇಲಾಖೆಗೆ ನೀಡಬೇಕು. ಆಗ ಸಂಬಂಧಿಸಿದವರಿಗೆ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಾರೆ. ನಂತರ ಹಕ್ಕನ್ನು ಖಚಿತಪಡಿಸಿಕೊಂಡು ದಾಖಲಾತಿ ಪರಿಷ್ಕರಿಸುವುದು ಕಂದಾಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ಸದ್ಯ ಹೊನವಾಡ ಗ್ರಾಮದ ರೈತರ ಜಮೀನುಗಳು ವಕ್ಫ್ ಗೆ ಸೇರಿದೆ ಎಂಬುದು ಕೇವಲ ವದಂತಿ ಎಂದು ಹೇಳಿದ್ದಾರೆ.
1974ರಲ್ಲಿ ವಕ್ಫ್ ಮಂಡಳಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿತ್ತು. ವಕ್ಫ್ ಆಸ್ತಿಗಳ ಕುರಿತು ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ್‌ನವರು ಕಂದಾಯ ಇಲಾಖೆಗೆ ಪರಿಷ್ಕರಣೆ ಪಟ್ಟಿ ನೀಡಿದ್ದಾರೆ. ದಾಖಲಾತಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಗಾಗಿ ಮಾತ್ರ ರೈತರು, ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ಯಾರೂ ಕೂಡ ನೋಟಿಸ್‌ಗೆ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಧೈರ್ಯ ತುಂಬಿದ್ದಾರೆ.
ಒಂದು ವೇಳೆ ತಹಶೀಲ್ದಾರ್ ಅವರು ನೋಟಿಸ್ ನೀಡದೇ ಪರಿಷ್ಕರಣೆ ಮಾಡಿದರೆ ರೈತರು ಹಾಗೂ ಮಾಲೀಕರು ಉಪವಿಭಾಗಾಧಿಕಾರಿ, ನಂತರ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ನೋಟಿಸ್ ಬಂದ ಕೂಡಲೇ ಯಾರ ಹಕ್ಕೂ ತಕ್ಷಣವೇ ಬದಲಾವಣೆಯಾಗಲ್ಲ. ಸೂಕ್ತ ದಾಖಲೆಗಳನ್ನು ರೈತರು ಅಧಿಕಾರಿಗಳಿಗೆ ನೀಡಬೇಕು ಎಂದಿದ್ದಾರೆ.
ಏನಿದು ವಕ್ಫ್ ವಿವಾದ?
೧೯೭೪ರಲ್ಲಿ ವಕ್ಫ್ ಮಂಡಳಿ ಅಧಿಸೂಚನೆ ಪ್ರಕಾರ ಇರುವ ಆಸ್ತಿಗಳನ್ನು ಕಂದಾಯ ಇಲಾಖೆ ದಾಖಲೆಗಳಿಗೆ ಸೇರಿಸಲು ಇಂದೀಕರಣ(ಪರಿಷ್ಕರಣೆ) ಮಾಡಲಾಗುತ್ತಿದೆ. ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗದ ಗ್ರಾಮಗಳ ರೈತರ ಸಾವಿರಾರು ಎಕರೆ ಜಮೀನನ್ನು ವಕ್ಫ್ ಆಸ್ತಿಯೆಂದು ಮಂಡಳಿಗೆ ವರ್ಗಾಯಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ರೈತಪರ ಸಂಘಟನೆಗಳು ಹೋರಾಟಕ್ಕಿಳಿದಿದ್ದವು.
ಕಂದಾಯ ಇಲಾಖೆಯಿಂದ ಸಂಬಂಧ ನೋಟಿಸ್ ನೀಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ತಿಂಗಳು ಜಿಲ್ಲೆಗೆ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್‌ಖಾನ್ ಭೇಟಿ ನೀಡಿದ ನಂತರ ವಕ್ಫ್ ಅದಾಲತ್ ನಡೆಸಿದ ನಂತರ ರೈತರಿಗೆ ನೋಟಿಸ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಹೊನವಾಡದಲ್ಲಿ 89 ರೈತರಿಗೆ ವಕ್ಪ್ ಆಸ್ತಿ ಎಂದು ನೋಟಿಸ್ ಬಂದಿದೆ. ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ, ಇಂಗಳೇಶ್ವರ ಗ್ರಾಮದ ಕೆಲ ರೈತರಿಗೆ ನಿಮ್ಮದು ವಕ್ಫ್ ಆಸ್ತಿ ಎಂದು ಅಧಿಕಾರಿಗಳಿ ಹೇಳಿದ್ದಾರೆ ಎಂದು ಆರೋಪಿಸಿ ರೈತ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ವಿಜಯಪುರದ ರೈತ ಮುಖಂಡರು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿಯಾಗಿ, ರೈತರ ಜಮೀನನ್ನು ವಕ್ಫ್ ಮಂಡಳಿಗೆ ವರ್ಗಾಯಿಸುವ ಹುನ್ನಾರ ನಡೆದಿದೆ ಎಂದು ಅಳಲು ತೋಡಿಕೊಂಡಿದ್ದರು. ಬಸನಗೌಡ ಪಾಟೀಲ ಯತ್ನಾಳ ಎಕ್ಸ್‌ನಲ್ಲಿ ರೈತರಿಗೆ ಬಂದಿರುವ ನೋಟಿಸ್ ಹಾಕಿ, ಯಾರಪ್ಪನ ಆಸ್ತಿ ಅಂತ ಬಂದಿದೀರಾ ಎಂದು ಜಮೀರ್ ವಿರುದ್ಧ ಹರಿಹಾಯ್ದಿದ್ದರು. ಇದು ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ವಕ್ಪ್ ಕಾಯ್ದೆ ರದ್ದತಿಗೆ ಪ್ರಧಾನಿ ಮೋದಿಗೆ ಒತ್ತಾಯ
2013 ರಲ್ಲಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಗಳಾಗಿದ್ದಾಗ ವಕ್ಪ್ ಮಂಡಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಕಾನೂನು ಜಾರಿ ಮಾಡಿದ್ದರು. ವಕ್ಪ್ ಬೋರ್ಡ್ ನಿಂದ ಸಮಸ್ಯೆಗೀಡಾದರೆ ಬಾಧಿತರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡದಂತೆ ನಿಯಮ ಜಾರಿಯಾಗಿತ್ತು. ವಕ್ಪ್ ಟ್ರಿಬ್ಯೂನಲ್ ಮುಂದೆ ಸಮಸ್ಯೆ ತೆಗೆದುಕೊಂಡು ಹೋಗಬೇಕಾಯಿತು. ಆದರೆ ಅಲ್ಲಿ ವಕ್ಪ್ ಪರವಾಗಿಯೇ ತೀರ್ಪು ಬರುತ್ತಿತ್ತು. ಇದು ಜನರಿಗೆ ಮಾಡಿದ ಮಹಾ ಮೋಸ ಎಂದು ಪ್ರತಿಭಟನಾಕಾರರು ಆರೋಪ ಮಾಡಿದ್ದರು. ಈಗ ವಕ್ಪ್ ಕಾಯ್ದೆಯನ್ನೇ ರದ್ದು ಮಾಡುವಂತೆ ರೈತರು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.